ಮಡಿಕೇರಿ, ಏ. 2: ದೇಶದಲ್ಲಿ ತಲೆದೋರಿರುವ ಕೊರೊನಾ ಸೋಂಕಿನ ಸಂದಿಗ್ಧ ಪರಿಸ್ಥಿತಿ ನಡುವೆ; ಸರಕಾರದ ಯೋಜನೆಯಂತೆ ಕೊಡಗಿನಲ್ಲಿ ಪ್ರಧಾನಮಂತ್ರಿ ಜನಧನ್ ಕಾರ್ಯಕ್ರಮದಡಿ; ಖಾತೆಗಳನ್ನು ಹೊಂದಿರುವ ಎಲ್ಲಾ ಮಹಿಳೆಯರಿಗೆ ಇದೇ ತಾ. 9 ರಿಂದ ಮುಂದಿನ ಮೂರು ತಿಂಗಳು ಪ್ರತಿಯೊಬ್ಬರಿಗೆ ತಲಾ ರೂ.500 ಮೊತ್ತ ಲಭಿಸಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರಕಟಿಸಿದ್ದಾರೆ.ಸರಕಾರದ ನಿರ್ದೇಶನದಂತೆ ಇಂದು ವಿವಿಧ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಅವರು; ಕೊಡಗಿನಲ್ಲಿ ಜನಧನ್ ಖಾತೆ ಹೊಂದಿರುವ ಮಹಿಳೆಯರಿಗೆ ಏಪ್ರಿಲ್, ಮೇ, ಜೂನ್ ಮಾಸದಲ್ಲಿ ತಲಾ ರೂ. 500 ರಂತೆ ಅವರವರ ಬ್ಯಾಂಕ್ ಉಳಿತಾಯ ಖಾತೆಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಕೊಡಗಿನಲ್ಲಿ ಇಂತಹ ಖಾತೆ ಹೊಂದಿರುವವರ ಒಟ್ಟು ಸಂಖ್ಯೆ ಸುಮಾರು 1.20 ಲಕ್ಷವಿದ್ದು; ಈ ಪೈಕಿ ಕೇವಲ ಮಹಿಳೆಯರಿಗೆ ಮಾತ್ರ ಆರ್ಥಿಕ ಸಹಾಯ ಅನ್ವಯವಾಗಲಿದೆ ಎಂದು ನೆನಪಿಸಿದ್ದಾರೆ.ಪಡಿತರ ಪೂರೈಕೆ : ಅಂತೆಯೇ ಕೊಡಗಿನಲ್ಲಿ ನಿನ್ನೆಯಿಂದ ಪಡಿತರ ಚೀಟಿ ಹೊಂದಿರದ ನಿರ್ಗತಿಕರು, ಭಿಕ್ಷುಕರು, ಕೂಲಿಕಾರ್ಮಿಕರ ನೆರವಿಗಾಗಿ ಆಹಾರ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿರುವ ಅವರು, ಪಡಿತರ ಚೀಟಿದಾರರಿಗೆ ಕೂಡ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಅನುಸಾರ ಅಕ್ಕಿ, ಗೋಧಿ ವಿತರಿಸಲಾಗುತ್ತಿದ್ದು; ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿಗಧಿಗೊಳಿಸಿರುವ ದರದಲ್ಲಿ ತರಕಾರಿಗಳನ್ನು ಕೂಡ ಗ್ರಾಮೀಣ ಜನತೆಗೆ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಐಟಿಡಿಪಿ ಇಲಾಖೆ ಕ್ರಮ : ಇನ್ನು ಕೊಡಗಿನ ಕಾಡಿನಂಚಿನಲ್ಲಿರುವ ಹಾಗೂ ಇತರ ಎಲ್ಲಾ ಗಿರಿಜನರಿಗೆ; ಸಮಗ್ರ ಗಿರಿಜನ ಕಲ್ಯಾಣ ಇಲಾಖೆಯಿಂದ ಆಹಾರ ಕಿಟ್‍ಗಳ ಪೂರೈಕೆ ಮಾಡಲಾಗುತ್ತಿದ್ದು; ಈಗಿನ ಸನ್ನಿವೇಶದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲದಂತೆ ಜಿಲ್ಲಾಡಳಿತ ಆದ್ಯತೆ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ನೆನಪಿಸಿದರು.
ಕಾಳಸಂತೆಗೆ ತಡೆ : ಈ ಎಲ್ಲಾ ಮುಂಜಾಗ್ರತೆಯ ಜೊತೆಗೆ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ; ವಾರದಲ್ಲಿ ಮೂರು ದಿವಸ ಹಾಗೂ ಗ್ರಾ.ಪಂ. ಹಂತದಲ್ಲಿ ಎಲ್ಲಾ ಗ್ರಾಮೀಣ ಜನತೆಗೆ
(ಮೊದಲ ಪುಟದಿಂದ) ತರಕಾರಿ ಇತ್ಯಾದಿಯನ್ನು ಎಪಿಎಂಸಿ ನಿಗದಿಗೊಳಿಸಿದ ನ್ಯಾಯಬೆಲೆಗೆ ಸರಬರಾಜು ಮತ್ತು ಮಾರಾಟಕ್ಕೆ ವರ್ತಕರ ಸಹಕಾರದಿಂದ ಕ್ರಮವಹಿಸಲಾಗಿದೆ ಎಂದು ವಿವರಿಸಿದ್ದಾರೆ.
ಜನತೆಯ ಸಹಕಾರಕ್ಕೆ ಕರೆ : ಕೊಡಗು ಜಿಲ್ಲಾಡಳಿತವು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಇತರ ಇಲಾಖಾ ಅಧಿಕಾರಿಗಳ ತಂಡದೊಂದಿಗೆ ತಾಲೂಕು, ಹೋಬಳಿ, ಪಂಚಾಯಿತಿ ಹಂತಗಳಲ್ಲಿ ಕೊರೊನಾ ವೈರಸ್ ಸೋಂಕು ತಡೆಗೆ ಶ್ರಮಿಸುತ್ತಿದ್ದು; ಸಾರ್ವಜನಿಕರು ತಮ್ಮ ಸುರಕ್ಷತೆಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ‘ಶಕ್ತಿ’ ಮೂಲಕ ಕರೆ ನೀಡಿದರು.