ಸೋಮವಾರಪೇಟೆ,ಮಾ.28: ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆಯ ದೂರವಾಣಿ ‘ಔಟ್ ಆಫ್ ಸರ್ವಿಸ್’ನಿಂದ ಇಂದಿಗೂ ‘ಇನ್ ಸರ್ವಿಸ್’ ವ್ಯವಸ್ಥೆಯೊಳಗೆ ಬಂದಿಲ್ಲ.
ಕಳೆದ ಹಲವಾರು ದಿನಗಳ ಹಿಂದೆ ಕೆಟ್ಟುಹೋಗಿರುವ ಆಸ್ಪತ್ರೆಯ ದೂರವಾಣಿಯನ್ನು ಸರಿಪಡಿಸುವ ಗೋಜಿಗೆ ಆಡಳಿತಾಧಿಕಾರಿ ಸೇರಿದಂತೆ ಯಾರೊಬ್ಬರೂ ಮುಂದಾಗಿಲ್ಲ. ಆಸ್ಪತ್ರೆಯ ಎಮರ್ಜೆನ್ಸಿ ದೂರವಾಣಿ ಮತ್ತು ಕಚೇರಿಯ ದೂರವಾಣಿಗಳಿಗೆ ಕರೆ ಮಾಡಿದರೆ, ಇಂದಿಗೂ ‘ಔಟ್ ಆಫ್ ಸರ್ವಿಸ್’ ಎಂಬ ಉತ್ತರವೇ ಬರುತ್ತಿದ್ದು, ಆಸ್ಪತ್ರೆಯಿಂದ ಯಾವದೇ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಕಳೆದ ಅನೇಕ ದಿನಗಳಿಂದ ಈ ಅವ್ಯವಸ್ಥೆ ಇದ್ದರೂ ಸಹ ಇದರ ಬಗ್ಗೆ ಸಂಬಂಧಿಸಿದ ಬಿಎಸ್ಎನ್ಎಲ್ ಕಚೇರಿಗೆ ವಿಷಯ ಮುಟ್ಟಿಸುವ ಗೋಜಿಗೆ ಯಾರೂ ಹೋಗಿಲ್ಲ. ಆಸ್ಪತ್ರೆಗೆ ತೆರಳಿ ದೂರವಾಣಿ ಬಗ್ಗೆ ವಿಚಾರಿಸಿದರೆ ‘ಸರಿ ಇದೆಯಲ್ವಾ ಸರ್’ ಎಂಬ ಉತ್ತರ ಸಿಗುತ್ತಿದೆಯೇ ಹೊರತು, ದೂರವಾಣಿ ಕೆಟ್ಟಿರುವ ಬಗ್ಗೆ ಸಿಬ್ಬಂದಿಗಳಿಗೇ ಮಾಹಿತಿಯಿಲ್ಲ.
ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯಾದರೂ ಕನಿಷ್ಟ ದೂರವಾಣಿ ಸಂಪರ್ಕವನ್ನು ಸಮರ್ಪಕಗೊಳಿಸದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
- ವಿಜಯ್