ಮನುಷ್ಯನನ್ನು ಕೊಲ್ಲುವ ಮಾರಕ ಕೊರೊನಾ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ ಡೌನ್ ಸಮರ ಸಾರಿದ ನಂತರ ಗ್ರಾಮೀಣ ಪ್ರದೇಶಗಳು ಸೇರಿದಂತೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾಸವಿರುವ ಕೂಲಿ ಕಾರ್ಮಿಕ ಮಹಿಳೆಯರು ಬಹಳಷ್ಟು ಚಿಂತಾಕ್ರಾಂತರಾಗಿ ದ್ದಾರೆ. ದಿನನಿತ್ಯವೂ ಕೂಲಿ ಮಾಡಿಕೊಂಡೇ ಜೀವನ ಕಟ್ಟಿಕೊಂಡಿದ್ದ ಮಹಿಳೆಯರಿಗೆ ಈಗ ಮನೆಯಲ್ಲಿ ಕೂರಲು ಆಗುತ್ತಿಲ್ಲ. ಕಾರಣ, ಮಾರಕ ಭಯಾನಕ ರೋಗದ ಬಾಧೆಗಿಂತಲೂ ಸಂಸಾರವನ್ನು ಸಾಗಿಸಲು ನೆರವಾಗುತ್ತಿದ್ದ ವಾರದ ಕೂಲಿ ಬಂದ್ ಆಗಿದ್ದರ ಚಿಂತೆಯೇ ಈ ಅಮಾಯಕ ಮಹಿಳೆಯರಿಗೆ ಚಿತೆಯಾಗಿ ಕಾಡುತ್ತಿದೆ. ಕೂಲಿಯನ್ನೇ ನಂಬಿ ಜೀವಿಸುವ ಹತ್ತಕ್ಕೆ ಶೇಕಡ ಎಂಟು ಕುಟುಂಬಗಳ ಗಂಡಸರು ತಾವು ಮಾಡಿದ ಕೂಲಿಯನ್ನು ಕುಡಿತಕ್ಕೆ ಸುರಿಯುತ್ತಿದ್ದರು. ಈ ಮಂದಿಯ ಹಲವರಿಗೆ ಮಕ್ಕಳ ಭವಿಷ್ಯದ ಚಿಂತೆ ಇರಲಿಲ್ಲ. ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ರಚನೆ ಬಳಿಕ ಸ್ವಾವಲಂಬಿಗಳಾದ ಬಹುಪಾಲು ಮಹಿಳೆಯರು ಸಂಘಗಳಿಂದ ಸಾಲವನ್ನು ತಂದು ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಸಂಸಾರದ ಖರ್ಚು ಎಂದೆಲ್ಲಾ ನಿಭಾಯಿಸುತ್ತಿದ್ದಾಳೆ. ಆದರೆ ಇದೀಗ ಕೊರೊನಾ ಕಾರಣ ದಿಂದ ಎಲ್ಲೆಡೆ ಕಪ್ರ್ಯೂ ವಿಧಿಸಿ ಕೈ ಕಟ್ಟಿ ಹಾಕಿದ್ದರಿಂದ ‘ನಮ್ ಕಥೆ ಮುಂದೆ ಹೆಂಗೆ’ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾರ ವಾರವೂ ಪಾವತಿಸುವಂತೆ ನೀಡಿರುವ ಸಾಲದ ಕಂತು ಕಟ್ಟುವುದನ್ನು ಕೆಲ ದಿನಗಳವರೆಗೆ ಮುಂದೂಡಿರುವುದು ಒಂದಿಷ್ಟು ಸಮಾಧಾನ ತಂದರೂ ಕೂಡ, ಲೇವಾ ದೇವಿದಾರರಿಂದ ಪಡೆದ ಕೈ ಸಾಲದ ಕಂತು ಬಡ ಕೂಲಿಕಾರ್ಮಿಕ ಮಹಿಳೆಯರ ನೆಮ್ಮದಿಯನ್ನು ಹಿಂಡುತ್ತಿದೆ. ಗ್ರಾಮೀಣ ಪ್ರದೇಶಗಳಿಂದ ನೂರಾರು ಸಂಖ್ಯೆಯಲ್ಲಿ ಕಾಫಿ ತೋಟಗಳಿಗೆ, ಕಾಫಿ ಸಂಸ್ಕರಣಾ ಘಟಕಗಳಿಗೆ ಮತ್ತು ಇತರೆಡೆಗಳ ಕೂಲಿಗೆ ತೆರಳುತ್ತಿದ್ದ ಬಡ ಕೂಲಿ ಕಾರ್ಮಿಕರು ದಾರಿ ಕಾಣದಾಗಿದ್ದಾರೆ.

ಅವತ್ತು ಕೂಲಿ ಮಾಡಿ ಅವತ್ತು ದುಡಿದ ಹಣದಿಂದ ಮನೆಗೆ ಸಂಜೆ ಅಕ್ಕಿ ಬೇಳೆ ತಂದು ಜೀವನ ನಡೆಸುತ್ತಿದ್ದ ನಮಗೆ ಧಿಕ್ಕು ಯಾರು ಹೇಳಿ. ರೋಗ ಬಂದರೆ ಎಲ್ರೂ ಒಟ್ಟಿಗೆ ಸಾಯ್ತೇವೆ ಬಿಡಿ. ಸಾಯೋವರೆಗೂ ಬಾಡಿಗೆ ಮನೆಯಲ್ಲಿ ಹಂಗಿನ ವಾಸ. ದುಡಿದರಷ್ಟೇ ಅನ್ನ. ಮಕ್ಕಳು ಶಾಲೆಯಲ್ಲಿ ಹೇಗೋ ಮಧ್ಯಾಹ್ನದ ಬಿಸಿಯೂಟ ಮಾಡಿಕೊಂಡು ಬರುತ್ತಿದ್ದರು. ಈಗ ಅದೂ ಕೂಡ ಇಲ್ಲ ಸದ್ಯ ಒಂದು ಸಮಾಧಾನ ಅಂದರೆ ಹಲವು ಮನೆಗಳಲ್ಲಿ ಕುಡಿತಕ್ಕೆ ದಾಸರಾಗಿದ್ದ ಗಂಡಸರು ತಾವು ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಹಾಕಿ ಕಂಠಪೂರ್ತಿ ಕುಡಿದು ಬಂದು ಹೆಂಡತಿ ಮಕ್ಕಳ ನೆಮ್ಮದಿ ಹಾಳು ಮಾಡೋದು ತಪ್ಪಿದೆಯಲ್ಲಾ ಅದೊಂದು ಸಮಾಧಾನ ಅಂತಾರೆ ಇಲ್ಲಿನ ಇನ್ನಿತರ ಮಹಿಳೆಯರು. ಈ ಸಂದರ್ಭ ನೋವು ತೋಡಿಕೊಂಡ ಕಣಿವೆ ಗ್ರಾಮದ ಕೂಲಿ ಕಾರ್ಮಿಕ ಮಹಿಳೆಯರಾದ ಗೌರಮ್ಮ, ಮೀನಾಕ್ಷಿ, ರೇಣುಕಮ್ಮ ಮೊದಲಾದವರು, ಕಾಯಿಲೆ ಹಬ್ಬುತ್ತೆ ಯಾರೂ ಮನೆಯಿಂದ ಹೊರಬರಬೇಡಿ ಎಂದು ಬಂದ್ ಮಾಡಿ ನಮ್ಮನ್ನು ಮನೆಯೊಳಗೆ ಕೂಡಿ ಹಾಕಿದವರು ನಮ್ ಕಷ್ಟ ಕೇಳ್ತಾರಾ? ನಾವು ಹಾಗೋ ಹೇಗೋ ಜೀಪ್‍ನಲ್ಲಿ ಬೆಳಿಗ್ಗೆ ಹೋಗಿ ಕಾಫಿ ತೋಟದಲ್ಲಿ ಕೂಲಿ ಮಾಡಿ ಸಂಜೆ ಮನೆಗೆ ಬಂದು ಸೇರುತ್ತಿದ್ದೊ ಎನ್ನುತ್ತಾರೆ. ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸಿದ್ದು ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಹೆಚ್ಚು ಪ್ರಯೋಜನ ನೀಡಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಈ ಮಹಿಳೆಯರು, ಅಯ್ಯೋ ಆ ಯಾವ ಯೋಜನೆಗಳು ಬಡವರಾದ ನಮ್ ಮನೆಗೆ ಬರ್ತಾವಾ ? ನಾವು ಕೂಲಿ ಮಾಡೋದು ತಪ್ಪುತ್ತಾ ? ಎಲ್ಲವೂ ಉಳ್ಳವರ ಪಾಲು ಬಿಡಿ ಸ್ವಾಮಿ ಎನ್ನುತ್ತಾರೆ. ಇಲ್ಲಿ ಕೂಲಿಯನ್ನೇ ನಂಬಿ ಜೀವಿಸುತ್ತಿರುವ ಅದೆಷ್ಟೋ ಬಡ ಕಾರ್ಮಿಕರಿಗೆ ಜನಧನ್ ಅಕೌಂಟ್ ತೆರೆದಿಲ್ಲ. ಬಿಪಿಎಲ್ ಕಾರ್ಡುಗಳು ದೊರಕಿಲ್ಲ. ಆ ಯಾವ ಸೌಲಭ್ಯಗಳನ್ನು ಹೊಂದಿಕೊಳ್ಳುವಂತಹ ಕನಿಷ್ಟ ಮಾಹಿತಿ ಈ ಮಂದಿಗಿದ್ದಂತಿಲ್ಲ. ಇನ್ನಾದರೂ ಈ ಅಮಾಯಕ ಮಂದಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ.

- ಕೆ. ಎಸ್. ಮೂರ್ತಿ, ಕುಶಾಲನಗರ.