ಮಡಿಕೇರಿ, ಮಾ. 29: ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ವಿತರಣೆಯು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿಯವರು ಮುಂಗಡವಾಗಿ ಪಡಿತರ ಚೀಟಿದಾರರಿಗೆ ಕರೆ ಮಾಡಿ ಒಂದು ದಿನಕ್ಕೆ ಇಂತಿಷ್ಟು ಪಡಿತರ ಚೀಟಿದಾರರನ್ನು ಕರೆಸಿ ಪಡಿತರವನ್ನು ಸುಗಮವಾಗಿ ವಿತರಿಸಬೇಕು. ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ಬರುವಾಗ ಮುಖಗವಸು ಅಥವಾ ಬಟ್ಟೆ ಧರಿಸಿರಬೇಕು. ಹಾಗೆಯೇ ಅವಶ್ಯವಾದ ಚೀಲ ಜೊತೆಗಿರಬೇಕು.
ಪ್ರತಿ ಮನೆಯಿಂದ ಒಬ್ಬ ಆರೋಗ್ಯವಂತ ವ್ಯಕ್ತಿ ಮೂಗಿಗೆ ಮಾಸ್ಕ್, ಬಟ್ಟೆ ಧರಿಸಿಕೊಂಡು ಪಡಿತರ ಪಡೆಯಲು ಬರಬೇಕು. ಪ್ರತಿ ಮನೆಯವರು ಬರುವಾಗ ಕಡ್ಡಾಯವಾಗಿ ಕುಟುಂಬದ ಮೊಬೈಲ್ ತರಬೇಕು. ಇದರಿಂದ ಪಡಿತರ ವಿತರಣೆಗೆ ಸಹಕಾರಿಯಾಗಲಿದೆ. ಸಾಮಾಜಿಕ ಅಂತರ ಕನಿಷ್ಟ 1 ಮೀಟರ್ ಇರಬೇಕು ಎಂದು ಅವರು ನೆನಪಿಸಿದ್ದಾರೆ.
ಏಪ್ರಿಲ್-ಮೇ ತಿಂಗಳ ಅಕ್ಕಿ ಮತ್ತು ಗೋಧಿ ವಿವರ ಇಂತಿದೆ
ಬಿಪಿಎಲ್, ಆದ್ಯತಾ ಕುಟುಂಬದ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳಿಗೆ 5 ಕೆ.ಜಿ. ಅಕ್ಕಿ, ಕುಟುಂಬದಲ್ಲಿ 4 ಜನರು ಇದ್ದಲ್ಲಿ 20 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಗೋಧಿ ವಿತರಿಸಲಾಗುತ್ತದೆ. ಎರಡು ತಿಂಗಳ ವಿತರಣೆ ಒಟ್ಟಿಗೆ ಮಾಡಬೇಕಾಗಿರುವುದರಿಂದ 40 ಕೆ.ಜಿ. ಅಕ್ಕಿ ಮತ್ತು 4 ಕೆ.ಜಿ. ಗೋಧಿಯನ್ನು ವಿತರಿಸಲಾಗುತ್ತದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಅಂತ್ಯೊದಯ ಅನ್ನ ಭಾಗ್ಯ ಯೋಜನೆ ಪಡಿತರ ಚೀಟಿದಾರರಿಗೆ ಯಾವುದೇ ಬದಲಾವಣೆಯಿಲ್ಲ. ಇವರುಗಳಿಗೆ ಗೋಧಿ ವಿತರಣೆಯಿಲ್ಲ. ಎಎವೈ ಕಾರ್ಡ್ಗೆ ಪ್ರತಿ ಕುಟುಂಬಕ್ಕೆ 35 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ಅದರಂತೆ ಎರಡು ತಿಂಗಳಿಗೆ ಒಟ್ಟು 70 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ ಎಂದು ಗೌರವ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಇಲಾಖೆಯವರು ಪಡಿತರ ವಿತರಣೆ ಸುಗಮವಾಗಿ ಸಾಗಲು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ. ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಸ್ಯಾನಿಟೈಝೆರ್ ಅಥವಾ ಸೋಪ್ ಹಾಗೂ ನೀರನ್ನು ಕಡ್ಡಾಯವಾಗಿ ಇಟ್ಟಿರಬೇಕು ಎಂದು ಸೂಚಿಸಿದ್ದಾರೆ.