ಬೆಂಗಳೂರು, ಮಾ. 30: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಏಪ್ರಿಲ್ 14ರ ತನಕ ಲಾಕ್ಡೌನ್ ಘೋಷಿಸ ಲಾಗಿದೆ. ಇದಕ್ಕೂ ಮೊದಲೇ ರಾಜ್ಯದಲ್ಲಿ ಶಿಕ್ಷಕರಿಗೆ ಮಾರ್ಚ್ 31ರ ತನಕ ವರ್ಕ್ ಫ್ರಂ ಹೋಂ ಘೋಷಿಸಿ ರಜೆಯನ್ನು ಒದಗಿಸಲಾಗಿತ್ತು. ಈಗ ಇದನ್ನು ಏಪ್ರಿಲ್ 11ರ ತನಕ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.ಈ ಕುರಿತಂತೆ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರು ಫೇಸ್ಬುಕ್ನಲ್ಲಿ ಪ್ರಕಟಿಸಿರುವ 13 ನಿಮಿಷಗಳ ವೀಡಿಯೋ ಸಂದೇಶದಲ್ಲಿ ಶಾಲಾ ಶಿಕ್ಷಕರಿಗೆ ವರ್ಕ್ ಫ್ರಂ ಹೋಂಗಾಗಿ ಕೆಲವು ಕೆಲಸಗಳನ್ನು ನಿಗದಿಪಡಿಸಿ ಶಿಕ್ಷಕರಿಗೆ ಮಾಡುವಂತೆ ಸೂಚಿಸಲಾಗಿತ್ತು. ಅದನ್ನು ಪೂರೈಸಬೇಕು. ಈಗ ರಜೆ ವಿಸ್ತರಣೆ ಆಗಿರುವ ಕಾರಣ ಅದನ್ನು ಸರಿಯಾಗಿ ಮಾಡಬೇಕು. ಅಲ್ಲದೆ; ಕೇಂದ್ರ ಸ್ಥಾನದಲ್ಲೇ ಇರಬೇಕು; ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು ಎಂದು ಹೇಳಿದ್ದಾರೆ.ಅಲ್ಲದೆ; ದೇಶ ಈಗ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿ ಸುತ್ತಿದೆ. ಶಾಲಾ ಶಿಕ್ಷಕರು ಮಾಡಬಹು ದಾದ ಕೆಲಸಗಳು ಏನಾದರೂ ಬಂದಲ್ಲಿ ಅವರಿಗೆ ಅದನ್ನು ಇಲಾಖೆ ಮುಖೇನ ಸೂಚಿಸಲಾಗುವುದು. ಹೀಗಾಗಿ ಕೇಂದ್ರ ಸ್ಥಾನ ಬಿಡಬಾರದು ಎಂಬ ಸಂದೇಶವನ್ನು ರವಾನಿಸಲಾಗುತ್ತಿದೆ. ದೇಶ ಮತ್ತು ದೇಶದ ಜನತೆ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಶಾಲಾ ದಾಖಲಾತಿ ಆರಂಭಿಸಿದರೆ ಅಂತಹ ಶಾಲೆಗಳ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇವೆ.
ಕೆಲವು ಖಾಸಗಿ ಶಾಲೆಗಳಲ್ಲಿ ಶುಲ್ಕ ಪಾವತಿಸಬೇಕು; ತಪ್ಪಿದರೆ ದಿನಕ್ಕೆ 50 ರೂ. 100 ರೂ. ದಂಡ ಪಾವತಿ ಸಬೇಕು ಎಂಬ ಸಂದೇಶವನ್ನು ಪಾಲಕರಿಗೆ ಆಡಳಿತ ಮಂಡಳಿ ಕಳುಹಿಸಿರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ಸ್ಥಿತಿಗತಿಯಲ್ಲಿ ಇಂತಹ ಕ್ರಮ ಒಳ್ಳೆಯದಲ್ಲ. ಸರ್ಕಾರದ ಆದೇಶ ಧಿಕ್ಕರಿಸಿ ಯಾವುದಾದರೂ ಶಾಲೆಯ ಆಡಳಿತ ಮಂಡಳಿ ಶಾಲೆಯ ಮಕ್ಕಳ ದಾಖಲಾತಿ ಮತ್ತು ಶುಲ್ಕ ವಸೂಲಿಗೆ ಮುಂದಾದರೆ ಅಂತಹ ಶಾಲೆಗಳ ಮಾನ್ಯತೆಯನ್ನು ಸರ್ಕಾರ ರದ್ದುಗೊಳಿಸಲಿದೆ. ಅಲ್ಲದೇ ಅತೀ ಹೆಚ್ಚು ದಂಡವನ್ನೂ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶಗಳಿವೆ ಎಂದು ಸಚಿವ ಸುರೇಶ್ಕುಮಾರ್ ಎಚ್ಚರಿಸಿದ್ದಾರೆ.