ಶ್ರೀಮಂಗಲ, ಏ. 7: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಮುಂದುವರಿದಿದ್ದು ಮೂರು ಕಡೆ ದಾಳಿ ನಡೆಸಿದೆ. ಹರಿಹರ ಗ್ರಾಮದಲ್ಲಿ ರೈತರೋರ್ವರ ಜಾನುವಾರು (ಎತ್ತು) ಬಲಿಯಾಗಿದೆ.

ಗ್ರಾಮದ ತೀತೀರ ರಮೇಶ್ ಮುದ್ದಯ್ಯ ಅವರಿಗೆ ಸೇರಿದ ಜಾನುವಾರಿನ ಮೇಲೆ ಸೋಮವಾರ ರಾತ್ರಿ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.

ಮನೆ ಸಮೀಪ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರು ಮೇಲೆ ಹುಲಿ ದಾಳಿ ನಡೆಸಿದ್ದ ಸದ್ದಿಗೆ ಮನೆಯವರು ಎಚ್ಚರಗೊಂಡು ಕಿರುಚಾಡಿದಾಗ ಎತ್ತನ್ನು ಸಾಯಿಸಿ ಹುಲಿ ಪರಾರಿಯಾಗಿದೆ.

ಮಂಗಳವಾರ ಮುಂಜಾನೆ ವೇಳೆ ಮತ್ತೆ ಬಂದು ಎತ್ತನ್ನು ಎಳೆದೊಯ್ದು ಸ್ವಲ್ಪ ಭಾಗ ತಿಂದು ಹಾಕಿದೆ.

ಮಾರ್ಚ್ 24ರ ರಾತ್ರಿ ಹರಿಹರ ಗ್ರಾಮದ ರೈತ ಅಜ್ಜಿಕುಟ್ಟಿರ ರಾಜು ದೇವಯ್ಯ ಅವರ 2 ಹಸುಗಳ ಮೇಲೆ ದಾಳಿ ಮಾಡಿ ಹುಲಿ ಕೊಂದು ತಿಂದಿತ್ತು.

ಅರಣ್ಯ ಇಲಾಖೆಗೆ ಹುಲಿ ಸೆರೆಗೆ ಸರಕಾರ ಅಧಿಕೃತ ಆದೇಶ ನೀಡಿ ದ್ದರೂ, ಹುಲಿ ಸೆರೆಗೆ ಗಂಭೀರವಾಗಿ ಅರಣ್ಯಾಧಿಕಾರಿಗಳು ತೊಡಗಿಸಿ ಕೊಂಡಿಲ್ಲ ಎಂದು ಟಿ. ಶೆಟ್ಟಿಗೇರಿ ಗ್ರಾ.ಪಂ. ಸದಸ್ಯ ಮುಕ್ಕಾಟಿರ ಸಂದೀಪ್ ಆರೋಪಿಸಿದ್ದು, ಕೂಡಲೇ ಅರಣ್ಯ ಇಲಾಖೆ ಕಾರ್ಯತತ್ಪರವಾಗುವಂತೆ ಒತ್ತಾಯಿಸಿದ್ದಾರೆ.

ಜಾನುವಾರು ಕಳೆದುಕೊಂಡ ಮಾಲೀಕ ರಮೇಶ್ ಮುದ್ದಯ್ಯ ಅವರಿಗೆ ಅರಣ್ಯ ಇಲಾಖೆ ರೂ.10 ಸಾವಿರದ ಪರಿಹಾರ ಚೆಕ್ ನೀಡಿದೆ.

ಪೊನ್ನಂಪೇಟೆ: ಹುಲಿ ದಾಳಿಯಿಂದಾಗಿ ಎಮ್ಮೆಕರುವೊಂದು ಬಲಿಯಾದ ಘಟನೆ ಪೊನ್ನಂಪೇಟೆ ಸಮೀಪದ ಚಿಕ್ಕಮುಂಡೂರಿನಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಚಿಕ್ಕಮುಂಡೂರಿನ ಚಿಮ್ಮಣಮಾಡ ರಘು ಮುತ್ತಣ್ಣ ಎಂಬುವರಿಗೆ ಸೇರಿದ 3 ವರ್ಷ ಪ್ರಾಯದ ಎಮ್ಮೆಕರು ಹುಲಿ ದಾಳಿಗೆ ಬಲಿಯಾಗಿದೆ.

ಅಲ್ಲಲ್ಲಿ ಕಾಣಿಸಿಕೊಂಡಿರುವ ಹುಲಿಹೆಜ್ಜೆ, ರಾತ್ರಿ ವೇಳೆ ಕೊಟ್ಟಿಗೆಗೆ ದಾಳಿ ನಡೆಸಿ ಎಮ್ಮೆಕರುವೊಂದನ್ನು ಹುಲಿ ಕೊಂದು ಹಾಕಿದ ಘಟನೆಯನ್ನು ಸಾಕ್ಷೀಕರಿಸುವಂತಿದೆ.

ಇದರಿಂದ ದಕ್ಷಿಣ ಕೊಡಗಿನ ವಿವಿಧೆಡೆ ವ್ಯಾಘ್ರನ ಅಟ್ಟಹಾಸ ನಿರಂತ ರವಾಗಿ ಮುಂದುವರಿ ದಂತಾಗಿದೆ.

ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಎಮ್ಮೆ ಕರುವನ್ನು ಎಂದಿನಂತೆ ಮೇಯಲು ಬಿಡಲು ಮಂಗಳವಾರ ಬೆಳಿಗ್ಗೆ ರಘು ಮುತ್ತಣ್ಣನವರು ಕೊಟ್ಟಿಗೆಗೆ ತೆರಳಿದಾಗ ಹುಲಿ ದಾಳಿ ನಡೆಸಿ ಎಮ್ಮೆ ಕರುವನ್ನು ಕೊಂದು ಹಾಕಿ ಕೊಟ್ಟಿಗೆಯಿಂದ ಹೊರಕ್ಕೆ ಎಳೆದೊಯ್ದ ಘಟನೆ ಬೆಳಕಿಗೆ ಬಂದಿದೆ. ಬಳಿಕ ಕೂಡಲೇ ಈ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಲಾಯಿತು.

ಕೊರೊನಾ ಸೋಂಕಿನ ಭೀತಿಯಿಂದ ಮೊದಲೇ ಸಂಕಷ್ಟದಲ್ಲಿ ದಿನದೂಡುತ್ತಿರುವ ರೈತರಿಗೆ, ಹುಲಿ ನಿರಂತರವಾಗಿ ದಾಳಿ ನಡೆಸಿ ಸಾಕುಪ್ರಾಣಿಗಳನ್ನು ಬಲಿ ಪಡೆಯುತ್ತಿರುವುದು ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಕಳೆದ ಭಾನುವಾರ ರಾತ್ರಿ ಪೊನ್ನಂಪೇಟೆ ಸಮೀಪದ ನಡಿಕೇರಿ ಯಲ್ಲಿಯೂ ಹುಲಿ ದಾಳಿಯಿಂದ ಜಾನುವಾರು ಬಲಿಯಾಗಿತ್ತು. ಈ ಭಾಗದಲ್ಲಿ ಸಂಚರಿಸಿ ದಾಳಿ ನಡೆಸಿದ ಹುಲಿಯೇ ನಡಿಕೇರಿಗೆ ಸಮೀಪದಲ್ಲಿರುವ ಚಿಕ್ಕಮುಂಡೂರು ಗ್ರಾಮದಲ್ಲೂ ಈ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ನಡಿಕೇರಿ, ಚಿಕ್ಕಮುಂಡೂರು ಭಾಗದಲ್ಲಿ ಹುಲಿ ಕಾಣಿಸಿಕೊಂಡಿರು ವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

ದಕ್ಷಿಣ ಕೊಡಗಿನ ಚಿಕ್ಕಮುಂಡೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದ್ದು, ಗ್ರಾಮದ ರೈತ ಮಚ್ಚಮಾಡ ಭೀಮಯ್ಯ (ಬೊಳ್ಳಿಕಟ್ಟಿ) ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿದ್ದ 6 ತಿಂಗಳ ಗಬ್ಬದ ಹಸು ಮೇಲೆ ಮಂಗಳವಾರ ಮುಂಜಾನೆ ಹುಲಿ ದಾಳಿ ನಡೆಸಿದೆ.

ಹುಲಿ ದಾಳಿಯಿಂದ ಹಸು ತಪ್ಪಿಸಿಕೊಂಡು ತೋಟದಲ್ಲಿ ಓಡಿದರೂ ಬಿಡದ ಹುಲಿ, ಅಟ್ಟಾಡಿಸಿ ಹಿಡಿದು ಕೊಂದಿದೆ.