ಮಡಿಕೇರಿ, ಏ. 7: ಕೊರೊನಾ ವೈರಸ್ ಭೀತಿಯ ನಡುವೆ ಬಿಸಿಲ ಧಗೆಯೂ ಏರಿ ತಾಪಮಾನ ಅಧಿಕವಾಗಿ ಕಾದು ಬಿಸಿಯಾಗಿದ್ದ ಇಳೆಗೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ತಂಪನ್ನೆರೆ ಯುತ್ತಿದೆ. ನಿನ್ನೆ ಸಂಜೆ ಕಳೆದು ರಾತ್ರಿಯಾಗುತ್ತಿದ್ದಂತೆ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು; ಭುವಿ ತಂಪಾಗಿದೆ. ಪ್ರಮುಖ ಬೆಳೆ ಕಾಫಿಯನ್ನೇ ನೆಚ್ಚಿಕೊಂಡಿರುವ ಬೆಳೆಗಾರರ ಮುಖ ಕಾಫಿ ಹೂವಿನಂತೆ ಸಂತಸದಿಂದ ಅರಳಿದರೆ; ಈಗಾಗಲೇ ತೋಟಕ್ಕೆ ನೀರು ಹಾಯಿಸಿ ಇನ್ನೇನು ಮೊಗ್ಗರಳಿ ಹೂವಾಗಬೇಕಿದ್ದ ತೋಟದ ಬೆಳೆಗಾರರಲ್ಲಿ ಒಂದಿಷ್ಟು ನಿರಾಸೆ ಮೂಡಿದೆ. ಆದರೂ ಮಳೆಯಿಂದ ತಂಪಾದ ವಾತಾವರಣ ಮೂಡಿರುವದು ನಡು ರಾತ್ರಿ ಯಲ್ಲಿಯೂ ಬೆವರುತ್ತಾ ನಿದ್ದೆ ಗೆಡುತ್ತಿದ್ದವರಿಗೆ ಸಮಾಧಾನ ಮೂಡಿಸಿದೆ.

ಕಳೆದ ರಾತ್ರಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಮಡಿಕೇರಿಗೆ ಅಂದಾಜು ಅರ್ಧ ಇಂಚುಗಳಷ್ಟು ಮಳೆಯಾಗಿದ್ದು; ಆಸುಪಾಸಿನ ಮಕ್ಕಂದೂರು, ಮರಗೋಡು, ಮೂರ್ನಾಡು, ಗಾಳಿಬೀಡು, ನಾಪೋಕ್ಲು ಮುಂತಾದೆಡೆ ಕೂಡ ಮಳೆಯಾಗಿರುವ ಬಗ್ಗೆ ತಿಳಿದು ಬಂದಿದೆ.

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ನಿನ್ನೆ ರಾತ್ರಿ ಸಾಧಾರಣ ಮಳೆ ಸುರಿಯಿತು.

ಗುಡುಗು ಮಿಂಚಿನೊಂದಿಗೆ ಪ್ರಾರಂಭವಾದ ಮಳೆ ಕೆಲವೆಡೆ ಬೆಳಗ್ಗಿನವರೆಗೂ ಸುರಿಯಿತು. ಕಾಫಿ ತೋಟಗಳಲ್ಲಿ ಹೂ ಮೂಡುವ ಸಮಯವಾದ್ದರಿಂದ ಕೆಲವರು ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುತ್ತಿದ್ದರು. ಇಂತಹ ಸಂದರ್ಭದಲ್ಲೇ ಅಲ್ಪ ಮಳೆಯಾಗಿರುವದು ಕೆಲ ಬೆಳೆಗಾರರಿಗೆ ಸಮಾಧಾನ ತಂದಿದ್ದರೆ, ಹಲವಷ್ಟು ಬೆಳೆಗಾರರಲ್ಲಿ ಇನ್ನೂ ಹೆಚ್ಚಿನ ಮಳೆಯ ನಿರೀಕ್ಷೆಯಿತ್ತು.

ಸೂರ್ಲಬ್ಬಿ ವ್ಯಾಪ್ತಿಯಲ್ಲಿ ದಾಖಲೆ ಯಂತೆ 4 ಇಂಚಿನಷ್ಟು ಮಳೆ ಯಾಗಿರುವ ಬಗ್ಗೆ ಸ್ಥಳೀಯ ನಿವಾಸಿ ನಾಣಿಯಪ್ಪ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ಪ್ರಾರಂಭವಾಗಿದ್ದ ಮಳೆ, ಬೆಳಗ್ಗಿನವರೆಗೂ ಸುರಿಯಿತು. ತರಕಾರಿ ಮಾಡಿದ್ದ ಗದ್ದೆಗಳಲ್ಲಿ ನೀರು ನಿಂತಿದ್ದು, ಬಿಸಿಲು ಬಂದರೆ ಒಣಗುವ ಆತಂಕ ಎದುರಾಗಿದೆ. ಶೀತ ಗದ್ದೆಗಳಲ್ಲಿರುವ ತರಕಾರಿ ನಷ್ಟವಾಗುವ ಸಂಭವ ಇದೆ ಎಂದು ನಾಣಿಯಪ್ಪ ತಿಳಿಸಿದ್ದಾರೆ.

ಇನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 11.6 ಮಿ.ಮೀ. ಮಳೆಯಾಯಿತು. ವಾತಾವರಣದಲ್ಲಿ ತಂಪು ಮೂಡಿದ್ದು, ಪರಿಸರದಿಂದ ಧೂಳು ಮಾಯವಾಯಿತು. ಐಗೂರು ವ್ಯಾಪ್ತಿಯಲ್ಲಿ 40 ಸೆಂಟ್ಸ್, ಗೌಡಳ್ಳಿಗೆ 30 ಸೆಂಟ್ಸ್, ಶಾಂತಳ್ಳಿಗೆ 40 ಸೆಂಟ್ಸ್, ಗಣಗೂರಿಗೆ 10 ಸೆಂಟ್ಸ್, ನೇರುಗಳಲೆ ವ್ಯಾಪ್ತಿಯಲ್ಲಿ 5 ಸೆಂಟ್ಸ್ ಮಳೆ ಯಾಗಿರುವ ಬಗ್ಗೆ ವರದಿಯಾಗಿದೆ.

ಕುಶಾಲನಗರ: ಕುಶಾಲನಗರ, ಕೊಪ್ಪ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ರಾತ್ರಿ ಮಳೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಗಡಿ ತಪಾಸಣಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಂಡಗಳಿಗೆ ನಿರಂತರ ಸುರಿದ ಮಳೆಯಿಂದ ರಕ್ಷಣೆ ಪಡೆಯಲು ಪರದಾಡುವ ಪರಿಸ್ಥಿತಿ ಉಂಟಾಯಿತು.

ಶ್ರೀಮಂಗಲ: ಸೋಮವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ದಕ್ಷಿಣ ಕೊಡಗಿನ ಬಹುತೇಕ ಕಡೆ ಮಳೆಯಾಗಿದೆ.

ಬಾಡಗರಕೇರಿ-ಪೊರಾಡು ಗ್ರಾಮಕ್ಕೆ 15 ಸೆಂಟ್, ನಾಲ್ಕೇರಿ 1 ಇಂಚು, ಮಲ್ಲೂರು 1.30, ಬೀರುಗ 45, ಬಲ್ಯಮುಂಡೂರು 47, ಬೆಸಗೂರು 1.10 ಇಂಚು, ಬೆಕ್ಕೆಸೊಡ್ಲೂರು 72, ಬಿಳೂರು 30, ಹರಿಹರ 40, ತೆರಾಲು 1.35, ಕುಮಟೂರು -ಕಾಕೂರು, ಪೇರ್ಮಾಡ್ ವ್ಯಾಪ್ತಿಗೆ 35, ಹುದಿಕೇರಿ-ಕೋಣಗೇರಿ 55, ಬಾಳೆಲೆ - ದೇವನೂರು 1.24 ಇಂಚು, ನಿಡುಗುಂಬ, ಕೊಟ್ಟಗೇರಿ 1.10 ಇಂಚು, ತೂಚಮಕೇರಿ 66, ಮಂಚಳ್ಳಿ 70 ,ತಾವಳಗೇರಿ 25 ಸೆಂಟ್, ಹುದಿಕೇರಿ ಟೌನ್ 35 ಸೆಂಟ್, ಮಂಚಳ್ಳಿ 70 ಸೆಂಟ್, ಶ್ರೀಮಂಗಲ 19 ಸೆಂಟ್, ಟಿ ಶೆಟ್ಟಿಗೇರಿ 22 ಸೆಂಟ್, ಕೆಂಬುಕೊಲ್ಲಿ ಕುಟ್ಟ 20 ಸೆಂಟ್, ಹಳ್ಳಿಗಟ್ಟು 43 ಸೆಂಟ್, ಮಳೆಯಾಗಿದೆ.

ಗೋಣಿಕೊಪ್ಪ ವರದಿ: ದಕ್ಷಿಣ ಕೊಡಗಿನಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ಸುರಿದ ಮಳೆ ನಿದ್ದೆಗೆಡಿಸಿದೆ. ಬಹುತೇಕ ಗ್ರಾಮಗಳಲ್ಲಿ ಮೊದಲ ಬಾರಿಗೆ ಮಳೆಯ ಸಿಂಚನವಾಗಿ ರುವುದು ವಿಶೇಷ.

ಗೋಣಿಕೊಪ್ಪ ಕೃಷಿ ಹವಾಮಾನ ಘಟಕ ಮಾಹಿತಿಯಂತೆ ಮಂಗಳವಾರ ಮುಂಜಾನೆವರೆಗೆ ಕೊಡಗು ಜಿಲ್ಲೆಯ ಶೇ. 75 ಭಾಗಗಳಲ್ಲಿ ಮಳೆಯಾಗಿದೆ. 5 ಸೆಂಟ್‍ಗಳಿಂದ 1.7 ಇಂಚು (ಬಾಳೆಲೆ ವ್ಯಾಪ್ತಿಗೆ) ಮಳೆಯಾಗಿದೆ. ತಾ. 9ರ ವರೆಗೂ ಮಳೆ ಮುಂದುವರಿ ಯಲಿದ್ದು, ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಘಟಕದ ತಜ್ಞರಾದ ಸಹನಾ ಹೆಗ್ಡೆ ಮಾಹಿತಿ ನೀಡಿದ್ದಾರೆ.

ಕೂಡಿಗೆ : ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ ಶಿರಂಗಾಲ, ಹೆಬ್ಬಾಲೆ, ಬಾಣವಾರ ವ್ಯಾಪ್ತಿಯ ಪ್ರದೇಶಗಳಲ್ಲಿ ಕಳೆದ ರಾತ್ರಿ ಗುಡುಗು ಸಹಿತ ಮಳೆಯಾಗಿದೆ.