ಕೊಡಗಿನಲ್ಲಿ ಇದೀಗ ‘ಕೊರೊನಾ ಕಟ್ಟಿಂಗ್’ ಹೆಸರಿನಲ್ಲಿ ಜಿಲ್ಲೆಯಲ್ಲಿ ಹೊಸ ಹೇರ್ ಕಟ್ಟಿಂಗ್ ಹವಾ ಆರಂಭವಾಗಿದೆ.

ಲಾಕ್ ಡೌನ್ ಇರುವುದರಿಂದ ಕ್ಷೌರದಂಗಡಿ ತೆರಯಲು ಅನುಮತಿ ಇಲ್ಲ. ಬಹುತೇಕ ಜನರ ಕೂದಲು ಕಣ್ಣ ಹತ್ತಿರ ಬಂದು ಕಣ್ಣೇ ಕಾಣದ ಸ್ಥಿತಿಯಲ್ಲಿ ಇದ್ದರೆ ಇನ್ನೂ ಕೆಲವರ ಗಡ್ಡವನ್ನು ನೋಡಿದರೆ ಯಾರೆಂಬುದೇ ತಿಳಿಯಲ್ಲ. ಹೇರ್ ಕಟ್ಟಿಂಗ್ ಅಂಗಡಿ ತೆರೆಯಲು ಅನುಮತಿ ಇಲ್ಲದ ಕಾರಣ, ಇದೀಗ ಜನರು ತಾವೇ ಸ್ವತಃ ಹೇರ್ ಕಟ್ಟಿಂಗ್ ಮಾಡುವುದರ ಮೂಲಕ, ನ್ಯೂ ಲುಕ್ ಹೇರ್ ಸ್ಟೈಲ್‍ನಲ್ಲಿ ಮಿಂಚುತ್ತಿದ್ದಾರೆ.

ಕೊರೊನಾ ಕಟ್ಟಿಂಗ್ ಚಾಲೆಂಜ್: ಕಂಡಕರೆ ಗ್ರಾಮದ ಯುವಕರು ಎಲ್ಲರೂ ಸೇರಿ ಕೊರೊನಾ ಕಟ್ಟಿಂಗ್ ಚಾಲೆಂಜ್ ಮಾಡಿ, ಗ್ರಾಮದ ಬಹುತೇಕ ಯುವಕರು ತಮ್ಮ ತಲೆ ಕೂದಲನ್ನು ಸಂಪೂರ್ಣ ಬೋಳಿಸಿ ಇದೀಗ (ಮೊಟ್ಟೆ) ‘ಕೊರೊನಾ ಕಟ್ಟಿಂಗ್’ ಹೊಸ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ.

ಯಾರಾದರೂ ಒಬ್ಬರು ತಮ್ಮ ಕೂದಲನ್ನು ಸಂಪೂರ್ಣ ಬೋಳಿಸಿ (ಮೊಟ್ಟೆ) ಕೊಂಡು ಕೊರೊನಾ ಕಟ್ಟಿಂಗ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದರೆ, ಆತನ ಸ್ನೇಹಿತನೂ ಕೂಡ ತಲೆ ಕೂದಲು ಬೋಳಿಸಿ, ಕೊರೊನಾ ಕಟ್ಟಿಂಗ್ ಚಾಲೆಂಜ್ ಮಾಡುತ್ತಿದ್ದಾರೆ.

ವಿವಿಧ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಳ್ಳುತ್ತಿದ್ದ ಯುವ ಪಡೆಗಳು, ಇದೀಗ ವಿವಿಧ ಮೋಡೆಲ್ ಕೊರೊನಾ ಕಟ್ಟಿಂಗ್ ಮಾಡಿ ಮಿಂಚುತ್ತಿದ್ದಾರೆ.

ಅಲ್ಲದೇ ಗಡ್ಡವನ್ನು ಸಂಪೂರ್ಣ ಶೇವ್ ಮಾಡಿ ನ್ಯೂ ಲುಕ್‍ನಲ್ಲಿ ಫೋಸ್ ಕೊಡುತ್ತಾ, ಫೇಸ್‍ಬುಕ್, ಇನ್ಸ್ಟ್ರಾಗ್ರಾಮ್ ಹಾಗೂ ವ್ಯಾಟ್ಸ್‍ಅಪ್‍ನಲ್ಲಿ ಸ್ಟೇಟಸ್ ಹಾಕಿ ಹೊಸ ಲುಕ್‍ನಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ.

ಆದರೆ ಕೊರೊನಾ ಕಟ್ಟಿಂಗ್‍ನಲ್ಲಿ ಫೇಮಸ್ ಆಗಿ ಟಾಪ್ ಟ್ರೆಂಡಿಂಗ್ ನಲ್ಲಿ ಇರೋದು ತಲೆ ಕೂದಲು ಸಂಪೂರ್ಣ ಬೋಳಿಸಿ, ಗಡ್ಡವನ್ನು ಬಿಡುವುದು ಎಲ್ಲೆಡೆ ಫೇಮಸ್ ಆಗಿದೆ.

ಕೆಲವು ಕಡೆಗಳಲ್ಲಿ ಕನ್ನಡಿ ಮುಂದೆ ನಿಂತು ಹೇರ್ ಕಟ್ಟಿಂಗ್ ಮಾಡಿದರೆ, ಇನ್ನೂ ಬಹುತೇಕ ಗ್ರಾಮಗಳಲ್ಲಿ ಗ್ರಾಮದ ಯುವಕರು ಎಲ್ಲರೂ ಸೇರಿ ಪರಸ್ಪರ ತಮ್ಮ ಸ್ನೇಹಿತರಿಗೆ ಹೇರ್ ಕಟ್ಟಿಂಗ್ ಮಾಡಿ ಟೈಮ್‍ಪಾಸ್ ಮಾಡುತ್ತಿದ್ದಾರೆ. ಇದೀಗ ಕಾಣಿಸಿಕೊಂಡಿರುವ ತಲೆ ಬೋಳಿಸುವ ಕೊರೊನಾ ಕಟ್ಟಿಂಗ್ ಎಲ್ಲೆಡೆ ಫೇಮಸ್ ಆಗಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ