ಮಡಿಕೇರಿ, ಮಾ. 30: ವಿಶ್ವಕಂಡ ಶ್ರೇಷ್ಠ ಸೇನಾನಿಗಳಲ್ಲಿ ಒಬ್ಬರಾಗಿರುವ ಕೊಡಗಿನ ಹೆಮ್ಮೆಯ ಪುತ್ರ ಪದ್ಮಭೂಷಣ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಅವರ 114ನೇ ಜನ್ಮ ದಿನ ತಾ. 31 (ಇಂದು).ಇವರ ಜನ್ಮದಿನ ಕಾರ್ಯಕ್ರಮವನ್ನು ಫೀ.ಮಾ. ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂ, ಜಿಲ್ಲಾಡಳಿತ ಹಾಗೂ ಇತರ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮಡಿಕೇರಿಯಲ್ಲಿರುವ ಅವರು ಜನ್ಮ ತಳೆದ ನಿವಾಸ ‘ಸನ್ನಿಸೈಡ್’ನಲ್ಲಿ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿತ್ತು. ಆದರೆ ಪ್ರಸಕ್ತ ವರ್ಷ ಕೊರೊನಾ ಕಾರಣದಿಂದಾಗಿ ಇಡೀ ದೇಶದಲ್ಲಿ ‘ಲಾಕ್‍ಔಟ್’ ಘೋಷಿಸಲ್ಪಟ್ಟಿರುವದರಿಂದ ಜನ್ಮ ದಿನಾಚರಣೆ ಕಾರ್ಯ ಕ್ರಮವನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿಲ್ಲ. (ಮೊದಲ ಪುಟದಿಂದ) ಬದಲಿಗೆ ವಿವಿಧ ಸ್ಪರ್ಧೆಗಳು ಹಾಗೂ ಅವರ ವೃತ್ತಿ ಜೀವನದ ಮೆಲುಕು, ದೇಶಭಕ್ತಿಗೀತೆ ಇತ್ಯಾದಿಯೊಂದಿಗೆ ವ್ಯಾಟ್ಸಾಪ್‍ನಂತಹ ಸಾಮಾಜಿಕ ಜಾಲತಾಣದೊಂದಿಗೆ ನೆನಪಿಸಿಕೊಂಡು ಮನೆ ಮನೆಗಳಿಂದಲೇ ಗೌರವ ನೀಡಲಾಗುತ್ತಿದೆ. ಇದೊಂದು ರೀತಿಯಲ್ಲಿ ಈ ವರ್ಷದ ಪರಿಕಲ್ಪನೆಯಾಗಿದೆ. ಮಡಿಕೇರಿಯಲ್ಲಿರುವ ಅವರು ಜನ್ಮ ತಳೆದ ಮನೆಯಾಗಿರುವ ‘ಸನ್ನಿಸೈಡ್’ ಪ್ರಸ್ತುತ ಜನರಲ್ ತಿಮ್ಮಯ್ಯ ಸ್ಮಾರಕ ಭವನ (ಮ್ಯೂಸಿಯಂ) ಆಗಿ ಪರಿವರ್ತನೆಯಾಗುತ್ತಿದೆ. ಈಗಾಗಲೇ ಹಲವಷ್ಟು ಕಾಮಗಾರಿಗಳು ನಡೆದಿವೆ. ಬಾಕಿ ಯೋಜನೆಗಳು ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಈ ಮೇಲಿನ ಚಿತ್ರ ಈ ಹಿಂದೆ 1949 ರ ಸಂದರ್ಭದ ದೃಶ್ಯವಾಗಿದೆ. ತಿಮ್ಮಯ್ಯ ಅವರು ಆಗ ಮೇಜರ್ ಜನರಲ್ ಆಗಿದ್ದು, ಉತ್ತರ ಭಾರತದಲ್ಲಿ ಕರ್ತವ್ಯದಲ್ಲಿದ್ದಾಗ ತೆಗೆದ ಚಿತ್ರವಾಗಿದೆ. ಪುಟ್ಟ ಮಗುವೊಂದು ಅವರ ಕ್ಯಾಪ್ ತೆಗೆಯಲು ಯತ್ನಿಸುತ್ತಿದ್ದು ಮಗುವನ್ನು ಎತ್ತಿಕೊಂಡಿರುವ ತಿಮ್ಮಯ್ಯ ಅವರು ನಗು ಮುಖದಿಂದ ಇದ್ದಾರೆ.