ಗೋಣಿಕೊಪ್ಪಲು, ಏ. 7: ಕೊಡಗು ವೈದ್ಯಕೀಯ ಕಾಲೇಜಿನ ಅಧೀನ ಸಂಸ್ಥೆ ಜಿಲ್ಲಾಸ್ಪತ್ರೆಗೆ ಸುಮಾರು ರೂ. 6 ಲಕ್ಷ ಮೌಲ್ಯದ 4 ವೆಂಟಿಲೇಟರ್, ವೈದ್ಯರಿಗಾಗಿ 54 ರಕ್ಷಣಾ ಕವಚ ಮತ್ತು ಎಲ್ಲ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ 500 ಎನ್.95 ಮಾಸ್ಕ್ ವಿತರಿಸಲಾಗುವುದು ಎಂದು ಮೋಬಿಯಸ್ ಪ್ರತಿಷ್ಠಾನದ ಯೋಜನಾ ಸಂಯೋಜಕ ಮಣವಟ್ಟಿರ ಮಧು ಬೋಪಣ್ಣ ತಿಳಿಸಿದ್ದಾರೆ.

ತಾ.8 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನೀಸ್ ಕಣ್ಮಣಿ ಜಾಯ್ ಅವರ ಮೂಲಕ ಹಸ್ತಾಂತರಿಸಲಿದ್ದಾರೆ. ಇದೇ ಸಂದರ್ಭ ಸುಮಾರು ರೂ.4 ಲಕ್ಷ ಮೌಲ್ಯದ ಆಹಾರ ಸಾಮಗ್ರಿಯನ್ನು ವಲಸೆ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರಿಗೆ ವಿತರಿಸುವ ಸಲುವಾಗಿ 2000 ಕೆ.ಜಿ. ತೊಗರಿ ಬೇಳೆ ಮತ್ತು 2000 ಲೀಟರ್ ಅಡುಗೆ ಎಣ್ಣೆಯನ್ನು ನೀಡಲಿರುವುದಾಗಿ ತಿಳಿಸಿದ್ದಾರೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಉಪಸ್ಥಿತಿಯಲ್ಲಿ ಹಸ್ತಾಂತರ ಕಾರ್ಯಕ್ರಮ ಜರುಗಲಿದೆ.

ಈ ಬಾರಿ ಕೋವಿಡ್-19 ಪ್ರಧಾನಮಂತ್ರಿ ಪರಿಹಾರ ನಿಧಿಗೆ ಮೋಬಿಯಸ್ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಬರ್ಮನ್ ರೂ. 1 ಕೋಟಿ ಮೊತ್ತದ ಚೆಕ್ ಹಸ್ತಾಂತರಿಸುವ ಮೂಲಕ ಸಹಾಯ ಹಸ್ತ ನೀಡಿದ್ದಾರೆ. ನವದೆಹಲಿಯಲ್ಲಿ ವಲಸೆ ಕಾರ್ಮಿಕರು ಇತರರಿಗೆ ಇದೀಗ ದಿನನಿತ್ಯ ಊಟದ ಪ್ಯಾಕೇಟ್ ಸರಬರಾಜು ಮಾಡುತ್ತಿದ್ದು, ಕರ್ನಾಟಕ ಹಾಗೂ ಉತ್ತರ ಪ್ರದೇಶದ ವಿವಿಧೆಡೆ ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೂ ನೆರವಿನ ಹಸ್ತ ಚಾಚಿರುವದಾಗಿ ಮಧು ಬೋಪಣ್ಣ ತಿಳಿಸಿದ್ದಾರೆ.