ಮಡಿಕೇರಿ, ಮಾ. 30: ಅಸಂಘಟಿತ ಹಾಗೂ ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ ಹಾಗೂ ಹಾಡಿ ನಿವಾಸಿಗಳಿಗೆ ದಿನಸಿ ಸಾಮಗ್ರಿ ಪೂರೈಕೆ ಮಾಡಲು ಇಲಾಖೆಗಳಿಂದ ವ್ಯವಸ್ಥೆ ಮಾಡಲಾಗಿದೆ. ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ವಿಎಸ್‍ಎಸ್‍ಎನ್‍ಗಳಿಗೆ ಕಾರ್ಯನಿರ್ವಹಣೆಗೆ ಸಮಯ ನಿಗದಿಪಡಿಸಲಾಗಿದೆ.ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವದರಿಂದ ಜನಜೀವನ ಸ್ತಬ್ಧಗೊಂಡಿದೆ. ವಾಹನಗಳ ಓಡಾಟವಿಲ್ಲದೆ ಯಾವದೇ ಸಾಮಗ್ರಿಗಳ ಸರಬರಾಜಾಗುತ್ತಿಲ್ಲ; ಈ ನಡುವೆ ಜಿಲ್ಲಾಡಳಿತ ಜನತೆಗೆ ಅಗತ್ಯ ಸಾಮಗ್ರಿ ಖರೀದಿಗೆ ವಾರದ 3 ದಿನಗಳ ಕಾಲ ಆರು ಗಂಟೆಗಳ ಅವಧಿ ಕಾಲಾವಕಾಶ ನೀಡಿದೆಯಾದರೂ ದೂರದ ಅರಣ್ಯ ಪ್ರದೇಶದಂಚಿನಲ್ಲಿರುವ ಹಾಡಿವಾಸಿಗಳಿಗೆ ಹೋಗಿ - ಬರಲು ವ್ಯವಸ್ಥೆ, ಕಾರ್ಮಿಕರಿಗೆ ದಿನಗೂಲಿಯಿಲ್ಲ; ವಲಸಿಗ ಕಾರ್ಮಿಕರಿಗೆ ನೆಲೆಯೇ ಇಲ್ಲದಂತಾಗಿದೆ. ಇಂತಹ ಸಂಕಷ್ಟದಲ್ಲಿರವವರಿಗೆ ನೆರವಾಗಲು ಜಿಲ್ಲಾಡಳಿತದ ಮೂಲಕ ಸಂಬಂಧಿಸಿದ ಇಲಾಖೆಗಳು ಕ್ರಮಕೈಗೊಂಡಿವೆ.
ಅಂಗನವಾಡಿ ಮೂಲಕ ಆಹಾರ ಧಾನ್ಯಹಾಡಿಗಳಲ್ಲಿ ನೆಲೆಸಿರುವ ಮೂಲನಿವಾಸಿಗಳಿಗೆ ಗಿರಿಜನ ಅಭಿವೃದ್ಧಿ ಇಲಾಖೆ ವತಿಯಿಂದ ಆಹಾರ ಇಲಾಖೆ ಮೂಲಕ ಆಯಾ ಪ್ರದೇಶಗಳ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಧಾನ್ಯ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಚಾಮರಾಜನಗರ ಕಡೆಯಿಂದ ವಲಸೆ ಬಂದು ಕಾರ್ಮಾಡು, ಸಿದ್ದಾಪುರ, ಸುಂಟಿಕೊಪ್ಪ, ಒಂಟಿಯಂಗಡಿ ಮುಂತಾದೆಡೆಗಳಲ್ಲಿ ಸೇರಿಕೊಂಡಿರುವ 75 ಮಂದಿಗೂ ಕೂಡ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತಿದೆ ಎಂದು ಗಿರಿಜನ
(ಮೊದಲ ಪುಟದಿಂದ) ಅಭಿವೃದ್ಧಿ ಇಲಾಖೆ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ. ಇಲಾಖೆಯಲ್ಲಿ ಒಟ್ಟು ನಾಲ್ಕು ವೈದ್ಯಕೀಯ ಸಂಚಾರಿ ಯೂನಿಟ್‍ಗಳಿದ್ದು; ಅವುಗಳ ಮುಖೇನ ಆರೋಗ್ಯ ತಪಾಸಣೆ, ಔಷಧಿ ನೀಡುವ ವ್ಯವಸ್ಥೆ ಮಾಡಿರುವದಾಗಿ ಅವರು ತಿಳಿಸಿದ್ದಾರೆ.
ಆದರೆ ತರಕಾರಿ, ಹಣ್ಣು - ಹಂಪಲು ವಿತರಣೆಗೆ ಯಾವದೇ ವ್ಯವಸ್ಥೆಗಳಿಲ್ಲ; ಅವುಗಳನ್ನು ಜಿಲ್ಲಾಡಳಿತ ನೀಡಿರುವ ನಿಗದಿತ ಸಮಯದಲ್ಲಿ ಸನಿಹದ ಮಾರಾಟ ಮಳಿಗೆಗಳಲ್ಲಿ ಪಡೆದು ಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಕಾರ್ಮಿಕರಿಗೆ ವ್ಯವಸ್ಥೆ
ಜಿಲ್ಲೆಯಾದ್ಯಂತ ಕೆಲಸವಿಲ್ಲದೆ ಪರದಾಡುತ್ತಿರುವ ಸಂಘಟಿತ ದಿನಗೂಲಿ ಕಾರ್ಮಿಕರಿಗೆ ಹಾಗೂ ವಲಸಿಗ ಕಾರ್ಮಿಕರಿಗೆ ಜಿಲ್ಲಾಡಳಿತದ ವತಿಯಿಂದ ಕಾರ್ಮಿಕ ಇಲಾಖೆ ಮೂಲಕ ಆಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಉಚಿತವಾಗಿ ಇಂದಿರಾ ಕ್ಯಾಂಟೀನ್‍ನಿಂದ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಜಾರ್ಖಂಡ್‍ನಿಂದ, ಶಿಕಾರಿಪುರದಿಂದ ಬಂದಿರುವ ವಲಸಿಗ ಕಾರ್ಮಿಕರು ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಗೋಣಿಕೊಪ್ಪ ಹಾಗೂ ಮಡಿಕೇರಿಯಲ್ಲಿ ಇವರುಗಳಿದ್ದು; ಇವರುಗಳಿಗೂ ಇಂದಿರಾ ಕ್ಯಾಂಟೀನ್‍ನಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಜಾರ್ಖಂಡ್‍ನಿಂದ ಬಂದಿರುವ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‍ನ ಊಟ ಹಿಡಿಸದ್ದರಿಂದ ಅವರುಗಳಿಗೆ 15 ದಿನಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ರಾಮಕೃಷ್ಣ ಅವರು ಮಾಹಿತಿ ನೀಡಿದ್ದಾರೆ. ಈಗಾಗಲೇ ಕಾರ್ಮಿಕ ಇಲಾಖೆಯಿಂದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರತಿ ತಾಲೂಕಿನಲ್ಲಿ ಅಸಂಘಟಿತ ಹಾಗೂ ವಲಸಿಗ ಕಾರ್ಮಿಕರಿಗಾಗಿ ಛತ್ರಗಳನ್ನು ಕಾಯ್ದಿರಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರೆಡ್‍ಕ್ರಾಸ್ ನೆರವು
ಅಲ್ಲದೆ ಕಾರ್ಮಿಕರಿಗೆ ಮಾಸ್ಕ್ ಸ್ಯಾನಿಟೈಸರ್ ಹಾಗೂ ಸೋಪು ವಿತರಿಸಲು ಕ್ರಮಕೈಗೊಂಡಿದ್ದು; ರೆಡ್‍ಕ್ರಾಸ್ ಸಂಸ್ಥೆ ಮೂಲಕ ಇದನ್ನು ವಿತರಿಸಲಾಗುತ್ತಿದೆ. ನಿನ್ನೆ ಜಿಲ್ಲಾಧಿಕಾರಿಗಳ ಮುಖೇನ ರೆಡ್‍ಕ್ರಾಸ್ ಸಂಸ್ಥೆಗೆ ಚೆಕ್ ನೀಡುವ ಮೂಲಕ ಜವಾಬ್ದಾರಿ ವಹಿಸಲಾಗಿದ್ದು; ಶೀಘ್ರದಲ್ಲೇ ವಿತರಣೆ ಮಾಡಲಾಗುವದೆಂದು ಅವರು ತಿಳಿಸಿದರು.