ಸಿದ್ದಾಪುರ, ಮಾ. 29: ಅಮ್ಮತ್ತಿಯಲ್ಲಿರುವ 2 ಮೆಡಿಕಲ್ ಶಾಪ್‍ಗಳು ಲಾಕ್‍ಡೌನ್ ಹೆಸರಿನಲ್ಲಿ ಬೀಗ ಹಾಕಿದ್ದು, ಇಲ್ಲಿನ ಗ್ರಾಮಸ್ಥರು ಅತ್ಯವಶ್ಯಕ ಔಷಧಿಗಳಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಮ್ಮತ್ತಿ ಪಟ್ಟಣದಲ್ಲಿ ನೂರಾರು ಕುಟುಂಬಗಳಿದ್ದು ವಯೋವೃದ್ಧರು ಮಕ್ಕಳು ಸೇರಿದಂತೆ ಅನೇಕರು ತಮಗೆ ಅತ್ಯವಶ್ಯಕವಾಗಿರುವ ಔಷಧಿಗಳಿಗೆ ಈ 2 ಮೆಡಿಕಲ್ ಶಾಪ್‍ಗಳನ್ನೆ ಆಶ್ರಯಿಸಿದ್ದಾರೆ. ಈಗ ಮೆಡಿಕಲ್ಸ್ ಬಾಗಿಲು ಹಾಕಿದ್ದರಿಂದ ಇಲ್ಲಿನ ನಿವಾಸಿಗಳು ತಮಗೆ ಬೇಕಾಗಿರುವ ಔಷಧಿಗಾಗಿ 8 ಕಿ.ಮೀ. ದೂರದ ವೀರಾಜಪೇಟೆಗೆ ಅಥವಾ 9 ಕಿ.ಮೀ. ದೂರವಿರುವ ಸಿದ್ದಾಪುರ ಪಟ್ಟಣಕ್ಕೆ ಆಗಮಿಸಬೇಕಾಗಿದೆ. ಲಾಕ್‍ಡೌನ್‍ನಂತಹ ತುರ್ತು ಸಂದರ್ಭಗಳಲ್ಲಿ ಔಷಧಿಗಳಿಗೆ ನೆರೆಯ ಪಟ್ಟಣಗಳಿಗೆ ತೆರಳುವ ಸಂದರ್ಭ ವಾಹನಗಳು ದೊರೆಯದೆ ಪರದಾಡುತ್ತಿದ್ದಾರೆ. ತಮ್ಮ ಪಟ್ಟಣದಲ್ಲಿದ್ದು ಜನರಿಗೆ ಸೇವೆಯನ್ನು ನೀಡಬೇಕಾದ ಮೆಡಿಕಲ್ ಶಾಪ್ ಬಂದ್ ಮಾಡಿರುವ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆÉ ಎಚ್ಚರ ವಹಿಸಬೇಕೆಂದು ಒತ್ತಾಯಿಸಿದ್ದಾರೆ.