ಸೋಮವಾರಪೇಟೆ, ಮಾ.28: ಕೊರೊನಾ ಮಹಾಮಾರಿಯ ವೇಗಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಸರ್ಕಾರ ಹಲವಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿದ್ದರೂ ಸಹ ಕೆಲ ಕಾಫಿ ತೋಟಗಳ ಮಾಲೀಕರು ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ, ಕೂಲಿ ಕಾರ್ಮಿಕರನ್ನು ಗುಂಪುಗುಂಪಾಗಿ ತೋಟ ಕೆಲಸಕಾರ್ಯಗಳಿಗೆ ಕರೆ ದೊಯ್ಯುತ್ತಿರುವದು ಕಂಡುಬರುತ್ತಿದೆ.ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ, ಐಗೂರು ಗ್ರಾಮ ಪಂಚಾಯಿತಿಯ ಹೊಸತೋಟ, ಮಾದಾಪುರ ಗ್ರಾಮ ಪಂಚಾಯಿತಿಗಳಲ್ಲಿ ಇಂತಹ ಘಟನೆಗಳು ಹೆಚ್ಚು ಕಂಡುಬರುತ್ತಿದ್ದು, ಸರ್ಕಾರದ ಆದೇಶವನ್ನು ಧಿಕ್ಕರಿಸಿ ತೋಟ ಮಾಲೀಕರು ತಮ್ಮ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾರೆ.ಪಿಕ್ಅಪ್ ಮತ್ತು ಜೀಪ್ಗಳಲ್ಲಿ ಕಾರ್ಮಿಕರನ್ನು ತುಂಬಿಕೊಂಡು ಕರೆದೊಯ್ಯುತ್ತಿದ್ದು, ಯಾವ ಕಾರ್ಮಿಕರೂ ಸಹ ಮಾಸ್ಕ್ ಬಳಸದೇ ಇರುವದು ಕಂಡುಬಂದಿದೆ. ಇದರೊಂದಿಗೆ ಎಸ್ಟೇಟ್ ಕಾರ್ಮಿಕರಿಗೆ ವ್ಯವಸ್ಥೆ : ಇನ್ನು ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕೆಲವೊಂದು ಎಸ್ಟೇಟ್ಗಳಲ್ಲಿ ಇರುವ ಕಾರ್ಮಿಕರಿಗೆ ಕೆಲಸಕ್ಕೆ ರಜೆ ನೀಡಲಾಗಿದ್ದು, ಸಂಸ್ಥೆಯ ವತಿಯಿಂದಲೇ ತರಕಾರಿ, ಪಡಿತರ ವಿತರಿಸಲಾಗುತ್ತಿದೆ. ಐಗೂರಿನಲ್ಲಿರುವ ಜಂಬೂರು ಎಸ್ಟೇಟ್ನ ಗೇಟ್ ಬಂದ್ ಮಾಡಲಾಗಿದ್ದು, ಹೊರಭಾಗದ ವಾಹನಗಳಿಗೆ ತಡೆಯೊಡ್ಡಲಾಗಿದೆ. ಕಾರ್ಮಿಕರು ಒಳಪ್ರವೇಶಿಸುವ ಸ್ಥಳದಲ್ಲಿ ನೀರು ಮತ್ತು ಸಾಬೂನು ಇಡಲಾಗಿದ್ದು, ಒಳತೆರಳುವವರು ಕೈಕಾಲು ಸ್ವಚ್ಚತೆ ಮಾಡಿಕೊಂಡು ಒಳಗೆ ಹೋಗಬೇಕಿದೆ.(ಮೊದಲ ಪುಟದಿಂದ) ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದರೂ ಸಹ ಗುಂಪು ಗುಂಪಾಗಿ ಕಾರ್ಮಿಕರು ತೆರಳುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವ ಜನಿಕರು ಒತ್ತಾಯಿಸಿದ್ದಾರೆ.
ಹೊಸತೋಟ, ಕುಂಬೂರು, ಐಗೂರು ಭಾಗದಿಂದ ಕಿರಗಂದೂರು, ತಾಕೇರಿ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಿಗೆ ಯಾವದೇ ಸುರಕ್ಷಾ ಕ್ರಮಗಳನ್ನು ಅನುಸರಿಸದೇ ಕಾರ್ಮಿಕರನ್ನು ಸಾಗಾಟ ಮಾಡಲಾಗುತ್ತಿದೆ. ಬೆಳಿಗ್ಗೆ 8 ಗಂಟೆಗೆ ಕಾರ್ಮಿಕರನ್ನು ಕರೆದೊಯ್ದು ಸಂಜೆ 4 ಅಥವಾ 4.30ಕ್ಕೆ ಗುಂಪಾಗಿಯೇ ವಾಪಸ್ ಕರೆತರಲಾಗುತ್ತಿದೆ.
ಇನ್ನು ಪಟ್ಟಣ ಸಮೀಪದ ಕರ್ಕಳ್ಳಿ, ಕೆಂಚಮ್ಮನಬಾಣೆ ವ್ಯಾಪ್ತಿ ಯಲ್ಲೂ ಹೆಚ್ಚಿನ ಕೂಲಿ ಕಾರ್ಮಿಕ ರಿದ್ದು, ಈ ಗ್ರಾಮಕ್ಕೆ ಕಾರ್ಮಿಕರನ್ನು ಸಾಗಿಸಲು ಆಗಮಿಸುತ್ತಿದ್ದ ಪಿಕ್ಅಪ್, ಓಮಿನಿ ಕಾರುಗಳು ಸ್ಥಗಿತಗೊಂಡಿವೆ. ಕೆಲ ಕೂಲಿ ಕಾರ್ಮಿಕರು ಸಮೀಪದ ಕಾಫಿ ತೋಟಗಳಿಗೆ ನಡೆದುಕೊಂಡೇ ತೆರಳಿ ಕೆಲಸ ಮಾಡುತ್ತಿದ್ದಾರೆ.
ಕರ್ಕಳ್ಳಿ ಗ್ರಾಮದ ಅಂಗಡಿ ಯೊಂದರ ಎದುರು ಪ್ರತಿ ದಿನ ಏಳೆಂಟು ಮಂದಿ ಯುವಕರು ಧೂಮಪಾನ ಮಾಡುತ್ತಾ ಕಾಲಹರಣ ಮಾಡುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.
ಈಗಾಗಲೇ ಕರ್ಕಳ್ಳಿಯಲ್ಲಿ ವಿದೇಶದಿಂದ ಬಂದಿರುವ ವ್ಯಕ್ತಿಯನ್ನು ಹೋಂ ಕ್ವಾರಂಟೈನ್ನಲ್ಲಿಟ್ಟಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಈ ಮಧ್ಯೆ ಯುವಕರ ಗುಂಪೊಂದು ಸುಖಾಸುಮ್ಮನೆ ಗ್ರಾಮದಲ್ಲಿ ಅಲೆಯುತ್ತಾ, ಮುಚ್ಚಿರುವ ಅಂಗಡಿ ಎದುರು ಸಿಗರೇಟ್ ಸೇದುತ್ತಾ ಟೈಂ ಪಾಸ್ ಮಾಡುತ್ತಿರುವದು ಸಾಮಾನ್ಯವಾಗಿದೆ. ಈ ಬಗ್ಗೆ ಪೊಲೀಸರು ಗಮನ ಹರಿಸಬೇಕೆಂದು ಸ್ಥಳೀಯರು ಪತ್ರಿಕೆಯೊಂದಿಗೆ ಒತ್ತಾಯಿಸಿದ್ದಾರೆ.