ಮರಗೋಡು, ಏ. 7: ಅಪರೂಪದಲ್ಲಿ ಅಪರೂಪವೆನಿಸಿರುವ ಚುಕ್ಕೆ ಕಾಡು ಗೂಬೆ (ಬೊಟ್ಟ್ ಕಾಡ್ ಗುಮ್ಮ) ಮರಿಯೊಂದನ್ನು ಮರಗೋಡಿನಲ್ಲಿ ರಕ್ಷಿಸಲಾಗಿದೆ. ತಾಯಿಯಿಂದ ಬೇರ್ಪಟ್ಟಿದ್ದ ಈ ಗೂಬೆ ಮರಿ ತೋಟದ ರಸ್ತೆಬದಿಯಲ್ಲಿ ಕುಳಿತಿತ್ತು. ಇದನ್ನು ಗಮನಿಸಿದ ಚಿತ್ರಕಲಾವಿದ ಐಮಂಡ ರೂಪೇಶ್ ನಾಣಯ್ಯ ತಕ್ಷಣವೇ ಮಡಿಕೇರಿ ಡಿಎಫ್‍ಒ ಪ್ರಭಾಕರನ್ ಅವರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ರೇಂಜರ್ ಟೈಗರ್ ದೇವಯ್ಯ ಮತ್ತು ಸಿಬ್ಬಂದಿ ಗೂಬೆ ಮರಿಯನ್ನು ವಶಕ್ಕೆ ಪಡೆದರು. ಬಿಳಿ ಬಣ್ಣದ ಈ ಗೂಬೆ ನೋಡಲು ಅತ್ಯಾಕರ್ಷಕವಾಗಿದ್ದು ಕಾಳಸಂತೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ ಎನ್ನಲಾಗಿದೆ. ಗೂಬೆ ಮರಿ ಆರೋಗ್ಯವಾಗಿದ್ದು ಕೆಲ ದಿನಗಳ ಕಾಲ ನಿಗಾವಹಿಸಿ ಬಳಿಕ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿ ದೇವಯ್ಯ ತಿಳಿಸಿದರು.