ಮಡಿಕೇರಿ, ಏ. 7: ವಿಶ್ವಕ್ಕೆ ಮಹಾ ಮಾರಿಯಂತೆ ವಕ್ಕರಿಸಿರುವ ಕೊರೊನಾ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಈ ವೈರಸ್ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು; ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇನ್ನಿಲ್ಲದ ಶ್ರಮವಹಿಸುತ್ತಿದ್ದಾರೆ. ವ್ಯಕ್ತಿಗಳಿಂದ ವ್ಯಕ್ತಿಗೆ ವೈರಸ್ ಹರಡದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ಹೊರದೇಶ, ರಾಜ್ಯ, ಜಿಲ್ಲೆ., ಅಷ್ಟೇ ಏಕೆ ಜಿಲ್ಲೆಯೊಳಗಿನ ತಾಲೂಕುಗಳಿಂದ ಮತ್ತೊಂದು ತಾಲೂಕಿಗೆ ಹೋಗಿ ಬರುವ ವ್ಯಕ್ತಿಗಳ ಮೇಲೂ ಎಚ್ಚರ ವಹಿಸುತ್ತಿದ್ದು; ಅವರುಗಳನ್ನು ಕೂಡ ‘ಹೋಂ ಕ್ವಾರಂಟೈನ್’ಗೆ (ಗೃಹತಡೆ) ಒಳಪಡಿಸುವ ಕಾರ್ಯವನ್ನೂ ಕೂಡ ಕೈಗೊಳ್ಳಲಾಗುತ್ತಿದೆ.

‘ಹೋಂ ಕ್ವಾರಂಟೈನ್’ ವಿಚಾರದ ಬಗ್ಗೆ ‘ಶಕ್ತಿ’ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಅವರಲ್ಲಿ ಮಾಹಿತಿ ಬಯಸಿದ ಸಂದರ್ಭ ಆರೋಗ್ಯಾಧಿಕಾರಿಗಳು ಈ ಬಗ್ಗೆ ವಿವರಣೆ ನೀಡಿದರು.

28 ದಿನಗಳವರೆಗೆ ನಿಗಾ

ಸರಕಾರದ ವತಿಯಿಂದ ಪ್ರತಿ ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ತಂಡಗಳನ್ನು ರಚನೆ ಮಾಡಲಾಗಿದೆ. ತಂಡದಲ್ಲಿ ಗ್ರಾ.ಪಂ. ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಸದಸ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಗ್ರಾಮದ ಗಸ್ತು ಪೊಲೀಸ್ ಅಧಿಕಾರಿಗಳಿರುತ್ತಾರೆ. ಯಾರಾದರೂ ಹೊರಗಡೆಯಿಂದ ಬಂದು ಮನೆಯಲ್ಲಿ ತಂಗಿರುವ ಬಗ್ಗೆ ಮಾಹಿತಿ ಲಭಿಸಿದರೆ ಈ ತಂಡ ಮನೆಗೆ ಭೇಟಿ ನೀಡಿ; ವ್ಯಕ್ತಿಯ ದೇಹಸ್ಥಿತಿಯನ್ನು ಪರಿಶೀಲಿಸಲಿದೆ. ಜ್ವರ, ಕೆಮ್ಮು ಮುಂತಾದ ಲಕ್ಷಣಗಳು ಕಂಡು ಬಂದರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗುವದು. ಇಲ್ಲವಾದಲ್ಲಿ ಅಂತಹ ವ್ಯಕ್ತಿಗಳಿಗೆ ಸೀಲು ಹಾಕಿ 14 ದಿನಗಳ ಕಾಲ ಮನೆಯಲ್ಲಿಯೇ ಇರಲು ಸೂಚಿಸಲಾಗುವದು. ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರು ಆ ವ್ಯಕ್ತಿಯ ಬಗ್ಗೆ ನಿಗಾವಹಿಸಲಿದ್ದಾರೆ. 14 ದಿನಗಳ ಬಳಿಕ 28 ದಿನಗಳವರೆಗೆ ಗೃಹತಡೆಗೆ ಒಳಗಾದ ವ್ಯಕ್ತಿಯೇ ಅವರ ದೇಹಸ್ಥಿತಿ ಬಗ್ಗೆ ಮಾಹಿತಿ ನೀಡುತ್ತಿರಬೇಕಿದೆ. 28 ದಿನಗಳ ಬಳಿಕ ಮುಕ್ತಗೊಳಿಸಲಾಗುವದೆಂದು ಡಾ. ಮೋಹನ್ ತಿಳಿಸಿದರು.

ಅಸಹಾಕಾರಕ್ಕೆ ಕ್ರಮ

ಹೊರಗಡೆಯಿಂದ ಯಾರಾದರೂ ಬಂದು ಮನೆ ಸೇರಿಕೊಂಡಿದ್ದರೆ ಅಂತಹವರ ಬಗ್ಗೆ ಟಾಸ್ಕ್ ಫೋರ್ಸ್ ತಂಡ ಗಮನವಿರಿಸುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಸಾರ್ವಜನಿಕರೆ, ಮಾಹಿತಿ ನೀಡುತ್ತಾರೆ. ಕೆಲವರು ತಿಳಿದಿದ್ದರೂ ಮಾಹಿತಿ ನೀಡುವದಿಲ್ಲ. ಮಾಹಿತಿ ದೊರೆತ ಕೂಡಲೇ ನಮ್ಮ ತಂಡ ಅಂತಹವರ ಮನೆಗೆ ತೆರಳಿ ಮನೆಯಿಂದ ಹೊರಗಡೆ ಓಡಾಡದಂತೆ ಮನವಿ ಮಾಡಲಿದೆ. ಕೆಲವರು ಮನವಿಯನ್ನು ತಿರಸ್ಕರಿಸಿ ಅಸಹಕಾರ ನೀಡುವದೂ ಇದೆ. ಇಂತಹ ಸಂದರ್ಭಗಳಲ್ಲಿ ಗಸ್ತು ಪೊಲೀಸರ ಸಹಕಾರ ಪಡೆದುಕೊಳ್ಳಲಾಗುತ್ತದೆ. ಆದರೂ ಉಲ್ಲಂಘಿಸಿದರೆ ಡಿವೈಎಸ್‍ಪಿ ಅವರ ಸಹಕಾರ ಪಡೆದು ಕರೆದೊಯ್ದು ಆಸ್ಪತ್ರೆಯಲ್ಲಿ ತೆರೆಯಲಾಗಿರುವ ವಿಶೇಷ ಘಟಕಗಳಲ್ಲಿ ದಾಖಲಿಸಲಾಗುವದು. ಇದುವರೆಗೆ ಮೂರು ಮಂದಿಯನ್ನು ಈ ರೀತಿಯಾಗಿ ಒಳಪಡಿಸಿದ್ದು; ನಂತರದಲ್ಲಿ ಅನುಮತಿ ಪಡೆದ ಅವರುಗಳು ಇದೀಗ ಮನೆಯಿಂದ ಹೊರಬರುತ್ತಿಲ್ಲ ಎಂದು ಮಾಹಿತಿ ನೀಡಿದರು. ಕೆಲವೊಮ್ಮೆ ಉದ್ದೇಶ ಪೂರ್ವಕವಾಗಿ ಹಾಗೂ ದ್ವೇಷದಿಂದಾಗಿ ಸುಳ್ಳು ಮಾಹಿತಿ ನೀಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಪತ್ತೆ ಹಚ್ಚುವದು ಕಷ್ಟಕರವಾಗಲಿದ್ದು; ಸುಳ್ಳು ಮಾಹಿತಿ ನೀಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವದೆಂದು ಹೇಳಿದರು.

ತಾಲೂಕಿನಲ್ಲಿಯೂ ತಡೆ

ಇದೀಗ ವೈರಸ್ ಸೋಂಕು ಶಂಕಿತರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. 28 ದಿನಗಳ ಕಾಲ ನಿಗಾ ವಹಿಸಿದ ಬಳಿಕ ಪಟ್ಟಿಯಲ್ಲಿರುವ ಹೆಸರುಗಳನ್ನು ಅಳಿಸಿ ಹಾಕಲಾಗುವದು ಎಂದು ತಿಳಿಸಿದರು. ಹೊರದೇಶ, ರಾಜ್ಯ, ಜಿಲ್ಲೆಗಳಲ್ಲದೆ ಜಿಲ್ಲೆಯೊಳಗಿನ ಅಂತರ ತಾಲೂಕುಗಳಿಗೆ ಹೋಗಿ ಬರುವವರನ್ನು ಕೂಡ ಗೃಹ ತಡೆಗೆ ಒಳಪಡಿಸಲಾಗುತ್ತಿದೆ. ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ತೆರಳಿ ಅಲ್ಲಿ ತಂಗಿರುವದು ಪತ್ತೆಯಾದರೆ ಅಂತಹವರಿಗೆ 14 ದಿನಗಳ ಕಾಲ ತಮ್ಮ ತಾಲೂಕಿಗೆ ಮರಳಲು ಅವಕಾಶ ನೀಡುವದಿಲ್ಲ ಎಂದು ಡಾ. ಮೋಹನ್ ತಿಳಿಸಿದರು.

ಜಿಲ್ಲೆಯಲ್ಲಿ ಇದೀಗ ಪರಿಸ್ಥಿತಿ ಹತೋಟಿಗೆ ಬಂದಿದೆ. ತಬ್ಲಿಘಿಗಳ ಪತ್ತೆಯಾಗಿರುವದರಿಂದ ಒಂದಿಷ್ಟು ಆತಂಕವಿದೆ. ಈ ಬಗ್ಗೆಯೂ ಕಟ್ಟೆಚ್ಚರ ವಹಿಸಲಾಗಿದೆ. ಶಂಕಿತರು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಜನತೆಯಲ್ಲಿ ಕೋರಿದ್ದಾರೆ.