ಗೋಣಿಕೊಪ್ಪಲು, ಮಾ.29: ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಕೊಡಗಿನ ಮಾಕುಟ್ಟ ಹಾಗೂ ಕುಟ್ಟ ಭಾಗದ ಗಡಿಗಳನ್ನು ಬಂದ್ ಮಾಡುವ ಮೂಲಕ ಹೊರ ರಾಜ್ಯದ ಸಂಪರ್ಕ ಕಡಿತಗೊಳಿಸಿತ್ತು.
ಇದರಿಂದ ಪ್ರಭಾವಿತರಾದ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕೊಪ್ಪಲು ಗ್ರಾಮದ
ಕೆಲ ಯುವಕರು ತಮ್ಮ ಗ್ರಾಮದ ಸಂಪರ್ಕ ರಸ್ತೆಗೆ ಮಣ್ಣು ಸುರಿದು ಗ್ರಾಮಕ್ಕೆ ಯಾರು ಬರದಂತೆ ನಿರ್ಬಂಧ ಹೇರಿದ್ದರು.
ಗ್ರಾಮದ ಹಿರಿಯರು ಯುವಕರಿಗೆ ಈ ರೀತಿ ಮಾಡದಂತೆ ತಿಳುವಳಿಕೆ ನೀಡಿದರೂ ಯುವಕರು ಮಾತ್ರ ಕ್ಯಾರೆ ಅನ್ನದೆ ಮಣ್ಣನ್ನು ರಸ್ತೆಗೆ ಸುರಿದು ಬಂದ್ ಮಾಡಿ ಸೆಲ್ಪಿ ಫೋಟೋ ಕ್ಲಿಕ್ಕಿಸಿಕೊಂಡು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು.
ಗ್ರಾಮದ ರಸ್ತೆ ಬಂದ್ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ವೀರಾಜಪೇಟೆ ತಾಲೂಕಿನ ಡಿವೈ ಎಸ್.ಪಿ.ಜಯಕುಮಾರ್ ಪೊನ್ನಂಪೇಟೆ ಪೊಲೀಸರಿಗೆ ಸುದ್ದಿ ಮುಟ್ಟಿಸಿ ರಸ್ತೆಗೆ ಸುರಿದಿರುವ ಮಣ್ಣನ್ನು ತೆರವುಗೊಳಿಸಲು ನಿರ್ದೇಶನ ನೀಡಿದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಘಟನಾ ಸ್ಥಳಕ್ಕೆ ತೆರಳಿ ಪಂಚಾಯಿತಿಯ ಪಿಡಿಒ ಅವರನ್ನು ಬರಮಾಡಿಕೊಂಡು ಸ್ಥಳ ಪರಿಶೀಲನೆ ನಡೆಸಿದರು. ರಸ್ತೆಗೆ ಹಾಕಲಾಗಿದ್ದ ಮಣ್ಣನ್ನು, ಸುರಿದ ಯುವಕರಿಂದಲೇ ತೆರವುಗೊಳಿಸಿ ರಸ್ತೆ ಸಂಚಾರವನ್ನು ಎಂದಿನಂತೆ ಸುಗಮಗೊಳಿಸಿದರು.
ಈ ಸಂದರ್ಭ ಕಿರುಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಯಾ, ಸದಸ್ಯರಾದ ಸುಧೀರ್,ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
- ಹೆಚ್.ಕೆ.ಜಗದೀಶ್