ಸೋಮವಾರಪೇಟೆ, ಮಾ.28: ಕೊರೊನಾ ಮಹಾಮಾರಿಯ ಭೀತಿಯಿಂದ ಲಾಕ್‍ಡೌನ್‍ಗೆ ಒಳಗಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ, ದೂರದೂರಿನಿಂದ ಆಗಮಿಸಿ ತಾಲೂಕಿನ ಕುಂದಳ್ಳಿ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಅಲೆಮಾರಿ ಕೂಲಿಕಾರ್ಮಿಕ ಕುಟುಂಬಗಳು ಇದೀಗ ಸ್ವಗ್ರಾಮದತ್ತ ಹೊರಟಿವೆ.
ಅಲೆಮಾರಿ ಕಾರ್ಮಿಕರ ಅತಂತ್ರ ಸ್ಥಿತಿಯ ಬಗ್ಗೆ ‘ಶಕ್ತಿ’ಬೆಳಕು ಚೆಲ್ಲಿದ ಹಿನ್ನೆಲೆ, ತಾಲೂಕು ಆಡಳಿತದಿಂದ ಇವರನ್ನು ಸ್ವಂತ ಊರಿಗೆ ವಾಪಸ್ ಕಳುಹಿಸಲು ಆದೇಶ ಲಭಿಸಿದ್ದು, ಅದರಂತೆ ಬಾಡಿಗೆ ವಾಹನದಲ್ಲಿ ಈರ್ವರು ಮಕ್ಕಳೂ ಸೇರಿದಂತೆ 8 ಮಂದಿ ಬಳ್ಳಾರಿಯತ್ತ ತೆರಳಿದರು.
ಆಂಧ್ರದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕು, ಕರ್ನಾಟಕದ ಬಳ್ಳಾರಿ ಜಿಲ್ಲೆಯ ಗಡಿ ಯಲ್ಲಿರುವ ಮೂರು ಕುಟುಂಬಗಳು ಕಳೆದ ತಿಂಗಳು ಸೋಮವಾರಪೇಟೆಗೆ ಆಗಮಿಸಿ ರಸ್ತೆ, ಚರಂಡಿ, ಕೆರೆ ಸೇರಿದಂತೆ ಇನ್ನಿತರ ಮಣ್ಣು ಕೆಲಸ ನಿರ್ವಹಿಸುತ್ತಿತ್ತು.
ಈ ಮಧ್ಯೆ ಕೊರೊನಾ ವೈರಸ್ ಹಿನ್ನೆಲೆ ಲಾಕ್‍ಡೌನ್ ಆಗಿದ್ದರಿಂದ ಮನೆಯತ್ತ ತೆರಳಲು ನಿನ್ನೆ ದಿನ ತಾಲೂಕು ತಹಶೀಲ್ದಾರ್ ಕಚೇರಿ ಎದುರು ಕಣ್ಣೀರಿಡುತ್ತಾ ಕಾರ್ಮಿಕರು ನಿಂತಿದ್ದರು. ಆದರೆ ಜಿಲ್ಲೆಯಿಂದ ಹೊರತೆರಳಲು ಯಾವದೇ ಅನುಮತಿ ಲಭಿಸದೇ ಇದ್ದುದರಿಂದ ಮತ್ತೆ ಕಣ್ಣೀರಿಡುತ್ತಾ ಕುಂದಳ್ಳಿ ಗ್ರಾಮಕ್ಕೆ ತೆರಳಿ ರಸ್ತೆ ಬದಿ ಟೆಂಟ್ ಹಾಕಿಕೊಂಡಿದ್ದರು. ಈ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ಹಿನ್ನೆಲೆ, ಗಮನಹರಿಸಿದ ತಹಶೀಲ್ದಾರ್ ಗೋವಿಂದರಾಜು ಅವರು, ಇಂದು ಆ ಕುಟುಂಬಗಳಿಗೆ ಊರಿಗೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಪಟ್ಟಣ ಪಂಚಾಯಿತಿ ಸದಸ್ಯ ಬಿ.ಆರ್. ಮಹೇಶ್ ಅವರ ಸಹಕಾರ ದೊಂದಿಗೆ ಕುಂದಳ್ಳಿಯಲ್ಲಿದ್ದ ಕುಟುಂಬವನ್ನು ಪಟ್ಟಣಕ್ಕೆ ಕರೆತಂದು, ಬಾಡಿಗೆ ವಾಹನ ನಿಗದಿಗೊಳಿಸಿ, ವಾಹನದಲ್ಲಿ ತೆರಳಲು ತಹಶೀಲ್ದಾರ್ ರಿಂದ ಆದೇಶ ಪತ್ರ ಪಡೆದು 8 ಮಂದಿಯನ್ನು ಸ್ವಗ್ರಾಮಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಯಿತು.
ತಂಡದಲ್ಲಿದ್ದ ಮೂವರು ಮಹಿಳೆಯರು, ಮೂವರು ಪುರುಷರು ಹಾಗೂ 8 ವರ್ಷದ ಬಾಲಕ, 10 ವರ್ಷದ ಬಾಲಕಿಯನ್ನು ಒಳಗೊಂಡ ಈ ಕುಟುಂಬದವರು ಊರಿಗೆ ತೆರಳಲು ಸಹಾಯ ಮಾಡಿದವರಿಗೆ ಕೈಮುಗಿದು, ಕಣ್ಣೀರಿನ ಮೂಲಕ ಕೃತಜ್ಞತೆ ಸಲ್ಲಿಸಿ ಬಳ್ಳಾರಿಯತ್ತ ಹೊರಟರು. -ವಿಜಯ್