ಮಡಿಕೇರಿ, ಏ. 7: ದೆಹಲಿ ಧಾರ್ಮಿಕ ಸಭೆಯ ಸಂಬಂಧ ಜಿಲ್ಲೆಯಿಂದ ದೆಹಲಿಗೆ ತೆರಳಿದ ಒಟ್ಟು 24 ಜನರ ಪೈಕಿ, ಈಗಾಗಲೇ ನೀಡಿರುವ ಮಾಹಿತಿಯಂತೆ 5 ಮಂದಿ ದೆಹಲಿಯಲ್ಲಿ ಕ್ವಾರಂಟೈನ್ನಲ್ಲಿ ಮತ್ತು ಇನ್ನೂ 5 ಮಂದಿ ಹೊರ ಜಿಲ್ಲೆಗಳಲ್ಲಿ ವಾಸವಿದ್ದು, ಉಳಿದ ಎಲ್ಲಾ 14 ಜನರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್ನಲ್ಲಿ ಇರಿಸಲಾಗಿತ್ತು. ಸರ್ಕಾರದ ನಿರ್ದೇಶನದಂತೆ ಈ ಎಲ್ಲಾ 14 ಜನರ ಸಾಂಸ್ಥಿಕ ಸಂಪರ್ಕ ತಡೆ ಅವಧಿ ಮುಗಿದಿರುವುದರಿಂದ ಹಾಗೂ ಇವರಿಗೆ ಕೊರೊನಾ ವೈರಸ್ ನ ಲಕ್ಷಣಗಳಿರುವುದಿಲ್ಲ ಮತ್ತು ಅವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿರುವುದರಿಂದ ಅವರುಗಳನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಆದಾಗ್ಯೂ ಇವರು 14 ದಿನಗಳ ಕಡ್ಡಾಯ ಗೃಹ ಸಂಪರ್ಕ ತಡೆಯಲ್ಲಿರುತ್ತಾರೆ ಮತ್ತು ಇವರ ಆರೋಗ್ಯ ಸ್ಥಿತಿಯ ಬಗ್ಗೆ ನಿರಂತರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾವತಿಯಿಂದ ಗಮನಿಸಲಾಗುವುದು ಇನ್ನುಳಿದಂತೆ ಇಲ್ಲಿಯವರೆಗೆ ಒಟ್ಟು 78 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ ಇದರಲ್ಲಿ 74 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದ್ದು, ಉಳಿದ 4 ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.