ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ

ನವದೆಹಲಿ, ಏ. 7: ಕರ್ನಾಟಕ ಮತ್ತು ಕೇರಳ ನಡುವಿನ ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‍ಗೆ ಮಾಹಿತಿ ನೀಡಿದೆ. ಕೇರಳದ ಕಾಸರಗೋಡಿನ ಕೊರೊನಾ ಸೋಂಕಿತರಲ್ಲದ ಇತರ ರೋಗಿಗಳಿಗೆ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಕರ್ನಾಟಕ ಸರ್ಕಾರ ಒಪ್ಪಿಗೆ ಸೂಚಿಸಿದೆ ಇದರೊಂದಿಗೆ ಉಭಯ ರಾಜ್ಯಗಳ ನಡುವಿನ ಗಡಿ ಬಂದ್ ವಿವಾದ ಅಂತ್ಯವಾಗಿದೆ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇಂದು ಸುಪ್ರೀಂ ಕೋರ್ಟ್‍ಗೆ ತಿಳಿಸಿದ್ದಾರೆ. ತಾ. 3 ರಂದು ಸುಪ್ರೀಂಕೋರ್ಟ್ ಆದೇಶದ ನಂತರ ಗಡಿ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಕಾರ್ಯದರ್ಶಿಗಳು ಕರ್ನಾಟಕ ಮತ್ತು ಕೇರಳ ಸರ್ಕಾರಗಳ ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ವೈದ್ಯಕೀಯ ಪ್ರಮಾಣ ಪತ್ರವನ್ನು ಹಾರಜುಪಡಿಸಿ ಆಂಬುಲೆನ್ಸ್ ಮೂಲಕ ರೋಗಿಗಳನ್ನು ಕೇರಳದಿಂದ ಕರ್ನಾಟಕದ ಆಸ್ಪತ್ರೆಗೆ ದಾಖಲಿಸಲು ಒಪ್ಪಿಗೆ ನೀಡಲಾಗಿದೆ ಎಂದು ಮೆಹ್ತಾ ತಿಳಿಸಿದರು. ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ ನಂತರ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದೆ.

ಲಾಕ್‍ಡೌನ್ ವಿಸ್ತರಣೆಗೆ ಚಿಂತನೆ

ನವದೆಹಲಿ, ಏ. 7: ಜಗತ್ತಿನಾದ್ಯಂತ ತೀವ್ರ ಆತಂಕ ಹಾಗೂ ಭಯ ಭೀತಿ ಸೃಷ್ಟಿಸಿರುವ ಮಾರಕ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ವಿವಿಧೆಡೆ ಮೂರು ಸಾವುಗಳ ವರದಿಯೊಂದಿಗೆ ಈ ಸೋಂಕಿನಿಂದ ಒಟ್ಟಾರೇ ಮೃತಪಟ್ಟವರ ಸಂಖ್ಯೆ 114ಕ್ಕೆ ಏರಿಕೆ ಆಗಿದ್ದು, ಸೋಂಕಿತರ ಸಂಖ್ಯೆ 4421ಕ್ಕೆ ಏರಿಕೆ ಆಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಲಾಕ್‍ಡೌನ್ ವಿಸ್ತರಣೆಗೆ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸೇರಿದಂತೆ ಹಲವು ರಾಜ್ಯಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿವೆ. ರಾಜ್ಯ ಸರ್ಕಾರಗಳ ಜೊತೆಗೆ ವಿವಿಧ ಕ್ಷೇತ್ರಗಳ ತಜ್ಞರು ಕೂಡಾ ಲಾಕ್‍ಡೌನ್ ವಿಸ್ತರಿಸುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ. ತೀವ್ರ ಒತ್ತಡಗಳ ಬೆನ್ನಲ್ಲೇ, ಕೇಂದ್ರ ಸರ್ಕಾರ ಕೂಡಾ ಲಾಕ್‍ಡೌನ್ ವಿಸ್ತರಣೆಗೆ ಚಿಂತನೆ ನಡೆಸಿದೆ ಎಂಬುದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.

8.5 ಸಾವಿರ ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಬೇತಿ

ಬೆಂಗಳೂರು, ಏ. 7: ಬಿಬಿಎಂಪಿ ವಾರ್ ರೂಂನಲ್ಲಿ ಕೊರೊನಾ ಡ್ಯಾಷ್ ಬೋರ್ಡ್‍ನ್ನು ಇಂದಿನಿಂದ ರಾಜ್ಯಾದ್ಯಂತ ಆರಂಭಿಸಿದ್ದು, ಯಾವುದೇ ಮೂಲೆಯಲ್ಲಿನ ಸೋಂಕಿತರ ಸಂಖ್ಯೆ ಬಗ್ಗೆ ಫೋನ್, ಡೆಸ್ಕ್‍ಟಾಪ್‍ನಲ್ಲಿ ನೋಡಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ತಾ. 7 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿತರು, ಕ್ವಾರಂಟೈನ್ ನಲ್ಲಿರುವವರ ಅಂಕಿ-ಅಂಶಗಳ ಬಗ್ಗೆ ಮಾಹಿತಿ ಡ್ಯಾಷ್ ಬೋರ್ಡ್‍ನಿಂದ ಸಿಗಲಿದೆ. ಕೊರೊನಾ ಸೋಂಕಿತರ ಚಿಕಿತ್ಸೆ ವಿಧಾನ, ಆಸ್ಪತ್ರೆಗಳ ವಿವರ ಈ ಡ್ಯಾಷ್ ಬೋರ್ಡ್‍ನಲ್ಲಿ ಇರಲಿದೆ. ಇಡೀ ರಾಜ್ಯದಲ್ಲಿ ಎಷ್ಟು ಆಸ್ಪತ್ರೆಗಳು ಕೊರೊನಾಗಾಗಿ ಮೀಸಲಿವೆ, ಎಷ್ಟು ಹಾಸಿಗೆ ಖಾಲಿ ಇವೆ, ಎಷ್ಟು ವೈದ್ಯರಿದ್ದಾರೆ ಎನ್ನುವ ಮಾಹಿತಿ ಈ ಡ್ಯಾಷ್‍ಬೋರ್ಡ್‍ನಲ್ಲಿ ಲಭ್ಯವಿರಲಿದೆ ಎಂದರು. 4.5 ಲಕ್ಷ ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಂದಿನಿಂದ ಕೋವಿಡ್ ನಿರ್ವಹಣೆ ಬಗ್ಗೆ ಆನ್‍ಲೈನ್ ಮೂಲಕ ತರಬೇತಿ ನೀಡಲಾಗುತ್ತಿದೆ. ಈ ವರೆಗೂ 8.5 ಸಾವಿರ ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ಪಡೆದಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.

ನ್ಯಾಯಮೂರ್ತಿಗಳಿಂದ ರೂ. 59.40 ಲಕ್ಷ ನೆರವು

ಬೆಂಗಳೂರು, ಏ. 7: ಕೊವಿಡ್-19 ವಿರುದ್ಧದ ಹೋರಾಟಕ್ಕೆ ರಾಜ್ಯ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರ ನ್ಯಾಯಮೂರ್ತಿಗಳು, ಅಧಿಕಾರಿಗಳು, ಸಿಬ್ಬಂದಿ ಒಟ್ಟಾಗಿ ರೂ. 59.40 ಲಕ್ಷ ನೆರವು ನೀಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರ ನ್ಯಾಯಮೂರ್ತಿಗಳು ಒಟ್ಟು ರೂ. 8.25 ಲಕ್ಷಗಳ ಚೆಕ್ ನೀಡಿದ್ದರೆ, ಕೆಲ ನ್ಯಾಯಮೂರ್ತಿಗಳು ರೂ. 2.50 ಲಕ್ಷ ಮೊತ್ತವನ್ನು ಆನ್‍ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಹೈಕೋರ್ಟ್‍ನ ನ್ಯಾಯಾಂಗ ಅಧಿಕಾರಿಗಳು ಮೂರು ದಿನಗಳ ವೇತನ ಸೇರಿ ರೂ. 6.06 ಲಕ್ಷ ದೇಣಿಗೆ ನೀಡಿದ್ದರೆ, ಇತರ ಸಿಬ್ಬಂದಿಯ ಒಂದು ದಿನದ ವೇತನ ಸೇರಿ ರೂ. 42.58 ಲಕ್ಷ ನೆರವು ಒದಗಿಸಲಾಗಿದೆ. ಜೊತೆಗೆ, ರಾಜ್ಯಾದ್ಯಂತ ನ್ಯಾಯಾಂಗ ಅಧಿಕಾರಿಗಳು ಮೂರು ದಿನ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ಒಂದು ದಿನದ ವೇತನವನ್ನು ಕೋವಿಡ್-19 ನೆರವಿನ ನಿಧಿಗೆ ನೀಡಲಿದ್ದಾರೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಾಅತ್-ಗುಡ್‍ಫ್ರೈಡೆ ಪ್ರಾರ್ಥನೆ ಮನೆಯಲ್ಲೆ

ಬೆಂಗಳೂರು, ಏ. 7: ಲಾಕ್‍ಡೌನ್ ಹಿನ್ನೆಲೆ ಶಬೆ ಬರಾಅತ್ ಹಾಗೂ ಗುಡ್‍ಫ್ರೈಡೆಗಾಗಿ ಯಾರು ಕೂಡ ಮಸೀದಿ, ಚರ್ಚ್‍ಗಳಿಗೆ ತೆರಳದೆ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ಅನಗತ್ಯವಾಗಿ ಚರ್ಚ್, ಮಸೀದಿಗಳಲ್ಲಿ ಸೇರಿದರೆ ಮುಲಾಜಿಲ್ಲದೆ ಬಂಧಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಆರ್ಚ್ ಬಿಷಪ್ ಮಚಾಡೊ ಅವರು ಗುಡ್ ಫ್ರೈಡೆ ಪ್ರಾರ್ಥನೆಗೆ ಚರ್ಚ್‍ಗೆ ಬರದಂತೆ ಮನೆಯಲ್ಲೇ ಆಚರಿಸುವಂತೆ ಮನವಿ ಮಾಡಿರುವುದು ಸ್ವಾಗತಾರ್ಹ ವಾಗಿದೆ. ಅದೇ ರೀತಿ ವಕ್ಫ್ ಮಂಡಳಿ ಕೂಡ ಶಬೇ ಬರಾಅತ್ ಅನ್ನು ಮನೆಯಲ್ಲಿಯೇ ಆಚರಿಸುವಂತೆ ಕರೆ ನೀಡಿದೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳುವಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಲಾಕ್‍ಡೌನ್ ಉಲ್ಲಂಘಿಸಿ ನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ 17,384 ವಾಹನಗಳನ್ನು ನಗರ ಪೊಲೀಸರು ಇಲ್ಲಿಯವರೆಗೆ ವಶಪಡಿಸಿ ಕೊಂಡಿದ್ದಾರೆ. ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯವಾಗಿ ನಗರದ ವಿವಿಧೆಡೆ ಸಂಚರಿಸುತ್ತಿದ್ದ 16,187 ಬೈಕ್‍ಗಳು, 554 ಆಟೋ, 646 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾಕ್‍ಡೌನ್ ಹಿನ್ನೆಲೆ ಅನಗತ್ಯ ವಾಹನ ಸಂಚಾ ರವನ್ನು ತಡೆಯಲು ನಗರದ ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು ವಶಪಡಿಸಿಕೊಂಡಿರುವ ವಾಹನಗಳನ್ನು ಲಾಕ್‍ಡೌನ್ ಮುಗಿಯುವವರೆಗೆ ವಾಪಸ್ ನೀಡುವುದಿಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.

ಮದ್ಯ ಕೇಳಿದಕ್ಕೆ ರೂ. 10 ಸಾವಿರ ದಂಡ

ಬೆಂಗಳೂರು, ಏ. 7: ಮದ್ಯವ್ಯಸನಿಗಳ ಹಿತದೃಷ್ಟಿಯಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿ ಎಂದು ಹೈಕೋರ್ಟ್‍ಗೆ ಅರ್ಜಿ ಹಾಕಿದ್ದ ಹುಬ್ಬಳ್ಳಿ ಮೂಲದ ವೈದ್ಯರೊಬ್ಬರಿಗೆ ನ್ಯಾಯಾಲಯ ರೂ. 10 ದಂಡ ವಿಧಿಸಿದೆ. ಮುಖ್ಯ ನ್ಯಾ. ಎ.ಎಸ್. ಒಕಾ, ನ್ಯಾ. ಬಿ.ವಿ. ನಾಗರತ್ನ ಅವರನ್ನೊಳ ಗೊಂಡ ದ್ವಿಸದಸ್ಯ ಪೀಠ ವೈದ್ಯರ ಅರ್ಜಿಯನ್ನು ವಜಾ ಮಾಡಿ ರೂ. 10 ಸಾವಿರ ದಂಡ ವಿಧಿಸಿದೆ. ಹುಬ್ಬಳ್ಳಿಯ ಮನೋವೈದ್ಯ ವಿನೋದ್ ಕುಲಕರ್ಣಿ ಲಾಕ್‍ಡೌನ್ ಹೇರಲಾಗಿರುವ ಸಮಯದಲ್ಲಿ ದೇಶಾದ್ಯಂತ ಮದ್ಯ ಮಾರಾಟ ನಿಷೇಧವಿದ್ದು ಕರ್ನಾಟಕದಲ್ಲಿ ಈ ನಿಷೇಧವನ್ನು ತೆರವು ಮಾಡಬೇಕೆಂದು ಪಿಐಎಲ್ ಮೂಲಕ ಮನವಿ ಸಲ್ಲಿಸಿದರು. ತುರ್ತು ಪರಿಸ್ಥಿತಿ ಸಮಯ ಜನರು ತಮ್ಮ ಆರೋಗ್ಯಗಳ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು. ವೈದ್ಯರಾಗಿ ಮದ್ಯಪಾನಿಗಳ ಪರ ಅರ್ಜಿ ಸಲ್ಲಿಸಿದ್ದು ಸರಿಯಲ್ಲ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.

ಐಸಿಯುನಲ್ಲಿ ಬ್ರಿಟನ್ ಪ್ರಧಾನಿ

ಲಂಡನ್, ಏ. 7: ಕೊರೊನಾ ವೈರಸ್ ಸೋಂಕಿತ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಸೋಂಕಿನ ಲಕ್ಷಣಗಳು ಬೋರಿಸ್ ಜಾನ್ಸನ್ ಅವರನ್ನು ನಿರಂತರ ಬಾಧಿಸುತ್ತಿದ್ದ ಪರಿಣಾಮ ಅವರನ್ನು ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನದ ಭೋಜನ ಅವಧಿಯಲ್ಲಿ ಬ್ರಿಟನ್ ಪ್ರಧಾನಿ ಜಾನ್ಸನ್ ತಮ್ಮ ಆರೋಗ್ಯ ಉತ್ತಮವಾಗಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ ಅಲ್ಲಿನ ಕಾಲಮಾನ ಸಂಜೆ 7 ಗಂಟೆ ವೇಳೆಗೆ ಅವರನ್ನು ಐಸಿಯು ವಾರ್ಡ್‍ಗೆ ಸ್ಥಳಾಂತರಿಸಲಾಗಿದೆ.