ವೀರಾಜಪೇಟೆ, ಮಾ. 30: ಇಂದು ಬೆಳಗಿನ ಜಾವ 5.45ರ ಸಮಯದಲ್ಲಿಯೇ ವಿವಿಧ ದಿನಸಿ ಇಲ್ಲಿನ ನಿವಾಸಿಗಳು ಅಂಗಡಿಗಳು, ಮಾರ್ಜಿನ್ ಫ್ರೀ, ಸೂಪರ್ ಮಾರ್ಕೆಟ್‍ಗಳ ಮುಂದೆ ಅಂತರ ಕಾಯ್ದುಕೊಂಡು ಸರದಿ ಪ್ರಕಾರ ಸಾಮಗ್ರಿಗಳನ್ನು ಖರೀದಿಸಿದರು. ಔಷಧಿ ಅಂಗಡಿಗಳು, ತರಕಾರಿ ಅಂಗಡಿಗಳಲ್ಲೂ ಖರೀದಿಗೆ ಜನರು ಮುಗಿಬಿದ್ದಿದ್ದು ಕಂಡು ಬಂತು.
ಯಾವುದೇ ಅಂಗಡಿಗಳ ಮುಂದೆ ಜನರು ಖರೀದಿಗೆ ಗುಂಪು ಸೇರುತ್ತಿದ್ದರೆ ಪೊಲೀಸರು ಚದುರಿಸುತ್ತಿದ್ದರು. ಜಿಲ್ಲಾಡಳಿತದ ನಿರ್ದೇಶನದಂತೆ ಇಂದು ವೀರಾಜಪೇಟೆ ಪಟ್ಟಣದ ಸುತ್ತಮುತ್ತ ಇರುವ ಬೇಕರಿಗಳು ತೆರದಿದ್ದರೂ ಬೇಕರಿಯಲ್ಲಿ ಹಳೆಯ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಯಿತು.
ಅಪರಾಹ್ನ ಹನ್ನೆರಡು ಗಂಟೆಯಾಗುತ್ತಲೆ ಪೊಲೀಸರು ಅಂಗಡಿಗಳು ಹಾಗೂ ನಿವಾಸಿಗಳಿಗೆ ಮೈಕ್‍ನಲ್ಲಿ ಅರಿವು ಮೂಡಿಸಿ ಮನೆಗೆ ತೆರಳುವಂತೆ ಸೂಚಿಸುತ್ತಿದ್ದರು. ಇದರಿಂದ ಎಲ್ಲ ಅಂಗಡಿಗಳು ಸಮಯವನ್ನು ಕಾಯ್ದುಕೊಂಡು ಮುಚ್ಚುವಂತಾಯಿತು.
ಇಲ್ಲಿನ ಗೋಣಿಕೊಪ್ಪ ರಸ್ತೆಯ ನಿವಾಸಿಗಳ ಪ್ರಕಾರ ದಿನಸಿ ಅಂಗಡಿಗಳು, ಮಾರ್ಜಿನ್ ಫ್ರೀ ಮಳಿಗೆ ಗಳಲ್ಲಿಯೂ ಅಗತ್ಯ ಸಾಮಗ್ರಿಗಳು ದೊರೆಯುತ್ತಿಲ್ಲ. ಈ ಬಗ್ಗೆ ತಾಲೂಕು ಆಡಳಿತ ಗಮನ ಹರಿಸಬೇಕು. ಪೆಟ್ರೋಲ್ ಬಂಕ್‍ನಲ್ಲಿಯೂ ಗ್ರಾಹಕರು ಮಾಮೂಲಿನಂತ್ತಿದ್ದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ನಿರ್ಗತಿಕರು, ಭಿಕ್ಷುಕರು, ಕಡುಬಡವರು ಸೇರಿದಂತೆ ಹಿಂದುಳಿದ ವರ್ಗಕ್ಕೆ ಸಾಮಗ್ರಿಗಳನ್ನು ವಿತರಿಸಲು ಇಲ್ಲಿನ ಗಡಿಯಾರ ಕಂಬದ ಪ್ರಯಾಣಿಕರ ತಂಗುದಾಣದಲ್ಲಿ ‘ಹಸಿದ ಹೊಟ್ಟೆಗೆ ದೇಣಿಗೆ’ ಘಟಕಗಳನ್ನು ಆರಂಭಿಸಲಾಗಿದೆ. ಇದರಂತೆ ಖಾಸಗಿ ಬಸ್ಸು ನಿಲ್ದಾಣ, ಗೋಣಿಕೊಪ್ಪ ರಸ್ತೆ ಹಾಗೂ ದೊಡ್ಡಟ್ಟಿ ಚೌಕಿಯಲ್ಲಿ ಇದೇ ತರಹದ ಘಟಕಗಳನ್ನು ಆರಂಭಿಸಲಾಗಿದೆ.
ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಡಿ.ವೈ.ಎಸ್.ಪಿ. ಸಿ.ಟಿ. ಜಯಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಹಾಜರಿದ್ದರು. ಸ್ಥಳದಲ್ಲಿಯೇ ಇದ್ದ ದಾನಿಗಳು ಕೆಲವರು ಬೇಳೆ, ಅಕ್ಕಿಯನ್ನು ಘಟಕಕ್ಕೆ ನೀಡಿದರು.
ವೀರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ ತರಕಾರಿ ದಿನಸಿ ಸಾಮಗ್ರಿಗಳನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಹತ್ತು ಗೂಡ್ಸ್ ವಾಹನಗಳಿಗೆ ಪಾಸ್ ನೀಡಲಾಗಿದ್ದು ತಕ್ಷಣದಿಂದ ಈ ಸೇವೆ ಆರಂಭಿಸಲಾಗುವುದು. ಆ್ಯಫ್ ಮೂಲಕವು ಸಾಮಗ್ರಿಗಳ ಖರೀದಿಗೆ ವ್ಯವಸ್ಥೆಗೊಳಿಸಲಾಗಿದೆ. ಬೆಳಗ್ಗಿನ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಸೇವೆ ಮುಂದುವರೆಯಲಿದೆ ಎಂದು ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದರು.
ತಾ. 1ರಿಂದ ಇಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ಇಲ್ಲಿನ ತಾಲೂಕು ಮೈದಾನದಲ್ಲಿ ಸುಮಾರು 21 ತರಕಾರಿ ವ್ಯಾಪಾರಸ್ಥರಿಗೆ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ನ್ಯಾಯಸಮ್ಮತವಾದ ಬೆಲೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡುವಂತೆ ಸೂಚಿಸಲಾಗಿದ್ದು ಗ್ರಾಹಕರು ಹಾಗೂ ವ್ಯಾಪಾರಸ್ಥರ ನಡುವೆ ಅಂತರ ಕಾಯ್ದುಕೊಂಡು ವ್ಯವಹರಿಸುಂತೆ ನಿರ್ದೇಶಿಸಲಾಗಿದೆ.
224 ಮಂದಿಗೆ ಜ್ವರ ತಪಾಸಣೆ : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಇಲ್ಲಿಯವರೆಗೆ ಒಟ್ಟು 224 ಮಂದಿಗೆ ಜ್ವರ ತಪಾಸಣೆ ಮಾಡಲಾಗಿದೆ. ಜ್ವರ ತಪಾಸಣೆ ಘಟಕ ಮುಂದುವರೆಯಲಿದ್ದು ವಿದೇಶದಿಂದ ಬಂದ ಪ್ರವಾಸಿಗರಿಗೂ ಸ್ವಯಂ ಘೋಷಣೆಯೊಂದಿಗೆ ಅಗತ್ಯವಿದ್ದರೆ ನಿಗಾ ಘಟಕದ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.
ಪೊನ್ನಂಪೇಟೆ: ಕುಟ್ಟ, ಶ್ರೀಮಂಗಲ, ಕಾನೂರು, ಟಿ. ಶೆಟ್ಟಿಗೇರಿ, ಹುದಿಕೇರಿ ಬಲ್ಯಮಂಡೂರು, ಬಿ.ಶೆಟ್ಟಿಗೇರಿ ಸೇರಿದಂತೆ ದ.ಕೊಡಗಿನ ಬಹುತೇಕ ಗ್ರಾಮಗಳ ಅಂಗಡಿಗಳಿಗೆ ಬಂದ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆಯಾಗದಿರುವುದರಿಂದ ಈ ಭಾಗದ ಗ್ರಾಮಗಳಿಂದ ಪೊನ್ನಂಪೇಟೆಗೆ ಜನ ಸಾಗರ ಹರಿದು ಬಂದ ಕಾರಣ ಪೊನ್ನಂಪೇಟೆಯಲ್ಲಿ ವಾಹನ ದಟ್ಟಣೆ ಹಾಗೂ ಜನ ಜಂಗುಳಿ ಉಂಟಾಗಿತ್ತು. ಪೊನ್ನಂಪೇಟೆಯ ಬಹುತೇಕ ದಿನಸಿ ಅಂಗಡಿಗಳ ಮುಂದೆ ಯಾವುದೇ ರೀತಿಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಸಾಮಾನು ಖರೀದಿಗಾಗಿ ಮುಗಿಬೀಳುತ್ತಿದ್ದರು.
ಇಲ್ಲಿನ ಮಾರ್ಜಿನ್ ಫ್ರೀ ಮಾರ್ಕೆಟ್ ಹಾಗೂ ಗುಡ್ ವಿಲ್ ಮಾರ್ಕೆಟ್‍ಗಳಲ್ಲಿ ಜನದಟ್ಟಣೆ ಉಂಟಾಗಿತ್ತು. ಗುಂಪು ಗುಂಪಾಗಿ ಜನ ನುಗ್ಗುತಿದ್ದರು. ಈ ಸಂದರ್ಭ ಶಾಪ್‍ಗಳ ಬಾಗಿಲನ್ನು ಎಳೆದು ಒಳಗೆ ಇರುವ ಜನರು ಖರೀದಿಸಿದ ನಂತರ, ಹೊರಗೆ ಕ್ಯೂ ನಿಂತಿದ್ದ ಜನರನ್ನು ಮತ್ತೆ ಒಳಗೆ ಸೇರಿಸಿಕೊಂಡು ಸಾಮಗ್ರಿ ವಿತರಿಸಲಾಯಿತು.
ಕೆಲವು ತರಕಾರಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ತರಕಾರಿ ಮಾರಾಟ ಮಾಡುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿತ್ತು.
ಚಾನಲ್ ಕೂರ್ಗ್ ತಂಡ ಪೊನ್ನಂಪೇಟೆ ಕುಂದ ರಸ್ತೆಯಲ್ಲಿ ತರಕಾರಿ ಮಳಿಗೆ ತೆರೆದು ಹುಣಸೂರು ಹಾಗೂ ಕೆ.ಆರ್. ನಗರ ಕಡೆಯಿಂದ ತರಕಾರಿಗಳನ್ನು ಖರೀದಿಸಿ ತಂದು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಯಿತು.
ಸಿದ್ದಾಪುರ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಹೊರಡಿಸಿರುವ ನಿರ್ಬಂಧವನ್ನು ಸಡಿಲಿಕೆಗೊಳಿಸಿದ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು.
ಜನರ ಹಾಗೂ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು ದಿನಸಿ ಹಾಗೂ ತರಕಾರಿ ಅಂಗಡಿಗಳಲ್ಲಿ ಜನರ ನೂಕುನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡರು ಅಲ್ಲದೆ ದಿನಸಿ ಮಾರಾಟ ಮಾಡುವ ಅಂಗಡಿಗಳ ಬಳಿ ಹೆಚ್ಚಿನ ಜನಸಂಖ್ಯೆ ಸೇರದ ರೀತಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಸಾಮಗ್ರಿ ಖರೀದಿಸಿ ಕೊಳ್ಳುವಂತೆ ಸೂಚಿಸಿದರು.
ಪೆಟ್ರೋಲ್ ಬಂಕ್ ಮೆಡಿಕಲ್ ಅಂಗಡಿಗಳು ತೆರೆದಿದ್ದರೂ ಕೂಡ ಗ್ರಾಹಕರ ಸಂಖ್ಯೆ ವಿರಾಳವಾಗಿತ್ತು. ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿಯಲ್ಲಿ ಪಡಿತರ ಅಂಗಡಿ ತೆರೆಯಲಾಗಿದ್ದರೂ ಕೂಡ ಗ್ರಾಹಕರ ಸಂಖ್ಯೆ ಕಡಿಮೆಯಿತ್ತು.