*ಗೋಣಿಕೊಪ್ಪಲು, ಮಾ. 29: ಹಿಂದೆ ಗಂಟೆಗೆ ಒಂದು ನೂರು ವಾಹನಗಳು ಬರುತ್ತಿದ್ದುದು ಈಗ ದಿನಕ್ಕೆ ಸರಾಸರಿ 60 ವಾಹನಗಳು ಬರುತ್ತಿವೆ. ಕಾಫಿ ತೋಟಕ್ಕೆ ಸ್ಪ್ರಿಂಕ್ಲರ್ ಮಾಡುವವರು ಇಂಧನ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಸರಕಾರದ ಆದೇಶದಂತೆ ದಿನವೂ ಪೆಟ್ರೋಲ್ ಬಂಕ್ ತೆರೆಯಲಾಗುತ್ತಿದೆ ಎಂದು ಪಟ್ಟಣದ ಭಾರತ್ ಪೆಟ್ರೊಲ್ ಬಂಕ್‍ನ ಪ್ರವೀಣ್ ಹೇಳಿದರು.
ಪಟ್ಟಣದಲ್ಲಿ ಐದು ಪೆಟ್ರೋಲ್ ಬಂಕ್‍ಗಳಿವೆ. ಇವುಗಳ ಮುಂದೆ ಇಂಧನ ತುಂಬಿಸುವ ಹುಡುಗರು ಮುಖಕ್ಕೆ ಕವಚ ಧರಿಸಿಕೊಂಡು ಕುಳಿತಿದ್ದಾರೆ. ತುರ್ತು ಸಂದರ್ಭ ಬಿಟ್ಟರೆ ಯಾವುದೇ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲ. ಬ್ಯಾಂಕ್ ನೌಕರರ ವಾಹನಗಳು ಮಾತ್ರ ಓಡಾಡುತ್ತಿವೆ. ಇವುಗಳಲ್ಲಿ ಕೆಲವು ಮಾತ್ರ ಪೆಟ್ರೋಲ್ ಬಂಕ್‍ಗಳಿಗೆ ಬರುತ್ತಿವೆ.
ಜಿಲ್ಲಾಡಳಿತ ಶನಿವಾರದಿಂದ ಹಾಲು, ಪತ್ರಿಕೆ ಕೊಳ್ಳಲು ಪ್ರತಿ ದಿನ ಬೆಳಿಗ್ಗೆ 6ರಿಂದ 8 ಗಂಟೆ ವರೆಗೆ ಅವಕಾಶ ನೀಡಿದೆ. ಉಳಿದಂತೆ ದಿನಸಿ ಅಂಗಡಿಗಳಿಗೆ ಸೋಮವಾರ, ಬುಧವಾರ, ಶುಕ್ರವಾರಗಳಂದು ಬೆಳಿಗ್ಗೆ 6ರಿಂದ 10 ಗಂಟೆವರೆಗೆ ತೆರೆಯಲು ಅನುಮತಿ ನೀಡಿದೆ. ಈ ಕಾರಣದಿಂದ ಶನಿವಾರ ಯಾವುದೇ ವಾಹನಗಳು ಪಟ್ಟಣದ ಕಡೆಗೆ ಸುಳಿಯಲಿಲ್ಲ. ಬೆಳಗ್ಗಿನಿಂದಲೂ ಇಡೀ ಪಟ್ಟಣ ಬಿಕೋ ಎನ್ನುತಿತ್ತು.
ಅಸಮಾಧಾನ : ಎರಡು ದಿನಗಳ ಕಾಲ ಜಿಲ್ಲಾಡಳಿತ ಪ್ರತಿ ದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ದಿನಸಿ, ತರಕಾರಿ ಕೊಳ್ಳಲು ಜನತೆಗೆ ಅವಕಾಶ ನೀಡಿತ್ತು. ಇದಕ್ಕಾಗಿ ಪಟ್ಟಣಕ್ಕೆ ಬಂದವರು ಬ್ಯಾಂಕ್, ಮೆಡಿಕಲ್ ಶಾಪ್ ಮೊದಲಾದವುಗಳಿಗೆ ತೆರಳಿ ಅಗತ್ಯ ಕೆಲಸಗಳನ್ನು ಒಟ್ಟಿಗೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈಗ ಸಮಯ ಬದಲಾವಣೆಯಿಂದ ಇದಕ್ಕೆಲ್ಲ ಕಡಿವಾಣ ಬಿದ್ದಿದೆ.
ಬ್ಯಾಂಕ್ ಅವಧಿ ಕಡಿತ : ಬ್ಯಾಂಕ್‍ಗಳು ಪ್ರತಿದಿನ ಬೆಳಿಗ್ಗೆ 10ರಿಂದ 12 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ. ಆದರೆ ಸಾರ್ವಜನಿಕರಿಗೆ ದಿನಸಿ, ತರಕಾರಿಗಳನ್ನು ಕೊಳ್ಳಲು ವಾರದಲ್ಲಿ ಮೂರು ದಿನ ಬೆಳಿಗ್ಗೆ 10 ಗಂಟೆ ವರೆಗೆ ಮಾತ್ರ ಅವಕಾಶ ನೀಡಿರುವುದರಿಂದ ಬ್ಯಾಂಕ್‍ಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಈಗ ಹೊರಡಿಸಿರುವ ಈ ಆದೇಶವನ್ನು ಬದಲಾಯಿಸಬೇಕು ಎಂದು ಹೆಚ್ಚಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದೀಢರನೆ ಬದಲಾದ ಸಮಯವನ್ನು ಅರಿಯದ ಕೆಲವು ವರ್ತಕರು ಶನಿವಾರ ಬೆಳಿಗ್ಗೆ ಅಂಗಡಿಗಳನ್ನು ತೆರೆದಿದ್ದರು. ಆದರೆ ವಿಷಯ ಅರಿತು ಕೇವಲ 10 ನಿಮಿಷದಲ್ಲಿ ಮತ್ತೆ ಅಂಗಡಿಗಳನ್ನು ಬೇಸರದಿಂದಲೇ ಮುಚ್ಚಿದರು.ಅಗತ್ಯ ವಸ್ತುಗಳನ್ನು ಕೊಳ್ಳಲು ಅಂಗಡಿಗೆ ಬಂದ ಗ್ರಾಹಕರು ಮುಚ್ಚಿದ ಅಂಗಡಿ ಬಾಗಿಲನ್ನು ನೋಡಿ ಬರಿ ಕೈಯಲ್ಲಿ ಮನೆಯತ್ತ ಮುಖ ಮಾಡಿದರು. ಇದರಿಂದ ತೊಂದರೆ ಅನುಭವಿಸಿದವರು ಗ್ರಾಹಕರು.
ಪ್ರತಿದಿನ ದಿನಸಿ ಮತ್ತು ತರಕಾರಿ ಅಂಗಡಿಗಳು ತೆರೆದಿರುತ್ತವೆ ಎಂಬ ಭಾವನೆಯಿಂದ ಅಗತ್ಯ ವಸ್ತುಗಳನ್ನು ಕೊಳ್ಳಲು ಮೈ ಮರೆತಿದ್ದ ಕುಟುಂಬಗಳು ಶನಿವಾರ ತೀವ್ರ ತೊಂದರೆ ಅನುಭವಿಸಿದವು. ಭಾನುವಾರವೂ ಅಂಗಡಿಗಳು ಮುಚ್ಚಲಿದ್ದು; ಊಟೋಪಚಾರದ ಅಗತ್ಯ ವಸ್ತುಗಳನ್ನು ಕೊಳ್ಳುವುದಾದರೂ ಹೇಗೆ ಎಂಬ ಆತಂಕ ಹಲವರನ್ನು ಕಾಡಿತು.
- ಎನ್.ಎನ್.ದಿನೇಶ್