ಸುಂಟಿಕೊಪ್ಪ, ಏ. 3: ಸುಂಟಿಕೊಪ್ಪ ಗ್ರಾ. ಪಂ. ವ್ಯಾಪ್ತಿಯಲ್ಲಿ ತರಕಾರಿ ವ್ಯಾಪಾರಸ್ಥರು ವಾಹನದಲ್ಲಿ ತರಕಾರಿಗಳನ್ನು ಗ್ರಾಹಕರ ಮನೆ ಮನೆಗಳಿಗೆ ತೆರಳಿ ನಿಗದಿತ ದರದಲ್ಲಿ ತರಕಾರಿ ಮಾರಲು ದೃಢೀಕರಣ ನೀಡಲಾಗುವು ದೆಂದು ಸೋಮವಾರಪೇಟೆ ಡಿವೈಎಸ್ಪಿ ಶೈಲೆಂದ್ರ ತಿಳಿಸಿದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಶೈಲೇಂದ್ರ ಅಧ್ಯಕ್ಷತೆಯಲ್ಲಿ ನಡೆದ ತರಕಾರಿ ಹಾಗೂ ದಿನಸಿ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ದಿನಸಿ ಅಂಗಡಿಯವರಿಗೆ ಗ್ರಾಹಕರು ದಿನಸಿ ವಸ್ತುಗಳ ಪಟ್ಟಿ ಮಾಡಿ ಕಳುಹಿಸಿದಾಗ ಸಾಮಗ್ರಿಗಳನ್ನು ಅಂಗಡಿ ಸಹಾಯಕನ ಮೂಲಕ ಮನೆ ಮನೆಗೆ ತಲುಪಿಸುವ ಕೆಲಸ ವಾಗಬೇಕು. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ದಿನಸಿ ಹಾಗೂ ತರಕಾರಿ ಖರೀದಿಸಲು ಗುಂಪು ಗುಂಪಾಗಿ ಬರುತ್ತಿರುವ ಗ್ರಾಹಕರನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಹಾಪ್ಕಾಮ್ಸ್ ದರದ ಅನ್ವಯ ತರಕಾರಿ ಮಾರಾಟ ಮಾಡತಕ್ಕದ್ದು. ಇಲ್ಲದಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಪಟ್ಟಣದಲ್ಲಿ ಸುಮ್ಮನೆ ಅಡ್ಡಾಡುವ ದ್ವಿಚಕ್ರ ವಾಹಗಳನ್ನು ಮುಟ್ಟುಗೋಲು ಹಾಕಿಕೊಂಡು ಮೊಕದ್ದಮೆ ದಾಖಲಿಸುವಂತೆ ಠಾಣಾಧಿಕಾರಿಗಳಿಗೆ ಡಿವೈಎಸ್ಪಿ ಸೂಚಿಸಿದರು. ಸಭೆಯಲ್ಲಿ ವೃತ್ತ ನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಬಿ. ತಿಮ್ಮಪ್ಪ ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಹಾಜರಿದ್ದರು. ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 7 ಗ್ರಾ. ಪಂ.ಗಳಿಗೆ ತೆರಳಿ ತರಕಾರಿಗಳನ್ನು ಮನೆ ಮನೆಗೆ ಮಾರಾಟ ಮಾಡುವ ಕೆಲಸವಾಗ ಲಿದ್ದು, 10 ವಾಹನಗಳನ್ನು ಹೊಂದಿ ರುವ ತರಕಾರಿ ಮತ್ತು ದಿನಸಿ ವ್ಯಾಪಾರಸ್ಥರಿಗೆ ತರಕಾರಿ ಮಾರಾಟ ಮಾಡಲು ಪರವಾನಗಿ ನೀಡಲಾಗಿದೆ.