ಕಣಿವೆ, ಏ. 7: ವಿಶ್ವ ಆರೋಗ್ಯದ ದಿನವಾದ ಏಪ್ರಿಲ್ ಏಳು, ಕೊಡಗು ಜಿಲ್ಲೆಯ ಪಾಲಿಗೆ ಕೊರೊನಾವನ್ನು ಮೆಟ್ಟಿ ಗೆದ್ದಂತಹ ದಿನ ಎಂದೇ ಹೇಳಬಹುದೇನೋ...! ಏಕೆಂದರೆ ಕೊರೊನಾ ಪಾಸಿಟಿವ್ ಇದ್ದಂತಹ ವ್ಯಕ್ತಿಯದ್ದು ನೆಗೆಟಿವ್ ಬಂದ ಬಳಿಕ ಇಡೀ ಜಿಲ್ಲೆ ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಪಾಸಿಟಿವ್ ಮುಕ್ತ ಜಿಲ್ಲೆಯಾಗಿದೆ.

ಇಡೀ ಪ್ರಪಂಚವನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮನುಕುಲದ ಮೇಲೆ ಅಟ್ಟಹಾಸ ತೋರುತ್ತಿರುವ ಮಹಾಮಾರಿ ಕೊರೊನಾ ಸಾಗರದಾಚೆಯಿಂದ ಕೊಡಗು ಜಿಲ್ಲೆಗೂ ಕಾಲಿಟ್ಟ ಸಂದರ್ಭ ಇಡೀ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದರು. ಹಾಗೆಯೇ ಜಿಲ್ಲಾಡಳಿತ ಕೂಡ ಮೈಕೊಡವಿ ನಿಂತು ಸಾಂಕ್ರಾಮಿಕ ಕ್ರಿಮಿಯ ವಿರುದ್ಧ ಜನಜಾಗೃತಿ ಮೂಡಿಸಿತು. ಭೂರಮೆಯ ಚೆಲುವ ನಾಡಿನ ಸೇವೆಯಲ್ಲಿರುವ ಜಿಲ್ಲೆಯ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಡಾ. ಸುಮನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಹಗಲಿರುಳೆನ್ನದೇ ಜಿಲ್ಲೆಯ ಜನರ ಆರೋಗ್ಯದ ಹೊಣೆಯ ಟೊಂಕಕಟ್ಟಿ ನಿಂತರು. ಹಾಗೆಯೇ ಜಿಲ್ಲೆಯಲ್ಲಿರುವ ಅಷ್ಟೂ ವೈದ್ಯ ಸಿಬ್ಬಂದಿಗಳು ಕೊರೊನಾ ವೈರಸ್ ಎಂಬ ಕ್ರಿಮಿಯನ್ನು ಅಟ್ಟಲು ಆಸ್ಪತ್ರೆಯ ಒಳಗೆ ಯುದ್ಧಕ್ಕೆ ಇಳಿದರೆ, ಅಷ್ಟೂ ಪೊಲೀಸರು ತಮ್ಮ ತಮ್ಮ ಮನೆಗಳನ್ನು ಮರೆತು ಕರ್ತವ್ಯದ ಕರೆಗೆ ಓಗೊಟ್ಟು ರಸ್ತೆಗೆ ಧುಮುಕಿದರು.

ಅಷ್ಟೇ ಅಲ್ಲ ತಮಗೆ ಜಿಲ್ಲಾಧಿಕಾರಿ ಸರ್ಕಾರದ ಮೂಲಕ ರವಾನಿಸಿದ ಸೇವೆಗಳನ್ನು ಶಿರಸಾವಹಿಸಿ ಪಾಲಿಸಿದ್ದರ ಸಾಮೂಹಿಕ ಫಲ ಕೊರೊನಾ ಪಾಸಿಟಿವ್ ಇದ್ದದ್ದು ನೆಗೆಟಿವ್ ಅಂತಾ ಆಗಿದೆ. ಹಾಗೆಯೇ ಕೊರೊನಾ ಜಿಲ್ಲೆಯೊಳಗೆ ಬೇರೆ ಯಾರೊಬ್ಬ ಅಮಾಯಕರಿಗೂ ಇದುವರೆಗೂ ಹರಡದ ಹಾಗೆ ಜಿಲ್ಲೆ ಹೈ ಅಲರ್ಟ್ ಆಗಿ ಕರ್ತವ್ಯದಲ್ಲಿದೆ. ಕೊರೊನಾ ಬಾಧಿತ ಆರಂಭದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯಕ್ಕೆ ಹೆದರಿ ಕೆಲವೊಂದು ವೈದ್ಯ ಸಿಬ್ಬಂದಿಗಳು ಮನೆಯಲ್ಲೆ ಕುಳಿತು ಜಿಲ್ಲಾಡಳಿತಕ್ಕೆ ಸಡ್ಡು ಹೊಡೆವ ಯತ್ನ ಮಾಡಿದರೂ ಕೂಡ, ಶಿಸ್ತಿನ ಸಿಪಾಯಿಗಳು ಮೆಟ್ಟಿದ ಈ ಕೊಡಗು ಜಿಲ್ಲೆಯ ನೆಲದ ಆಸ್ಪತ್ರೆಗಳಲ್ಲಿ ಎಲ್ಲಾ ವೈದ್ಯ ಸಿಬ್ಬಂದಿಗಳು ಯಾವುದಕ್ಕೂ ಹೆದರದೇ ಕರ್ತವ್ಯವೇ ಶ್ರೇಷ್ಟ ಎಂದರಿತು ಮಾಡಿದ್ದರ ಪ್ರಾಮಾಣಿಕ ಸೇವೆ ಇಂದು ಕೊಡಗು ಜಿಲ್ಲೆಗೆ ಇಂತಹ ಅತೀಸೂಕ್ಷ್ಮ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿಯೇ ಒಳ್ಳೆಯ ಹೆಸರು ಬರಲು ಸಾಧ್ಯವಾಗಿದೆ.

ಜಿಲ್ಲೆಯ ಗಡಿಯಾಚೆಯ ಸುತ್ತಲೂ ಕೊರೊನಾ ನರ್ತನ ಒಂದಷ್ಟು ಹೆಚ್ಚು ಇದ್ದರೂ ಕೂಡ ಅದ್ಯಾವುದಕ್ಕೂ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳಲಿಲ್ಲ. ವಿಶೇಷವಾಗಿ ಜನಪ್ರತಿನಿಧಿಗಳು, ವಿಚಾರವಂತರು ಹಾಗೂ ಸಂಘ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿದ್ದುದು ಕೊರೊನಾವನ್ನು ಹತ್ತಿರಕ್ಕೂ ಸುಳಿಯದಂತೆ ನೋಡಿಕೊಳ್ಳುವಲ್ಲಿ ಸಾಧ್ಯವಾಗಿದೆ ಎಂದೇ ವ್ಯಾಖ್ಯಾನಿಸಬಹುದಾಗಿದೆ. ಏನೇ ಆಗಲೀ ಭಾರತ ಹಾಗೂ ಕರ್ನಾಟಕ ಏನೇ ಲಾಕ್‍ಡೌನ್ ಆದರೂ ಕೂಡ ಕೊಡಗು ಕೊರೊನಾಕ್ಕೆ ಲಾಕ್ ಆಗಲು ಯಾರೊಬ್ಬರು ಬಿಡದಂತೆ ಸರ್ಕಾರದ ಆದೇಶಗಳನ್ನು ಪಾಲಿಸುವ ಮೂಲಕ ಯೋಧರ ಮತ್ತು ಯೋಗ್ಯರ ಜಿಲ್ಲೆಯನ್ನು ಒಂದು ಹೆಜ್ಜೆ ಮುಂದೆ ಹೋಗಿ ಮತ್ತಷ್ಟು ಆರೋಗ್ಯವಂತರ ಜಿಲ್ಲೆಯಾಗಿಸುವಲ್ಲಿ ಜಿಲ್ಲೆಯ ಪ್ರತಿಯೊಬ್ಬರು ಶ್ರಮಿಸಬೇಕಿದೆ ಅಷ್ಟೆ. ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡದಂತೆ ಮನೆಯಲ್ಲೇ ಇರುವ ಮೂಲಕ ನಾಡಿಗೆ ಎರಗಿರುವ ಪೆಡಂಭೂತವನ್ನು ಹೊಡೆದೋಡಿಸಲು ಕೈಜೋಡಿಸಬೇಕಿದೆ.

ಕೊಡಗು ಜಿಲ್ಲೆಯೇನೋ ಸದ್ಯದ ಸ್ಥಿತಿಯಲ್ಲಿ ಸೇಫ್ ಆದರೂ ಕೂಡ ಜಿಲ್ಲೆಯ ಸುತ್ತಲೂ ಪೆಡಂಭೂತಗಳು ಜಿಲ್ಲೆಯ ಜನರನ್ನು ಹೊಕ್ಕಲು ಕಾದು ಕುಳಿತಿವೆ. ಏನಾದರೂ ಜಿಲ್ಲಾ ಗಡಿಗಳು ತೆರವಾದರೆ ನಮ್ಮ ಕೊಡಗು ಜಿಲ್ಲೆಗೂ ಮೈಸೂರು ಹಾಗೂ ಬೆಂಗಳೂರಿನ ಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿ ಜಂಟಿಯಾಗಿ ಮಾಡುತ್ತಿರುವ ಕೊರೊನಾ ವಿರುದ್ಧದ ಹೋರಾಟಕ್ಕೆ ನಾವೆಲ್ಲ ಮನೆಯಲ್ಲಿ ಇನ್ನುಳಿದ ಕೆಲವೇ ದಿನಗಳಾದರೂ ಲಾಕ್ ಆಗಿ ಲಾಕ್‍ಡೌನ್ ಆದೇಶ ಪಾಲಿಸೋಣ. ಕೊರೊನಾಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಮನೆಯೊಳಗೆ ಇರೋದೇ ಏಕಮಾತ್ರ ಮದ್ದು. ಅದನ್ನು ನಾವೆಲ್ಲಾ ಪಾಲಿಸೋಣ. ಎಲ್ಲರೂ ಆರೋಗ್ಯದಿಂದ ಇರೋಣ. ನಮ್ಮಗಳ ಆರೋಗ್ಯಕ್ಕೆ ಹೋರಾಡುತ್ತಿರುವ ಎಲ್ಲಾ ಆರೋಗ್ಯ ಹಾಗೂ ರಕ್ಷಾ ಸೇನಾನಿಗಳಿಗೆ ಮತ್ತೊಮ್ಮೆ ಸಲಾಂ ಹೇಳೋಣ...

-ಕೆ.ಎಸ್. ಮೂರ್ತಿ