ಗೋಣಿಕೊಪ್ಪಲು. ಮಾ. 31: ಇಂದು ಕಫ್ರ್ಯೂ ಸಡಿಲಿಸಿದ ಹಿನ್ನೆಲೆ ನಗರ ವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸಿ ತಮಗೆ ಬೇಕಾದ ಅವಶ್ಯ ಸಾಮಗ್ರಿಗಳನ್ನು ಖರೀದಿಸಿದರು.
ಪ್ರತಿ ದಿನಸಿ, ತರಕಾರಿ, ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡ ಜನತೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಕೊರೊನಾ ವೈರಸ್‍ನ ಬಗ್ಗೆ ಜಾಗ್ರತೆ ವಹಿಸಿದ್ದರು.
ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ಅಂಗಡಿಗಳಲ್ಲಿ, ಮಾರುಕಟ್ಟೆ ಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆ ಪೊಲೀಸರು ಧ್ವನಿವರ್ಧಕದ ಮೂಲಕ ನಾಗರಿಕರು ಅಂತರ ಕಾಯ್ದುಕೊಂಡು ಎಚ್ಚರಿಕೆ ವಹಿಸಬೇಕು ಎಂದು ಸಾರಿ ಸಾರಿ ಹೇಳುತ್ತಿದ್ದರು. ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಬಂದ ಹಿನ್ನೆಲೆ ಪೊಲೀಸರು ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟರು.
ಮೀನು, ಮಾಂಸದ ಅಂಗಡಿಗಳಿಗೆ ನಿರ್ಬಂಧ ಹೇರಿದ್ದ ಪರಿಣಾಮ ಇಂತಹ ಅಂಗಡಿಗಳಲ್ಲಿ ತರಕಾರಿ ಮಾರಾಟ ಮಾಡುವ ಮೂಲಕ ಜನಸಂದಣಿ ಕಡಿಮೆ ಮಾಡುವ ಪ್ರಯತ್ನ ಮಾಡಲಾಯಿತು. ಅಂಗಡಿ ಮುಂಗಟ್ಟುಗಳಲ್ಲಿ ಜನರು ಸಾಲು, ಸಾಲಾಗಿ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ನಿಂತಿದ್ದರು. ಪೊಲೀಸರು ಅಂಗಡಿ, ನಿಲ್ದಾಣದ ಮುಂದೆ ಅನಾವಶ್ಯಕವಾಗಿ ನಿಂತವರನ್ನು ಮನೆಗೆ ತೆರಳಲು ಸೂಚನೆ ನೀಡಿದರು.
ಸರ್ಕಲ್ ಇನ್ಸ್‍ಪೆಕ್ಟರ್ ರಾಮರೆಡ್ಡಿ, ಸಬ್ ಇನ್ಸ್‍ಪೆಕ್ಟರ್ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿ ನಗರದಲ್ಲಿ ಗಸ್ತು ಬಿಗಿಗೊಳಿಸಿದ್ದರು. ಆಟೋ ರಿಕ್ಷಾಗಳು ಇಲ್ಲದೆ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಜನರು ಕಷ್ಟಪಡುತ್ತಿದ್ದರು. ಪೆಟ್ರೋಲ್ ಬಂಕ್‍ಗಳು, ಮೆಡಿಕಲ್ ಸ್ಟೋರ್‍ಗಳು ಕಾರ್ಯ ನಿರ್ವಹಿಸಿದವು.
ಎ.ಟಿ.ಎಂ.ಗಳಲ್ಲಿ ಸರತಿಯ ಸಾಲಿನಲ್ಲಿ ಜನತೆ ಹಣ ಪಡೆಯಲು ಸಾಲಾಗಿ ನಿಂತಿದ್ದರು. ಕೆಲವು ಎ.ಟಿ.ಎಂ.ಗಳಲ್ಲಿ ಹಣ ಇಲ್ಲದೆ ಜನರು ವಾಪಸ್ಸಾದರು. ಕಫ್ರ್ಯೂ ಸಡಿಲದ ಅವಧಿ ಮುಗಿಯುತ್ತಿದ್ದಂತೆಯೇ ನಗರದಲ್ಲಿ ಜನರು ಕಡಿಮೆಯಾದರು.