ಮಡಿಕೇರಿ, ಏ. 7: ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿರುವ ಕೊರೊನಾ (ಕೋವಿಡ್) ವೈರಸ್ ಕೊಡಗು ಮೂಲದ ವ್ಯಕ್ತಿಯಲ್ಲೂ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು, ಕೊರೊನಾ ಸೋಂಕು ತಗುಲಿರುವ ಬಗ್ಗೆ ಶಂಕೆ ಇರುವ ವ್ಯಕ್ತಿಗಳನ್ನು ಉಪಚರಿಸಲಾಗುತಿತ್ತು. ಈ ನಡುವೆ ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಕಠಿಣ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ಚಿಕಿತ್ಸೆಗೆ ಮಾತ್ರ ಮೀಸಲಿಟ್ಟು, ಕೊರೊನಾ ಹೊರತುಪಡಿಸಿದ ಆರೋಗ್ಯ ಚಿಕಿತ್ಸೆಗಳನ್ನು ನೀಡುವ ನಿಟ್ಟಿನಲ್ಲಿ ಅಶ್ವಿನಿ ಆಸ್ಪತ್ರೆಯನ್ನು ವಶಕ್ಕೆ ತೆಗೆದುಕೊಂಡ ಜಿಲ್ಲಾಡಳಿತ ಇದೀಗ ಕೋವಿಡ್‍ಯೇತರ ಚಿಕಿತ್ಸೆಗಳಿಗಾಗಿ ಅಶ್ವಿನಿ ಆಸ್ಪತ್ರೆಯನ್ನು ಸಜ್ಜುಗೊಳಿಸಿದೆ.

ಇದುವರೆಗೂ ಖಾಸಗಿ ಆಸ್ಪತ್ರೆಯಾಗಿದ್ದ ಅಶ್ವಿನಿಯಲ್ಲಿ ಈಗ ಜಿಲ್ಲಾಸ್ಪತ್ರೆಯಲ್ಲಿ ಸಿಗುತಿದ್ದ ಸಕಲ ಆರೋಗ್ಯ ಸೇವೆಗಳನ್ನು ಜನತೆಗೆ ಒದಗಿಸುವ ನಿಟ್ಟಿನಲ್ಲಿ ಒಂದೆರಡು ದಿನಗಳಿಂದೀಚೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರೋಗಿಗಳಿಗೆ ಬೆಡ್ ವ್ಯವಸ್ಥೆಯೊಂದಿಗೆ ವಿವಿಧ ರೀತಿಯ ಪರೀಕ್ಷೆಗಳಿಗೆ ಬೇಕಾದ ಲ್ಯಾಬ್, ಸ್ಕ್ಯಾನಿಂಗ್, ಶಸ್ತ್ರಚಿಕಿತ್ಸಾ ಕೊಠಡಿ, ತುರ್ತು ಚಿಕಿತ್ಸಾ ಕೊಠಡಿ, ವಿಚಾರಣಾ ಕೊಠಡಿ, ಐಸಿಯು, ಸಾಮಾನ್ಯ ಚಿಕಿತ್ಸೆ ಇತ್ಯಾದಿಗಳಿಗೆ ಅಗತ್ಯ ಸಲಕರಣೆಗಳ ಅಳವಡಿಕೆಯೊಂದಿಗೆ ಕ್ರಮಕೈಗೊಳ್ಳಲಾಗಿದೆ.

ಕೆಲವೊಂದು ಚಿಕಿತ್ಸಾ ಕೊಠಡಿಗಳು ಅಶ್ವಿನಿಯಲ್ಲಿ ಈ ಹಿಂದೆ ಇದ್ದಲ್ಲಿಯೆ ಮುಂದುವರೆಯಲಿದ್ದು, ಇನ್ನು ಕೆಲವನ್ನು ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಔಷಧಿಗಳೂ ಸೇರಿದಂತೆ ಯಂತ್ರೋಪಕರಣಗಳ ಸ್ಥಳಾಂತರ ಕಾರ್ಯವು ನಡೆದಿದ್ದು, ಅಗತ್ಯ ವೈದ್ಯರುಗಳನ್ನು ಕೂಡ ನಿಯೋಜಿಸಲಾಗಿದೆ.

ಈಗಾಗಲೇ ರೋಗಿಗಳು ಅಶ್ವಿನಿ ಆಸ್ಪತ್ರೆಗೆ ಆಗಮಿಸುತಿದ್ದು, ವೈದ್ಯರುಗಳು ಆರೋಗ್ಯ ತಪಾಸಣೆ ಪ್ರಾರಂಭಿಸಿದ್ದಾರೆ. ಔಷಧಿ, ಚುಚ್ಚುಮದ್ದು ನೀಡಿಕೆ ಕೂಡ ನಡೆಯುತ್ತಿದೆ. ಕಿವಿ, ಮೂಳೆ, ಕಣ್ಣು, ಮಾನಸಿಕ ಆರೋಗ್ಯ ಸೇರಿದಂತೆ ಬಹುತೇಕ ಎಲ್ಲ ಕಾಯಿಲೆಗಳಿಗೆ ತಜ್ಞ ವೈದ್ಯರುಗಳಿಂದ ಚಿಕಿತ್ಸೆ ದೊರೆಯುತ್ತಿದ್ದು, ಇದರೊಂದಿಗೆ ಅಶ್ವಿನಿ ಆಸ್ಪತ್ರೆಯ ವೈದ್ಯರುಗಳು ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.