ಮಡಿಕೇರಿ, ಮಾ. 28: ‘ಲಾಕ್‍ಡೌನ್’ನ ಬದಲಾದ ಸಮಯದಿಂದಾಗಿ ಇಂದು ಜಿಲ್ಲಾ ಕೇಂದ್ರ ಮಡಿಕೇರಿ ಸಂಪೂರ್ಣ ಮೌನಕ್ಕೆ ಜಾರಿತ್ತು. ಕಳೆದ ಎರಡು ದಿನಗಳ ಕಾಲ ಗ್ರಾಹಕರಿಗೆ ದಿನಸಿ, ತರಕಾರಿ ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಸಮಯಾವಕಾಶ ನೀಡಲಾಗಿತ್ತು. ಆದರೆ, ಪರಿಸ್ಥಿತಿಯ ಗಂಭೀರತೆ ಅರಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆ ನಡೆಸಿ ಕೈಗೊಂಡ ತೀರ್ಮಾನದಂತೆ ಪತ್ರಿಕೆ ಹಾಗೂ ಹಾಲು ಕೊಳ್ಳಲು ಬೆಳಿಗ್ಗೆ 6ರಿಂದ 8 ಗಂಟೆಯವರೆಗೆ ಹಾಗೂ ದಿನಸಿ ಖರೀದಿಗೆ ವಾರದಲ್ಲಿ ಮೂರು ದಿನಗಳ ಕಾಲ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ವಿಚಾರ ತಿಳಿಯದ ಕೆಲವರು ಎಂದಿನಂತೆ ಬೆಳಿಗ್ಗೆ 6 ಗಂಟೆಗೆ ದಿನಸಿ ಖರೀದಿಗೆಂದು ರಸ್ತೆಗಿಳಿದಿದ್ದರು. ಕೆಲವು ಅಂಗಡಿಗಳೂ ತೆರೆದಿದ್ದವು. ಆದರೆ ಕರ್ತವ್ಯದಲ್ಲಿದ್ದ ಪೊಲೀಸರು ರಸ್ತೆಗಿಳಿದವರನ್ನು ವಾಪಸ್ ಕಳುಹಿಸಿದರಲ್ಲದೆ, ಅಂಗಡಿಗಳನ್ನು ಕೂಡ ಮುಚ್ಚಿಸಿದರು.

ಹಾಲು, ಪತ್ರಿಕೆಗಳ ಖರೀದಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಔಷಧಿ ಅಂಗಡಿಗಳಿಗೆ ದಿನಪೂರ್ತಿ ತೆರೆಯಲು ಅವಕಾಶ ಇದೆಯಾದರೂ ನಗರದಲ್ಲಿ ಜನರ ಓಡಾಟವಿಲ್ಲದ್ದರಿಂದ ಮಧ್ಯಾಹ್ನದ ಬಳಿಕ ಬಹುತೇಕ ಔಷಧಿ ಮಳಿಗೆಗಳು ಮುಚ್ಚಿದ್ದವು. ಸುಖಾಸುಮ್ಮನೆ ಓಡಾಡುವ ವಾಹನಗಳು ಇಂದು ರಸ್ತೆಗಿಳಿಯಲಿಲ್ಲ.

ಮಡಿಕೇರಿ ನಗರಸಭೆ ವತಿಯಿಂದ ರೋಗ - ರುಜಿನಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆ ಬದಿಯ ಚರಂಡಿಗಳಿಗೆ ಔಷಧಿ ಸಿಂಪಡಿಸುವ ಕಾರ್ಯವೂ ನಡೆಯುತ್ತಿದೆ.