ಭಾಗಮಂಡಲ, ಮಾ. 30: ಸಂತೆಯ ದಿನವಾದ ಸೋಮವಾರ ಭಾಗಮಂಡಲ ವ್ಯಾಪ್ತಿಯಲ್ಲಿ ಬೆಳಿಗ್ಗೆ ಏಳು ಗಂಟೆಯಿಂದಲೇ ಸಂತೆ ಆರಂಭಗೊಂಡಿತು. ದಿನಸಿ, ತರಕಾರಿ ಮತ್ತಿತರ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು. (ಮೊದಲ ಪುಟದಿಂದ) ಕೇವಲ ಒಂದು ಗಂಟೆಯಲ್ಲಿ ದಿನಸಿ ಹಾಗೂ ತರಕಾರಿಗಳ ಕೊರತೆ ಕಂಡು ಬಂತು. ವಾಹನ ಸಂಚಾರ ಸೌಕರ್ಯವಿಲ್ಲದೆ ಅಗತ್ಯ ವಸ್ತುಗಳು ದೊರಕದೆ ಗ್ರಾಮೀಣ ಪ್ರದೇಶದ ಮಂದಿ ಪರದಾಡಿದರು. ಸ್ಥಳೀಯ ಕಾಫಿ ಬೆಳೆಗಾರರ ಹಾಗೂ ಇತರರ ವಾಹನಗಳನ್ನೇರಿ ಬಂದ ಗ್ರಾಮಸ್ಥರಿಗೆ ದಿನಸಿ ಮತ್ತಿತರ ಅಗತ್ಯ ವಸ್ತುಗಳು ದೊರಕದೆ ಸಮಸ್ಯೆ ಉಂಟಾಯಿತು. ದಿನಸಿ ಹಾಗೂ ತರಕಾರಿ ತುಂಬಿದ ಲಾರಿಗಳು ಭಾಗಮಂಡಲಕ್ಕೆ ಮಾತ್ರ ಬರುತ್ತಿವೆ. ಭಾಗಮಂಡಲ ವ್ಯಾಪ್ತಿಯ ಕೋರಂಗಾಲ ಅಯ್ಯಂಗೇರಿ, ಸಣ್ಣಪುಲಿಕೋಟು ಭಾಗಗಳಿಗೆ ಯಾವುದೇ ವಸ್ತುಗಳು ಸರಬರಾಜಾಗದೆ ಸಮಸ್ಯೆ ಉಂಟಾಗಿದೆ. ಕೂಡಲೇ ದಿನಸಿ ಪೂರೈಕೆಗೆ ಜಿಲ್ಲಾಡಳಿತ aಕ್ರಮಕೈಗೊಳ್ಳಬೇಕು ಎಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಾಸ್ಕ್ ಧರಿಸದೆ ಅಧಿಕ ಸಂಖ್ಯೆಯಲ್ಲಿ ಗ್ರಾಮೀಣ ಜನರು ಸಂತೆಗೆ ಧಾವಿಸಿದ್ದರು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಇದ್ದುದು ಕಂಡು ಬಂತು. ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಧ್ವನಿವರ್ಧಕದ ಮೂಲಕ ಸೂಚನೆಗಳನ್ನು ನೀಡುತ್ತಿದ್ದರೂ ಜನರು ಸ್ಪಂದಿಸದೇ ಇದ್ದುದು ಗೋಚರಿಸಿತು. ಮದ್ಯ ಸಿಗದೆ ಪರದಾಟ: ಪಾನಪ್ರಿಯರು ಮದ್ಯಕ್ಕಾಗಿ ಹಾತೊರೆಯುತ್ತಿದ್ದರು. ಮದ್ಯವ್ಯಸನಿಗಳು ಮದ್ಯ ಸಿಗದೆ ಆಸ್ಪತ್ರೆಗೆ ದಾಖಲಾದ ಪ್ರಕರಣವೂ ನಡೆದಿದೆ. ಅಸ್ವಸ್ಥ ವ್ಯಕ್ತಿಯೋರ್ವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ವಾಪಸು ಕರೆತರಲಾಗಿದೆ. ಮದ್ಯ ದೊರಕದೆ ಸ್ಥಿಮಿತ ಕಳೆದುಕೊಂಡ ಮೂರು ಪ್ರಕರಣಗಳು ದಾಖಲಾಗಿವೆ.