ಗೋಣಿಕೊಪ್ಪ ವರದಿ, ಏ. 2 : ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ ಬೇಟೆ ಆರೋಪದಡಿ ಕಲ್ಲಳ್ಳ ವನ್ಯಜೀವಿ ವಲಯ ತಂಡ ಮಾಲು ಸಮೇತ ಆರೋಪಿಯನ್ನು ಬಂಧಿಸಿದೆ. ಕಾರ್ಮಾಡು ಗ್ರಾಮದ ದಾಳಿಂಬೆ ಕೊಲ್ಲಿ ಹಾಡಿ ನಿವಾಸಿ ರಮೇಶ್ ಆಲಿಯಾಸ್ ಅಪ್ಪು (40) ಬಂಧಿತ ಆರೋಪಿಯಾಗಿದ್ದು, ಉಳಿದ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಬಂಧಿತನೊಂದಿಗೆ ಜಿಂಕೆ ಕಳೇಬರ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಕಲ್ಲಳ್ಳ ವನ್ಯ ಜೀವಿ ವಲಯದ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಆರೋಪಿಗಳು ಕಾಡಿನಿಂದ ಜಿಂಕೆ ಕಳೇಬರವನ್ನು ಸಾಗಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭ ಆರೋಪಿ ರಮೇಶ್‍ನನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ನಾಲ್ವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಹುಣಸೂರು ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾಧಿಕಾರಿ ಡಿ.ಮಹೇಶ್‍ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೌಲ್ ಆಂಥೋನಿ ಮಾರ್ಗದರ್ಶನದಲ್ಲಿ ಕಲ್ಲಳ್ಳ ಆರ್ ಎಫ್ ಎಫ್ ಒ ಗಿರೀಶ್, ಡಿಆರ್ ಎಫ್ ಒ ಯೋಗೇಶ್, ಪಕಾಲಿ, ಗಣೇಶ್, ಧರ್ಮಪ್ಪ, ಕುಮಾರ್, ನಿರನ್ ಕಾರ್ಯಾಚರಣೆಯಲ್ಲಿದ್ದರು.