ಮಡಿಕೇರಿ, ಏ. 2: ಕೇರಳ ವಕೀಲರ ಸಂಘ ಅಲ್ಲಿನ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ; ಕೇರಳ - ಕರ್ನಾಟಕ ಗಡಿ ಮಾರ್ಗ ತೆರವಿಗೆ ಕೇರಳ ಉಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಕೇಂದ್ರ ಸರಕಾರ ಪರಿಶೀಲಿಸುತ್ತಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಈ ತೀರ್ಪು ಕೇಂದ್ರ ಸರಕಾರದ ಪರಿಶೀಲನೆಗೆ ಒಳಪಟ್ಟಿದ್ದು; ಎರಡು ರಾಜ್ಯಗಳಿಗೆ ಸಂಬಂಧಿಸಿದ ವ್ಯಾಜ್ಯವಾಗಿದೆ ಎಂದು ತಜ್ಞರ ಅನಿಸಿಕೆಯಾಗಿದೆ.ಈಗಿನ ಪ್ರಕಾರ ಕೇರಳದಿಂದ ಕಾಸರಗೋಡು ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿದೆ. ಹೀಗಾಗಿ ಈ ಮಾರ್ಗಕ್ಕೆ ಸಂಬಂಧಿಸಿದ ನ್ಯಾಯಾಲಯದ ಆದೇಶವನ್ನು ಕೇಂದ್ರ ಸರಕಾರ ಪರಿಶೀಲಿಸಿ ತನ್ನ ನಿರ್ಧಾರ ಪ್ರಕಟಿಸಬೇಕಿದೆ. ಇಂತಹ ಆದೇಶವನ್ನು ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರವು ಏಕಪಕ್ಷೀಯವಾಗಿ ಪಾಲಿಸುವ ಮುನ್ನ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಜನತೆಯ ಹಿತಕಾಪಾಡುವ ಬಗ್ಗೆಯೂ ಚಿಂತಿಸಬೇಕಿದೆ ಎಂದು ಕಾನೂನು ತಜ್ಞರು ಬೊಟ್ಟು ಮಾಡಿದ್ದಾರೆ.ಅಲ್ಲದೆ; ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಕೇರಳ ಹೈಕೋರ್ಟ್ ತೀರ್ಪು ಸಂಬಂಧ ಮೇಲ್ಮನವಿ ಸಲ್ಲಿಸಿ; ಸಮಗ್ರ ಭಾರತದ ಎಲ್ಲಾ ಪ್ರಜೆಗಳ ಸುರಕ್ಷತೆ ಸಂಬಂಧ ಕಾಳಜಿವಹಿಸಬೇಕಿದೆ ಎಂದು ಮನವರಿಕೆ ಮಾಡಿಕೊಟ್ಟು ಪ್ರಸ್ತುತ ಕೇರಳದಲ್ಲಿ ಪಸರಿಸುತ್ತಿರುವ ಸಾಂಕ್ರಾಮಿಕ ರೋಗ ಕೊರೊನಾ ತಡೆ ಸಂಬಂಧ ಗಡಿ ಮಾರ್ಗ ಮುಚ್ಚಿರುವ ಸಂದರ್ಭವನ್ನು ತಿಳಿಯಪಡಿಸಬೇಕಿದೆ.ಕೇರಳ ವಕೀಲರ ಸಂಘದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ; ನ್ಯಾಯಾಲಯ ನೀಡಿರುವ ಆದೇಶವನ್ನು ಕೈಬಿಡುವಂತೆ ಕರ್ನಾಟಕ ವಕೀಲರ ಸಂಘ ಕೂಡ ಮರು ಮನವಿ ಸಲ್ಲಿಸಿದ್ದು; ಆ ವೇಳೆಗೆ ಏಕಪಕ್ಷೀಯ ಆದೇಶ ಹೊರಬರುವಂತಾಗಿದೆ ಎಂದು ಕರ್ನಾಟಕದ ಕಾನೂನು ತಜ್ಞರು ಉಲ್ಲೇಖಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಈ ವಿವಾದಕ್ಕೆ ಕೇಂದ್ರ ಸರಕಾರವೇ ಪರಿಹಾರ ಕಂಡುಹಿಡಿಯಬೇಕಿದ್ದು; ಕೇರಳದ ಜನತೆಯ ಹಿತ ಮತ್ತು ಮೂಲಭೂತ ಹಕ್ಕುಗಳು ದೇಶದ ಇತರ ರಾಜ್ಯಗಳಿಗೆ ಮತ್ತು ಇಡೀ ದೇಶದ ಪ್ರತಿಯೊಬ್ಬ ಪ್ರಜೆಗೆ ಅನ್ವಯಿಸುವಂತದ್ದು; ಎಂಬದನ್ನು ಭಾರತ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವದು ಅತ್ಯವಶ್ಯಕವೆಂದು ತಜ್ಞರ ನಿಲುವಾಗಿದೆ.
ಆತಂಕ ಅನಗತ್ಯ : ಈ ಎಲ್ಲಾ ಸನ್ನಿವೇಶದಲ್ಲಿ ಕೊಡಗು ಹಾಗೂ ದಕ್ಷಿಣಕನ್ನಡ ಸೇರಿದಂತೆ ಕರ್ನಾಟಕದ ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ರಾಜ್ಯ ಉಚ್ಚನ್ಯಾಯಾಲಯದ ವಕೀಲ ಎ.ಎಸ್. ಪೊನ್ನಣ್ಣ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರೂ ಆಗಿರುವ ಕಾನೂನು ತಜ್ಞ ಕೆ.ಜಿ.ಬೋಪಯ್ಯ ಪ್ರತಿಪಾದಿಸಿದ್ದಾರೆ. ಆ ದಿಸೆಯಲ್ಲಿ ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಲು ತಯಾರಿ ನಡೆದಿದೆ ಎಂದು ಸುಳಿವು ನೀಡಿದ್ದಾರೆ.
ರಾಜ್ಯ ಹೆದ್ದಾರಿ ಗಡಿ : ಪ್ರಸ್ತುತ ಕೊಡಗಿನ ಮಾಕುಟ್ಟ, ಕುಟ್ಟ, ಕರಿಕೆಯಲ್ಲಿ ಮುಚ್ಚಲ್ಪಟ್ಟಿರುವ ಕೇರಳ ಗಡಿ ದ್ವಾರಗಳು ಈಗಿನ ಮಟ್ಟಿಗೆ ರಾಜ್ಯ ಹೆದ್ದಾರಿಗಳಿದ್ದು; ಈ ಮಾರ್ಗ ಮುಚ್ಚಿರುವದು ಕೊಡಗು ಮತ್ತು ಇಡೀ ರಾಜ್ಯದ ಜನತೆಯ ಬದುಕಿನ ಸುರಕ್ಷಾ ಕ್ರಮವಾಗಿ ಹೊರತು ಬೇರೆ ಯಾವ ಉದ್ದೇಶಕ್ಕಾಗಿ ಅಲ್ಲವೆಂದು ನೆನಪಿಸಿದ್ದಾರೆ. ಅಲ್ಲದೆ; ಇದು ಕೇವಲ ಕರ್ನಾಟಕ - ಕೇರಳಕ್ಕೆ ಸೀಮಿತ ವಿವಾದವಾಗಿರದೆ; ಇಡೀ ದೇಶದ ಬಹುತೇಕ ರಾಜ್ಯಗಳು ಹಾಗೂ ದೇಶದ ಗಡಿಗಳನ್ನು ಕೊರೊನಾ ಸೋಂಕು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದೆ ಎಂದು ಉದಾಹರಣೆ ನೀಡಿದ್ದಾರೆ.