ಸೋಮವಾರಪೇಟೆ, ಮಾ. 30: ಜಿಲ್ಲಾಡಳಿತದ ಸಮಯ ಸಡಿಲಿಕೆ ನಿರ್ಧಾರದಿಂದಾಗಿ ಸೋಮವಾರ ಪೇಟೆ ಪಟ್ಟಣಕ್ಕೆ ಸಾರ್ವಜನಿಕರು ಲಗ್ಗೆಯಿಟ್ಟರು. ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೂ ಪಟ್ಟಣದಲ್ಲಿ ಜನಜಂಗುಳಿ ಕಂಡುಬಂತು. ಕಳೆದ 9 ದಿನಗಳಿಂದ ಇದ್ದಂತಹ ಲಾಕ್‍ಡೌನ್ ಕೇವಲ 6 ಗಂಟೆಯಲ್ಲೇ ಮುಗ್ಗರಿಸಿಕೊಂಡಿತು. ಸಾಮಾಜಿಕ ಅಂತರಕ್ಕೆ ತಿಲಾಂಜಲಿಯಿಟ್ಟ ಬಹುತೇಕ ಮಂದಿ ಯಾವದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಅಂಗಡಿಗಳಿಗೆ ಮುಗಿಬಿದ್ದರು.ನಿಯಮಗಳು ಗಾಳಿಗೆ: ಕಳೆದೊಂದು ವಾರದಿಂದಲೂ ಬಿಗಿ ಕ್ರಮಗಳನ್ನೇ ಅಳವಡಿಸಿಕೊಂಡಿದ್ದ ಪಟ್ಟಣದಲ್ಲಿ ಇಂದು ಎಲ್ಲವೂ ಅಯೋಮಯದಂತಾಯಿತು. ಪಟ್ಟಣಕ್ಕೆ ಆಗಮಿಸಿದ ಸಾವಿರಾರು ಮಂದಿಯನ್ನು ಬೆರಳೆಣಿಕೆಯ ಪೊಲೀಸರು ಶಿಸ್ತಿಗೆ ಒಳಪಡಿಸುವಲ್ಲಿ ವಿಫಲರಾದರು. ಬೆಳಿಗ್ಗೆ 7.30ಕ್ಕೆ ಗುಂಪುಗೂಡಿದ್ದ ಮಂದಿಗೆ ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿಗಳು ಲಾಠಿ ಬೀಸಿದರು. ಇದಾದ ಕೆಲವೇ ಸಮಯದಲ್ಲಿ ಮತ್ತೆ ಗುಂಪುಗೂಡಲಾರಂಭಿಸಿದರು.

ನಿಲ್ದಾಣದಲ್ಲಿ ಸಂತೆ: ವಾರದ ಸಂತೆಯನ್ನು ರದ್ದುಗೊಳಿಸಲಾಗಿದ್ದರೂ ಸಹ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸಾವಿರಾರು ಮಂದಿ ನಿಲ್ದಾಣದಲ್ಲಿ ಜಮಾವಣೆಗೊಂಡರು. ಏಳೆಂಟು ವರ್ತಕರು ತರಕಾರಿಗಳನ್ನು ಮಾರಾಟಕ್ಕೆ ತಂದಿದ್ದರಿಂದ ಜನರು ಸರತಿ ಸಾಲಿನಲ್ಲಿ ನಿಂತರು. ಈ ಮಧ್ಯೆ ಪಟ್ಟಣ ಪಂಚಾಯಿತಿಯವರು ಮೀಟರ್ ಅಳತೆಯಲ್ಲಿ ಹಾಕಿದ್ದ ಮಾರ್ಕಿಂಗ್ ನಿಯಮ ಉಲ್ಲಂಘನೆಯಾಯಿತು. ಎಲ್ಲರೂ ನೂಕುನುಗ್ಗಲಿನಲ್ಲಿ ನಿಂತು ದಿನಸಿ, ತರಕಾರಿ ಖರೀದಿಸಿದರು.

ಖಾಸಗಿ ಬಸ್ ನಿಲ್ದಾಣದಲ್ಲಿಯೇ ದಿನಸಿ ಅಂಗಡಿ, ತರಕಾರಿ ಅಂಗಡಿ, ಮೆಡಿಕಲ್ ಶಾಪ್, ಹಣ್ಣಿನ ಅಂಗಡಿ, ಎಲೆಅಡಿಕೆ ಮಾರಾಟ ಕೇಂದ್ರಗಳು ಇರುವದರಿಂದ ಹೆಚ್ಚಿನ ನೂಕುನುಗ್ಗಲು ಕಂಡುಬಂತು. ಈ ಸಂದರ್ಭ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

ಇನ್ನು ಪಟ್ಟಣದ ಕ್ಲಬ್‍ರಸ್ತೆ ಯಲ್ಲಿರುವ ದಿನಸಿ ಅಂಗಡಿಗಳಲ್ಲಿ ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ವ್ಯಾಪಾರ ನಡೆಯಿತು. ಗ್ರಾಹಕರು ಗುಂಪಿನಲ್ಲಿ ನಿಂತು ಖರೀದಿಸಿದರು. ಸಂತೆ ಮಾರುಕಟ್ಟೆಯಲ್ಲಿ ಇದ್ದ ಅಂಗಡಿಗಳಲ್ಲೂ ಇಂತಹದೇ ಸನ್ನಿವೇಶ ಕಂಡುಬಂತು.

ಖಾಸಗಿ ಬಸ್ ನಿಲ್ದಾಣದಲ್ಲಿ ಜನಸಾಂದ್ರತೆ ಅಧಿಕವಾಗುತ್ತಿದ್ದಂತೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳು ನಿಲ್ದಾಣದ ಆವರಣದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿದರು. ಇದರೊಂದಿಗೆ ಇತರ ಅಂಗಡಿಗಳಲ್ಲಿ ಗುಂಪುಗೂಡಿದ್ದ ಮಂದಿಗೆ ಮೈಕ್

(ಮೊದಲ ಪುಟದಿಂದ) ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.

ವರ್ತಕರಿಂದ ಸುಲಿಗೆ: ತರಕಾರಿ ಸೇರಿದಂತೆ ದಿನಸಿ ಪದಾರ್ಥಗಳನ್ನು ನಿಗದಿತ ಬೆಲೆಯಲ್ಲೇ ಮಾರಾಟ ಮಾಡಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವದು ಎಂದು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಎಷ್ಟೇ ಎಚ್ಚರಿಕೆ ನೀಡಿದರೂ ಕೆಲ ವರ್ತಕರು ಮಾತ್ರ ಗ್ರಾಹಕರಿಂದ ಸುಲಿಗೆ ಮಾಡಿದರು. ಬೀನ್ಸ್ ಕೆ.ಜಿ.ಗೆ 50 ರೂಪಾಯಿ ನಿಗದಿ ಪಡಿಸಿದ್ದರೂ ಸಹ ಕೆಲವೊಮ್ಮೆ 80- 100ರವರೆಗೂ ಮಾರಾಟ ಮಾಡಿದರು. ಬಹುತೇಕ ತರಕಾರಿ, ಈರುಳ್ಳಿಯ ಬೆಲೆಯಲ್ಲೂ ಸಹ ಅಂಗಡಿಯಿಂದ ಅಂಗಡಿಗೆ ವ್ಯತ್ಯಾಸ ಕಂಡುಬಂತು.

ಒಣಮೀನಿಗೆ ಹೆಚ್ಚಿದ ಬೇಡಿಕೆ: ಹಸಿಮೀನು ಮತ್ತು ಎಲ್ಲಾ ರೀತಿಯ ಮಾಂಸ ಮಾರಾಟ ಬಂದ್ ಆಗಿರುವ ಹಿನ್ನೆಲೆ ಒಣಮೀನಿಗೆ ಭಾರೀ ಬೇಡಿಕೆ ಕಂಡುಬಂತು. ಪಟ್ಟಣದ ಒಣಮೀನು ಮಾರಾಟ ಕೇಂದ್ರಗಳಲ್ಲಿ ನೂರಾರು ಮಂದಿ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಮೀನು ಖರೀದಿಸಿದರು.

ಎ.ಟಿ.ಎಂ.ಗಳಲ್ಲಿ ಕ್ಯೂ: ಪಟ್ಟಣದ ಎ.ಟಿ.ಎಂ.ಗಳಲ್ಲಿ ಹೆಚ್ಚಿನ ಗ್ರಾಹಕರು ಕಂಡುಬಂದರು. ವಾರದ ಸಂತೆ ದಿನವಾದ ಹಿನ್ನೆಲೆ ಗ್ರಾಮೀಣ ಭಾಗದಿಂದ ಹೆಚ್ಚಿನ ಗ್ರಾಹಕರು ಪಟ್ಟಣದ ಬ್ಯಾಂಕ್‍ಗಳಿಗೆ ಆಗಮಿಸಿದರು. ಎ.ಟಿ.ಎಂ.ಗಳ ಎದುರು ಸರದಿ ಸಾಲಿನಲ್ಲಿ ನಿಂತು ಹಣ ಡ್ರಾ ಮಾಡಿದರು. ಕಾಫಿ ತೋಟ ಮಾಲೀಕರು ತಮ್ಮ ಕಾರ್ಮಿಕರಿಗೆ ವಾರದ ಸಂಬಳ ನೀಡಬೇಕಿರುವದರಿಂದ ಬ್ಯಾಂಕ್‍ಗಳಿಗೆ ತೆರಳಿ ಹಣ ಪಡೆದರು.

ಮಧ್ಯಾಹ್ನ 12 ಗಂಟೆಯಾಗುತ್ತಲೇ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಹಾಗೂ ತಹಶೀಲ್ದಾರ್ ಗೋವಿಂದರಾಜು ಅವರು ಬಂದ್ ಮಾಡಿಸಿದರು. ಪೊಲೀಸ್ ವಾಹನಗಳಲ್ಲಿ ಸೈರನ್ ಮೊಳಗಿಸುತ್ತಾ ಪಟ್ಟಣದಾದ್ಯಂತ ಸಂಚರಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚಿಸಿದರು.

ಕಾಫಿ ಮಾರಾಟಕ್ಕೆ ಅವಕಾಶ ನೀಡಲು ಆಗ್ರಹ: ಕಾಫಿ ತೋಟಗಳಲ್ಲಿ ಕೆಲಸ ಮಾಡಿರುವ ಕಾರ್ಮಿಕರು, ತೋಟದ ಲೈನ್ ಮನೆಯಲ್ಲಿರುವ ಕಾರ್ಮಿಕರಿಗೆ ಸಂಬಳ ನೀಡಲು ಕಾಫಿ ಬೆಳೆಗಾರರು ಹೆಣಗಾಡುತ್ತಿದ್ದು, ತಮ್ಮಲ್ಲಿರುವ ಕಾಫಿ, ಕರಿಮೆಣಸನ್ನು ಮಾರಾಟ ಮಾಡಲು ಅವಕಾಶ ನೀಡಬೇಕೆಂದು ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.

ಇದೀಗ ಎಲ್ಲಾ ಡಿಪೋಗಳು ಬಂದ್ ಆಗಿರುವದರಿಂದ ಬೆಳೆಗಾರರಿಂದ ಕಾಫಿ ಖರೀದಿ ಆಗುತ್ತಿಲ್ಲ. ಇದರಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ತಮ್ಮಲ್ಲಿರುವ ಕಾಫಿ ಹಾಗೂ ಕರಿಮೆಣಸನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಸೇರಿದಂತೆ ಇತರ ಬೆಳೆಗಾರರು ಆಗ್ರಹಿಸಿದ್ದಾರೆ.

ಶನಿವಾರಸಂತೆ: ಸೋಮವಾರ ಬೆಳಿಗ್ಗೆ ಪಟ್ಟಣದಲ್ಲಿ ಲಾಕ್‍ಡೌನ್ ಪರಿಗಣನೆಗೆ ತೆಗೆದುಕೊಳ್ಳದ ರೀತಿಯಲ್ಲಿ ಎಂದಿನಂತೆ ಜನಜಂಗುಳಿಯಿತ್ತು. ದಿನಸಿ, ತರಕಾರಿ ಅಂಗಡಿಗಳಲ್ಲಿ, ಬೇಕರಿ ಮೆಡಿಕಲ್ ಶಾಪ್‍ಗಳಲ್ಲಿ ಜನರು ಸರಕಾರದ ಆದೇಶ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ನೀಡಿದ ಎಚ್ಚರಿಕೆಗೆ ಕ್ಯಾರೆ ಎನ್ನದೆ ಅಗತ್ಯ ಸಾಮಗ್ರಿಕೊಳ್ಳಲು ಮುಗಿ ಬಿದ್ದರು.

ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಸ್ಪತ್ರೆ ಹೊರ ಆವರಣದಲ್ಲಿ 1 ಮೀಟರ್ ಅಂತರದಲ್ಲಿ ಕುರ್ಚಿಯನ್ನು ಹಾಕಲಾಗಿತ್ತು. ವೈದ್ಯರೊಬ್ಬರು ರೋಗಿಯನ್ನು ಕರೆದು ಚಿಕಿತ್ಸೆ ನೀಡುತ್ತಿದ್ದರು.

ಕುಶಾಲನಗರ : ವಾರದ ಮೂರು ದಿನಗಳ ಕಾಲ ನಿಷೇಧಾಜ್ಞೆ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಕುಶಾಲನಗರದಲ್ಲಿ ನಾಗರಿಕರು ಮುಗಿಬಿದ್ದ ದೃಶ್ಯ ಕಂಡುಬಂತು. ಬೆಳಿಗ್ಗೆ 6 ಗಂಟೆಯಿಂದ 12 ಗಂಟೆ ತನಕ ಪಟ್ಟಣದ ತರಕಾರಿ, ದಿನಸಿ, ಮೆಡಿಕಲ್ ಸ್ಟೋರ್‍ಗಳ ಮುಂದೆ ಗ್ರಾಹಕರು ಗುಂಪು ಗುಂಪಾಗಿ ಸೇರಿ ವಸ್ತುಗಳನ್ನು ಖರೀದಿಸುತ್ತಿದ್ದುದು ಕಂಡುಬಂತು. ನಂತರ ಪೊಲೀಸರು ಆಗಮಿಸಿ ಜನರನ್ನು ಚದುರಿಸುವಲ್ಲಿ ಯಶಸ್ವಿಯಾದರು.

ಮಾರುಕಟ್ಟೆ ಆವರಣದಲ್ಲಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿ ತರಕಾರಿ ಮಾರುತ್ತಿದ್ದ ಸ್ಥಳಗಳಲ್ಲಿ ಭಾರೀ ನೂಕುನುಗ್ಗಲಿನೊಂದಿಗೆ ಜನರು ಕೊರೊನಾ ಸೋಂಕಿನ ಪರಿಣಾಮವನ್ನೇ ಮರೆತಂತಿತ್ತು. 6 ಗಂಟೆಯಿಂದ 8 ಗಂಟೆ ತನಕ ವಾಹನಗಳಲ್ಲಿ ಆಗಮಿಸಿದ ಸುತ್ತಮುತ್ತಲಿನ ಬಡಾವಣೆ ಜನತೆ ಹೆಚ್ಚಿನ ಪ್ರಮಾಣದ ಸಾಮಗ್ರಿಗಳನ್ನು ಒಯ್ದ ಕಾರಣ 10 ಗಂಟೆ ವೇಳೆಗೆ ಕೆಲವು ಅಂಗಡಿಗಳಲ್ಲಿ ವಸ್ತುಗಳು ಖಾಲಿಯಾದವು. ಇನ್ನೊಂದೆಡೆ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಿರ್ದೇಶನದಂತೆ ಕುಶಾಲನಗರ ಪಟ್ಟಣದಲ್ಲಿ ಎರಡು ವಾಹನಗಳ ಮೂಲಕ ಮತ್ತು ಗ್ರಾಮೀಣ ಭಾಗದಲ್ಲಿ ಒಂದು ವಾಹನದಲ್ಲಿ ಅಗತ್ಯ ವಸ್ತುಗಳಾದ ತರಕಾರಿ, ಹಣ್ಣುಗಳನ್ನು ಮನೆಮನೆಗೆ ತೆರಳಿ ಮಾರಾಟ ಮಾಡಲಾಗುತ್ತಿದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ತಿಳಿಸಿದ್ದಾರೆ.

ಮೈಸೂರು ಎಪಿಎಂಸಿ ಮಾರುಕಟ್ಟೆಯಿಂದ ಸಾಮಾನು ಸರಂಜಾಮುಗಳು ಸಾಗಾಟ ಆಗಲು ಸಮಸ್ಯೆ ಇರುವ ಹಿನ್ನೆಲೆಯಲ್ಲಿ ತಾಜಾ ತರಕಾರಿಗಳು ಕೂಡ ಲಭ್ಯವಾಗಿಲ್ಲ. ಮೈಸೂರಿನಿಂದ ಕುಶಾಲನಗರಕ್ಕೆ ಪ್ರಸಕ್ತ ಮೂರು ಪಟ್ಟು ಬಾಡಿಗೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಸಾಮಗ್ರಿ ಖರೀದಿಸುವ ಗೋಜಿಗೆ ಹೋಗುತ್ತಿಲ್ಲ. ಇನ್ನೊಂದೆಡೆ ಮೈಸೂರು-ಕುಶಾಲನಗರ ರಸ್ತೆ ಮೂಲಕ ಬರುವ ಸಂದರ್ಭ ಪೊಲೀಸ್ ತಪಾಸಣಾ ಕೇಂದ್ರಗಳಲ್ಲಿ ತೊಂದರೆ ಉಂಟಾಗುತ್ತಿದೆ ಎನ್ನುವುದು ಸ್ಥಳೀಯ ವರ್ತಕರ ಅಳಲಾಗಿದೆ.

ಕೊಪ್ಪ ಗ್ರಾಮದಲ್ಲಿ ಮೈಸೂರು ಜಿಲ್ಲಾಡಳಿತದ ಸೂಚನೆಯಂತೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ತನಕ ಮಾತ್ರ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲಾಗುತ್ತಿದ್ದು, ನಂತರದ ವೇಳೆಯಲ್ಲಿ ಸಂಪೂರ್ಣ ಮುಚ್ಚಲು ಆದೇಶ ಹೊರಡಿಸಲಾಗಿದೆ. ಸಮೀಪದ ಬೈಲುಕೊಪ್ಪ ಟಿಬೇಟಿಯನ್ ನಿರಾಶ್ರಿತರ ಶಿಬಿರದಿಂದ ಯಾವುದೇ ನಾಗರಿಕರು ಹೊರಬರದೆ ಮನೆ ಮತ್ತು ಬೌದ್ದ ಮಂದಿರಗಳಲ್ಲಿ ನೆಲೆಸುವುದರೊಂದಿಗೆ ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದರೆ ಇತ್ತ ಶಿಬಿರಕ್ಕೆ ಕೂಡ ಯಾವುದೇ ವ್ಯಕ್ತಿಗಳನ್ನು ಒಳಗೆ ಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಚೆಟ್ಟಳ್ಳಿ: ಚೆಟ್ಟಳ್ಳಿಯಲ್ಲಿ ಬೆಳಗ್ಗಿನಿಂದಲೇ ತರಕಾರಿ ಹಾಗೂ ದಿನಸಿ ಪದಾರ್ಥಗಳನ್ನು ಖರೀದಿಸಲು ಜನತೆ ಚೆಟ್ಟಳ್ಳಿ ಪಟ್ಟಣಕ್ಕೆ ಆಗಮಿಸಿದರು.

ಲೈನ್ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಕಾರ್ಮಿಕರೂ ಕೂಡ ಆಹಾರ ಪದಾರ್ಥಗಳನ್ನು ಖರೀದಿ ಮಾಡುತಿದ್ದರು.

ಯಾರೂ ಕೂಡ ಗುಂಪುಗುಂಪಾಗಿ ನಿಲ್ಲದೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದರು. ಎಲ್ಲರೂ ಒಂದು ಮೀಟರ್ ದೂರದಲ್ಲಿ ನಿಂತು ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು.

ಅಂಗಡಿಗಳ ಮುಂದೆ ಹಾಕಿರುವ ಲೈನ್ ಮಾರ್ಕ್‍ನಲ್ಲೇ ನಿಂತು ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.

ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಸೋಮವಾರ ನಿತ್ಯೋಪಯೋಗಿ ತರಕಾರಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಜನತೆ ಮುಗಿಬಿದ್ದರು.

ಸುತ್ತ ಮುತ್ತಲ ಗ್ರಾಮಗಳಿಂದ ಸಾರ್ವಜನಿಕರು ವ್ಯಾಪಾರಿಗಳು ಬರುವುದಕ್ಕೂ ಮುನ್ನವೇ ಆಗಮಿಸಿ ತರಕಾರಿ ದಿನಸಿಗಾಗಿ ನಿಂತಿದ್ದರು. ಖಾಸಗಿ ಹಾಗೂ ಬಾಡಿಗೆ ವಾಹನಗಳ ದಟ್ಟಣೆಯೂ ಹೆಚ್ಚಾಗಿತ್ತು.

ಪೊಲೀಸರು, ಗ್ರಾಹಕರು ಆಹಾರ ಸಾಮಗ್ರಿಗಳನ್ನು ಖರೀಸುವ ಸಂದರ್ಭ ಸರತಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ಸಾಮಗ್ರಿಗಳನ್ನು ಖರೀದಿಸುವಂತೆ ಸೂಚಿಸುತಿದ್ದರು. ಗ್ರಾಹಕರಿಗೆ ತೊಂದರೆಯಾಗದಂತೆ ಕಾರು ನಿಲ್ದಾಣ, ಮಾರುಕಟ್ಟೆ ಆವರಣದಲ್ಲಿ ತರಕಾರಿ, ದಿನಸಿ ಅಂಗಡಿಗಳನ್ನು ತೆರೆಯಲು ಸ್ಥಳಾವಕಾಶ ಒದಗಿಸಿದರು.