ಏಪ್ರಿಲ್ 14 ರಂದು ಲಾಕ್‍ಡೌನ್ ತೆರವುಗೊಳಿಸಿದ್ದೇ ಆದಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚುವ ಎಲ್ಲಾ ಸಾಧ್ಯತೆಗಳಿವೆ. ವಿದೇಶಗಳಂತೆ ನಮ್ಮಲ್ಲೂ ಬಿಗು ನಿಲುವು ಅತ್ಯಗತ್ಯವಿದೆ. ಇಲ್ಲದೇ ಹೋದಲ್ಲಿ ಸೋಂಕು ಸರ್ವವ್ಯಾಪಿಯಾಗಿ ಈವರೆಗಿನ ಪ್ರಯತ್ನಗಳೆಲ್ಲವೂ ಸರ್ವನಾಶವಾದೀತು.

ಏಪ್ರಿಲ್ 14 ರಂದು ಲಾಕ್‍ಡೌನ್ ತೆರವುಗೊಳಿಸದೇ ಇದ್ದರೆ, ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಉದ್ಬವಿಸಿ ಆರ್ಥಿಕ ಹಾಹಾಕಾರ ಉಂಟಾದೀತು. ದೇಶದ ಆರ್ಥಿಕತೆ ಹಲವು ವರ್ಷಗಳ ಹಿಂದೆ ಜಾರಿದ್ದು ಭಾರತವನ್ನು ಮತ್ತೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಅನೇಕ ವರ್ಷಗಳೇ ಬೇಕು. ಲಾಕ್‍ಡೌನ್ ಮುಂದುವರೆಸಿದರೆ ಆರ್ಥಿಕ ಮುಗ್ಗಟ್ಟು ಎದುರಿಸಲು ಸಿದ್ದರಾಗಿರಿ. ಆರ್ಥಿಕ ತಜ್ಞರ ಆಗ್ರಹ.

ನವಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಲಾಕ್‍ಡೌನ್ ಎಂಬುದು 21 ದಿನಗಳ ಸುಧೀರ್ಘ ದಿನಗಳವರೆಗೆ ಜಾರಿಯಾಗಿದೆ. ಕಂಡುಕೇಳರಿಯದಂತೆ ದೇಶ ಸ್ಥಬ್ದವಾಗಿದೆ. ಕಾಲಿಡಲೂ ಜಾಗವಿಲ್ಲದಂತಿದ್ದ ವಾಣಿಜ್ಯ ನಗರಿಗಳು ಬಿಕೋ ಎನ್ನುತ್ತಿದೆ. ಎಲ್ಲರೂ ಮನೆ ಸೇರಿದ್ದಾರೆ. ಆರ್ಥಿಕತೆ ಮಕಾಡೆ ಮಲಗಿದೆ.

ಏಪ್ರಿಲ್ 14 ರ ನಂತರ ಲಾಕ್‍ಡೌನ್ ತೆರವುಗೊಳಿಸಿದ್ದರೆ ಆಗಬಹುದಾದ ಪರಿಣಾಮಗಳೇನು ?

ಆರೋಗ್ಯ ಇಲಾಖೆ ಪ್ರಕಾರ ಇನ್ನೂ ಭಾರತ ಸುರಕ್ಷಿತ ಹಂತ ತಲುಪಿಲ್ಲ. ವೈರಾಣು ಧಾಳಿ ಮುಂದುವರೆದೇ ಇದೆ. ಭಾರತೀಯರು ಯಾವುದೇ ನಿಯಮ, ಯಾರದ್ದೇ ಮಾತನ್ನು ಸುಲಭಸಾಧ್ಯವಾಗಿ ಕೇಳುವವರಲ್ಲ. ಹೀಗಿರುವಾಗ ಒಮ್ಮೆಲೆ ಲಾಕ್‍ಡೌನ್ ತೆರವುಗೊಳಿಸಿದರೆ ಭಾರತೀಯರ ಮನಸ್ಥಿತಿಯ ಪ್ರಕಾರ ಒಮ್ಮೆಗೇ ಭಾರತದೆಲ್ಲೆಡೆ ಜನಸಂಚಾರ ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಾದೀತು.

ಮನೆಯಿಂದ ಹೊರಕ್ಕೆ ಬಿಟ್ಟಂತೆಯೇ ಗೂಡು ಬಿಟ್ಟ ಹಕ್ಕಿಗಳಂತೆ ಜನರೂ ಸ್ವಚ್ಚಂದವಾಗಿ ವರ್ತಿಸಲು ಪ್ರಾರಂಭಿಸುತ್ತಾರೆ, ಮಾಲ್‍ಗಳಿಗೆ ನುಗ್ಗುತ್ತಾರೆ, ರೆಸ್ಟೋರೆಂಟ್‍ಗಳಿಗೆ ಧಾವಿಸುತ್ತಾರೆ, ಚಿತ್ರಮಂದಿರಗಳಿಗೆ ನುಗ್ಗುತ್ತಾರೆ, ಸಂತೆ ಪ್ರದೇಶಗಳಿಗೆ ದೌಡಾಯಿಸುತ್ತಾರೆ. ಎಲ್ಲಾ ರೀತಿಯಲ್ಲಿಯೂ ಜನ ನಿಯಮ ಗಳನ್ನು ಗಾಳಿಗೆ ತೂರಿ ಮನಸೋ ಇಚ್ಚೆ ವರ್ತಿಸುತ್ತಾರೆ.

ಹೀಗಿರುವಾಗ ಕೊರೊನಾ ಸೋಂಕು ವ್ಯಾಪಿಸುವುದಿಲ್ಲ ಎಂಬುದಕ್ಕೆ ಗ್ಯಾರಂಟಿಯೇನು ? ಹಿಡಿದಿಟ್ಟ ನೀರನ್ನು ಒಮ್ಮೆಗೆ ಅಣೆಕಟ್ಟಿನಿಂದ ಹೊರ ಬಿಟ್ಟಂತೆ ಜನ ಕೂಡ ಬೇಕಾಬಿಟ್ಟಿ ವರ್ತಿಸುತ್ತಾರೆ. ಲಾಕ್‍ಡೌನ್ ಅವಧಿ ಯಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರು ಲಾಕ್‍ಡೌನ್ ತೆರವಾದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುರೇ ?

ವಿದೇಶಗಳ ಉದಾಹರಣೆ ಗಮನಿಸಿದರೆ ಕೊರೊನಾ ಸೋಂಕು ವಾಸಿಯಾದವರಲ್ಲಿಯೂ ಮತ್ತೆ ಬರುವ ಸಾಧ್ಯತೆಯಿದೆ. ಹೀಗಾಗಿಯೇ ಸಂಪರ್ಕ ತಡೆ ಅವಧಿಯನ್ನು ಭಾರತದಲ್ಲಿ 14 ದಿನಗಳಿಂದ 28 ದಿನಗಳಿಗೆ ವಿಸ್ತರಿಸಲಾಗಿದೆ. ಏಪ್ರಿಲ್ 14ಕ್ಕೆ ಶೇ. 60 ಮಂದಿ ಸೋಂಕಿತರ ಸಂಪರ್ಕ ತಡೆ ಅವಧಿ ಮುಕ್ತಾಯಗೊಂಡಿರುವುದಿಲ್ಲ.

ಹೀಗಿದ್ದ ಮೇಲೆ ಲಾಕ್‍ಡೌನ್ ತೆರವುಗೊಳಿಸಿದ ನಂತರ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆ ಉಲ್ಬಣಿಸಿದರೆ ಯಾರು ಹೊಣೆ ? ಈವರೆಗಿನ 21 ದಿನಗಳ ಲಾಕ್‍ಡೌನ್ ಅನ್ನು ನೀರಿನ ಮೇಲೆ ಹೋಮ ಮಾಡಿದಂತಾಗಲು ಬಿಡದಿರಿ ಎಂಬ ಸಲಹೆ ವೈದ್ಯಕೀಯ ವಲಯದಿಂದ ವ್ಯಕ್ತವಾಗಿದೆ.

ಆದರೆ, ಆರ್ಥಿಕ ತಜ್ಞರ ಚಿಂತೆಯೇ ಬೇರೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಆರ್ಥಿಕತೆ ಸಂಪೂರ್ಣ ತಳಕಚ್ಚಿದೆ. ಭಾರತದಲ್ಲಿ ಕಳೆದ ಮೂರು ವಾರಗಳಿಂದ ನಯಾ ಪೈಸೆ ಹುಟ್ಟಿಲ್ಲ. ಲಾಕ್‍ಡೌನ್ ಹೊಡೆತದಲ್ಲಿ ಇಡೀ ಆರ್ಥಿಕ ವ್ಯವಸ್ಥೆಯೇ ತಳಕಚ್ಚಿದೆ. ದೇಶದ ಲಕ್ಷಾಂತರ ಕಾರ್ಖಾನೆಗಳು, ಆಹಾರೋತ್ಪನ್ನ ಘಟಕಗಳು, ಐಟಿ ಕಂಪನಿಗಳು ಸ್ತಬ್ದಗೊಂಡಿದೆ. ಹೀಗಿರ ಬೇಕಾದರೆ ಒಂದು ದೇಶವನ್ನು ಆರ್ಥಿಕವಾಗಿ ಮುನ್ನೆಡೆಸಲು ಹೇಗೆ ಸಾಧ್ಯ ?

ಜನರಿಗೆ ಉದ್ಯೋಗವಿಲ್ಲ, ಹಣದ ವಹಿವಾಟೇ ಅಕ್ಷರಶಃ ನಿಂತುಹೋಗಿದೆ. ದೇಶವೊಂದು ಈ ರೀತಿಯ ಆರ್ಥಿಕ ಹೊಡೆತ ತಿಂದಿರುವ ಈ ಸ್ಥಿತಿ ಬದಲಾಗಲೇಬೇಕು. ಕೂಡಲೇ ಆರ್ಥಿಕ ಸ್ಥಿತಿ ಸರಿಪಡಿಸಿ. ಇಲ್ಲದೇ ಹೋದಲ್ಲಿ ಭಾರತದ ಭವಿಷ್ಯ ಖಂಡಿತಾ ಅಂಧಕಾರಕ್ಕೆ ಹೋಗಲಿದೆ. ನಿರುದ್ಯೋಗ ಮುಂದಿನ ದಿನಗಳಲ್ಲಿ ದೇಶಕ್ಕೇ ದೊಡ್ಡ ಸಂಕಷ್ಟ ತರಲಿದೆ. ಜನ ಹಣಕ್ಕಾಗಿ ಬೀದಿಗೆ ಬಂದು ದಂಗೆ ಏಳುವ ಸಾಧ್ಯತೆಯೂ ಇಲ್ಲದಿಲ್ಲ. ಎಂಬುದು ಹಲವಾರು ಆರ್ಥಿಕ ವಿಶ್ಲೇಷಕರ ಎಚ್ಚರಿಕೆ.

ದೇಶದ ರಕ್ಷಣಾ ಸಚಿವ ರಾಜ್‍ನಾಥ್‍ಸಿಂಗ್, ಗೃಹಸಚಿವ ಅಮಿತ್‍ಶಾ, ಆಹಾರ ಖಾತೆ ಸಚಿವ ರಾಮ್‍ವಿಲಾಸ್‍ಪಾಸ್ವಾನ್, ಇಂಧನ ಸಚಿವ ಧರ್ಮೇಂದ್ರ ಪ್ರಧಾನ್, ವಾರ್ತಾ ಸಚಿವ ಪ್ರಕಾಶ್‍ಜಾವೇಡ್ಕರ್, ಕೃಷಿ ಸಚಿವ ನರೇಂದ್ರ ವರ್ಮಾ, ಸ್ಮøತಿಇರಾನಿ ಸೇರಿದಂತೆ ಪ್ರಮುಖ ಖಾತೆಗಳ ಕೇಂದ್ರ ಸಚಿವರು ಲಾಕ್‍ಡೌನ್ ತೆರವು ಸಂಬಂಧಿತ ಚರ್ಚಿಸಿ ಸಾಧ್ಯಾಸಾಧ್ಯತೆಗಳ ಬಗ್ಗೆ ಚಿಂತನೆ ಹರಿಸಿದ್ದಾರೆ.

ಮೂಲಗಳ ಪ್ರಕಾರ, ಈ ವಾರದ ಆರೋಗ್ಯ ಸ್ಥಿತಿ ಗಮನಿಸಿ ಲಾಕ್‍ಡೌನ್ ತೆರವುಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ಏಪ್ರಿಲ್ 14 ರ ನಂತರ ಲಾಕ್‍ಡೌನ್ ತೆರವುಗೊಳಿಸಿದ್ದೇ ಆದಲ್ಲಿ ದೇಶದ ವಿವಿಧ ರಾಜ್ಯಗಳ ಆರೋಗ್ಯ ಸ್ಥಿತಿಗತಿ ನೋಡಿಕೊಂಡು ಆಯಾ ರಾಜ್ಯಕ್ಕೆ ತಕ್ಕುನಾದ ನಿಯಮ ಜಾರಿಗೊಳಿಸುವ ಸಾಧ್ಯತೆಯೂ ಇದೆ. ಕೊರೊನಾ ಸೋಂಕು ಕಮ್ಮಿಯಿರುವ ರಾಜ್ಯಗಳಿಗೆ ಮತ್ತು ಹೆಚ್ಚಿರುವ ರಾಜ್ಯಗಳಿಗೆ ಬೇರೆ-ಬೇರೆ ನಿಯಮ ಜಾರಿಯಾದೀತು.

ನಾಲ್ಕು ಹಂತಗಳಲ್ಲಿ ಲಾಕ್‍ಡೌನ್ ತೆರವುಗೊಳಿಸುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ದೇಶದ ಆಹಾರೋತ್ಪನ್ನ ಘಟಕಗಳನ್ನು ತೆರವುಗೊಳಿಸು ವುದು. ಅಗತ್ಯ ಸೇವೆಗಳಿಗೆ ಅವಕಾಶ ನೀಡುವುದು, ಯಂತ್ರೋಪಕರಣಗಳಿಂದ ನಿರ್ವಹಿಸಬಲ್ಲ ಘಟಕಗಳ ಪ್ರಾರಂಭಕ್ಕೆ ಅವಕಾಶ ನೀಡುವಿಕೆ.

ಪ್ರತೀ ಸಂಸ್ಥೆಯ ಶೇ. 25 ರಷ್ಟು ಸಿಬ್ಬಂದಿಗಳಿಗೆ ಮೊದಲ ಹಂತದಲ್ಲಿ ಕೆಲಸ ನಿರ್ವಹಿಸಲು ಅವಕಾಶ. ಎರಡನೇ ಹಂತದಲ್ಲಿ ಶೇ.50 ಮೂರನೇ ಹಂತದಲ್ಲಿ ಶೇ.75 ರಷ್ಟು ಸಿಬ್ಬಂದಿಗಳಿಗೆ ಕೆಲಸಕ್ಕೆ ಅವಕಾಶ ನೀಡಿ ನಾಲ್ಕನೇ ವಾರದ ಕೊನೇ ಹಂತದಲ್ಲಿ ಮೊದಲಿನಂತೆ ಎಲ್ಲಾ ರೀತಿಯಲ್ಲಿಯೂ ನಿರ್ಭಂಧ ತೆರವುಗೊಳಿಸುವಿಕೆ ಸರ್ಕಾರದ ಮುಂದಿರುವ ಆಯ್ಕೆಯಲ್ಲಿ ಪ್ರಮುಖವಾಗಿದೆ.

ಬಸ್, ರೈಲು, ವಿಮಾನ ಸೇರಿದಂತೆ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆಗಳನ್ನು 1 ತಿಂಗಳ ಮಟ್ಟಿಗೆ ಸಂಚಾರಕ್ಕೆ ಬಿಡದೇ ಇರುವ ಚಿಂತನೆಯೂ ಇದೆ. ಜನರ ಸಂಚಾರಕ್ಕೆ ಕಡಿವಾಣ ಹಾಕಿ ಕೊರೊನಾ ಸೋಂಕು ಕೂಡ ವ್ಯಾಪಿಸದಂತೆ ತಡೆಗಟ್ಟುವ ಉದ್ದೇಶ ಈ ತೀರ್ಮಾನದಲ್ಲಿದೆ.

ಹೀಗಾಗಿಯೇ ಭಾರತೀಯ ರೈಲು ಮತ್ತು ದೇಶದ ವಿವಿಧ ವಿಮಾನ ಯಾನ ಸಂಸ್ಥೆಗಳು ಇನ್ನೂ ಏಪ್ರಿಲ್-14ರ ನಂತರದ ಪ್ರಯಾಣದ ಟಿಕೆಟ್ ವಿತರಿಸುತ್ತಿಲ್ಲ.

ದೇಶದ 710 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳಿವೆ. ಹೀಗಾಗಿ ಸೋಂಕು ಪ್ರಕರಣ ವರದಿಯಾಗದ ಮತ್ತು ಪ್ರಮಾಣ ಕಡಿಮೆ ಯಿರುವ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿಯೇ ಆಂತರಿಕ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯೂ ಹೆಚ್ಚಿದೆ.

ಜನಸಂಚಾರಕ್ಕೆ ಅವಧಿ ನಿಗದಿಪಡಿಸಿ ಬೇಕಾಬಿಟ್ಟಿ ಸಂಚಾರಕ್ಕೆ ಅನುವು ಮಾಡಿಕೊಡದಂತೆ ಗಮನ ಹರಿಸಲಾಗುತ್ತದೆ. ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ ಮುಂದುವರೆಯುವ ಸಾಧ್ಯತೆಯಿದೆ.

ಸರ್ಕಾರಿ ಕಾರ್ಯಗಳನ್ನು ಸುಗಮವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಕಛೇರಿಗಳು ಪ್ರಾರಂಭವಾಗುವ ಸಾಧ್ಯತೆಯಿದೆ. ಮಾಲ್, ಸಿನಿಮಾಮಂದಿರ ಸೇರಿದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಪ್ರದೇಶಗಳನ್ನು ಮತ್ತಷ್ಟು ದಿನಗಳ ಕಾಲ ಮುಚ್ಚುವ ಸಾಧ್ಯತೆ ಹೆಚ್ಚಿದೆ. ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಸುವಿಕೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೂ ಮುಂದುವರೆಯುವ ಸಾಧ್ಯತೆ ನಿಚ್ಚಳವಾಗಿದೆ. ಜಾತ್ರೆ, ಹಬ್ಬಗಳು, ಸಾಮೂಹಿಕ ಪ್ರಾರ್ಥನೆಗಳಿಗೂ ಕಡಿವಾಣ ಮುಂದುವರೆಯುವ ಸಾಧ್ಯತೆಯೇ ಕಂಡು ಬರುತ್ತಿದೆ.

ಕೊನೇ ಹನಿ: ಜಗತ್ತಿನಾದ್ಯಂತ ಕೊರೊನಾ ಸೋಂಕಿತ ದೇಶಗಳ ಸ್ಥಿತಿ-ಗತಿ ಅಧ್ಯಯನ ಮಾಡಿರುವ ಅಮೇರಿಕಾ ಮೂಲದ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಭಾರತದಲ್ಲಿಯೂ ಕೊರೊನಾ ಸಂಬಂಧಿತ ಅಧ್ಯಯನ ನಡೆಸಿ ನೀಡಿರುವ ವರದಿಯಂತೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ಸೂಕ್ಷ್ಮವಾಗಿದ್ದು ಸೆಪ್ಟೆಂಬರ್‍ವರೆಗೂ ಲಾಕ್‍ಡೌನ್ ಮುಂದುವರಿಕೆ ಅನಿವಾರ್ಯವಾಗಲಿದೆ. ಜೂನ್ ಮೂರನೇ ವಾರದಲ್ಲಿ ಭಾರತದಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಲಿದೆ. ಯುವಪೀಳಿಗೆಗೆ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಸೋಂಕು ತಗಲುವ ಸಾಧ್ಯತೆಯಿದೆ.