ಪ್ರಸ್ತುತ ನಾವು ನಮ್ಮ ರಾಜ್ಯದಲ್ಲಿ, ದೇಶದಲ್ಲಿ, ವಿಶ್ವದಲ್ಲೇ ಬಂದಿರುವ ದೊಡ್ಡ ಆಪತ್ತು, ಕೆಟ್ಟ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಚಿಂತನೆಗಳನ್ನು ನಡೆಸಬೇಕಾಗಿದೆ. ಕೊರೊನಾ ಎಂಬ ವೈರಸ್ ಮನುಕುಲವನ್ನೇ ಅಲ್ಲಾಡಿಸಿದ್ದು; ವಿಶ್ವದಾದ್ಯಂತ ಅಪಾರ ಸಾವು-ನೋವು, ಸಂಕಷ್ಟವನ್ನು ತಂದೊಡ್ಡಿದೆ. ಜನರನ್ನೆಲ್ಲ ಧೃತಿಗೆಡಿಸಿವೆ; ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಹಿನ್ನೆಲೆಯಲ್ಲಿ ನೋಡಿದಾಗ; ಕಳೆದ ಡಿಸೆಂಬರ್ 26, 2019ರ ಸೂರ್ಯಗ್ರಹಣದಿಂದ ಕೆಲವೊಂದು ಸಮಸ್ಯೆ ಗಳು ನಾಡಿಗೆ ಬರುವ ಲಕ್ಷಣಗಳು ಪ್ರಾರಂಭವಾಗಿ ಆಗ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳದ ಕಾರಣ ಈ ಸಮಸ್ಯೆಯನ್ನು ನಾವು ಎದುರಿಸುವ ಹಾಗೆ ಆಯಿತು; ಈಗ ತಾ. 29 ರಂದು ಗುರುವು ಮಕರರಾಶಿಯನ್ನು ಪ್ರವೇಶಿಸುತ್ತಾನೆ.ಇದು ಗುರುವಿಗೆ ನೀಚ ಸ್ಥಾನವಾಗಿದ್ದು; ಇದೇ ಸಂದರ್ಭದಲ್ಲಿ ಕಾಳಸರ್ಪ ದೋಷದ ಯೋಗವು ಸಂಭವಿಸುವುದರಿಂದ; ಈ ಮಹಾಮಾರಿಗೆ ಪುಷ್ಟಿಯಾಗಲಿದೆ.

ಮುಂಬರುವ ದಿ. 21.6.2020ರ ಸೂರ್ಯಗ್ರಹಣದ ತನಕ ಈ ಸಮಸ್ಯೆ ವಿಶ್ವದಲ್ಲಿ ತಾಂಡವವಾಡುವ ಸಂದರ್ಭಗಳಿರುವುದು ವಿಕಾರಿನಾಮ ಸಂವತ್ಸರದಲ್ಲಿ ಹೆಸರೇ ಸೂಚಿಸುವಂತೆ ತನ್ನ ವಿಕಾರರೂಪವನ್ನು ಬಿಟ್ಟು ಹೋಗಿದೆ. ಹಾಗೇ ಅದಕ್ಕೆ ಪರಿಹಾರ ವಿಳಂಬವಾಗುವ ಸಾಧ್ಯತೆಗಳಿವೆ. ಈ ಹಿಂದೆ ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲೂ ಸಹ ವಿಚಿತ್ರ ರೋಗ, ಕಾಯಿಲೆಗಳು ಉಲ್ಬಣಿಸಿ ಅಪಾರ ಸಾವು - ನೋವುಗಳು ಸಂಭವಿಸಿದ್ದವು. ಇದನ್ನು ನಾವು ಪುರಾಣ, ಇತಿಹಾಸ, ಕಥೆಗಳಲ್ಲಿ ಓದಿದ್ದೇವೆ, ಕೇಳಿದ್ದೇವೆ.

ಪ್ರಸ್ತುತ ಈಗ ಬಂದಿರುವ ವೈರಸ್‍ನ್ನು ನಿಯಂತ್ರಣದಲ್ಲಿಡಲು ನಮ್ಮ ದೇಶದ ರಾಜರು ರಾಜಾಜ್ಞೆಯಂತೆ ಆದೇಶ ಹೊರಡಿಸಿದ್ದಾರೆ. ಏಪ್ರಿಲ್ 14ರವರೆಗೆ ಮನೆಯಲ್ಲಿರಬೇಕು ಎಂಬ ಸೂಚನೆ ಇದ್ದರೂ ಯಾರಿಗೂ ಅದನ್ನು ಕೇಳುವ ತಾಳ್ಮೆ, ವ್ಯವಧಾನ ಇಲ್ಲ. ಕಾರಣ ಅದಕ್ಕೆ ಪೂರಕವಾಗಿ ಗ್ರಹಸ್ಥಿತಿಯೂ ಇಲ್ಲದ ಕಾರಣ ಗುರು ನೀಚ, ರಾಹು, ಕೇತುಗಳ ಸಮಸ್ಯೆಯಿದ್ದು; ಜನರು ಸಹ ರಾಜಾಜ್ಞೆಯನ್ನು ಮೀರುವ ಹಾಗಾಗಿದೆ. ಹಿಂದೆಂದೂ ಈ ತರಹದ ಸಮಸ್ಯೆಯನ್ನು ಕೇಳರಿಯದ ಕಾರಣ ಒಪ್ಪಿಕೊಳ್ಳುವುದು ಕಷ್ಟವಾಗಿದೆ ಮತ್ತು ಅವರವರ ವೈಯಕ್ತಿಕ ಸಮಸ್ಯೆಯೂ ಕಾರಣ. ಇದಕ್ಕೆ ಪರಿಹಾರ ವಾಗಿ ಪರಶುರಾಮ ಕ್ಷೇತ್ರದಲ್ಲಿ ‘ಕಾಳಸಪರ್À ಶಾಂತಿ’ಯನ್ನು ಸೌರಸೂಕ್ತ ಹೋಮ’ ವನ್ನು ದೇಶದ ಒಳಿತಿಗಾಗಿ ಸಂಕಲ್ಪ ದೊಂದಿಗೆ ದೇಶದ ರಾಜ ನಡೆಸುವುದು ಉತ್ತಮ. ರಾಜ್ಯದ ವಿಚಾರಕ್ಕೆ ಬಂದರೆ ಆಯಾ ಊರಿನ ರಕ್ಷಣೆಗೆ ಇರುವ ಗ್ರಾಮ ದೇವಿಗೆ (ಅಣ್ಣಮ್ಮ, ಮಾರಮ್ಮ, ಪಟಾಲದಮ್ಮ, ಚಾಮುಂಡಿ ಇತ್ಯಾದಿ) ಮೊಸರನ್ನ ನೈವೇದ್ಯವನ್ನು ಊರಿನ ಪ್ರಮುಖರು ಸಲ್ಲಿಸುವುದು ಒಳಿತು. ಹೆಚ್ಚು ಜನ ಸೇರದೆ ಅರ್ಚಕರು, ಊರಿನ ಪ್ರಮುಖರು, ಪಂಚಾಯಿತಿ ಅಧ್ಯಕ್ಷರು, ಸಂಬಂಧಪಟ್ಟವರು ಮಾಡಿದರೆ ಸೂಕ್ತ. ಉಡುಪಿಯ ಮಣೂರು ಗ್ರಾಮದಲ್ಲಿರುವ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ; ಈ ಕ್ಷೇತ್ರದಲ್ಲಿ ‘ಹುರಳಿ ಪಂಚ ಕಜ್ಜಾಯ ನೈವೇದ್ಯವನ್ನ ದೀಪಕ್ಕೆ ಎಳ್ಳುಎಣ್ಣೆಯನ್ನು ಸಮರ್ಪಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದು ಒಳ್ಳೆಯದು; ಹಾಗೇ ನಂಜನಗೂಡಿನ ನಂಜುಂಡೇಶ್ವರನಿಗೆ ‘ಶಾಲ್ಯಾನ್ನ’ ನೈವೇಧ್ಯ ಮಾಡಿ ಲೋಕ ಕಲ್ಯಾಣಕ್ಕೆ ಪ್ರಾರ್ಥಿಸುವುದು ಅತ್ಯಗತ್ಯವೆನಿಸುತ್ತದೆ. ಈ ಸಂದರ್ಭ ಮನೆಯಲ್ಲಿ ಇರುವ ನಾವು ನೀವೆಲ್ಲರೂ ಸೇರಿ ಲೋಕ ಕಲ್ಯಾಣ ಸಂಕಲ್ಪವಿಟ್ಟು; ತಮ್ಮ ಮತಾನುಸಾರ ಜಪಾದಿಗಳನ್ನು ಕುಟುಂಬದವ ರೊಂದಿಗೆ ಸೇರಿ ನಿಗದಿತ ಸಮಯದಲ್ಲಿ ಮಾಡುವುದು. ನಿತ್ಯವೂ ಸೂರ್ಯ ದೇವರಿಗೆ ನಮಸ್ಕರಿಸುವುದು ಹಾಗೇ ಬಂದಿರುವ ಈ ಸಂಕಷ್ಟದಿಂದ ಪಾರು ಮಾಡಿ ಲೋಕ ಕಲ್ಯಾಣವಾಗುವಂತೆ ಪ್ರಾರ್ಥಿಸಿ; ನೆಮ್ಮದಿಯ ಜೀವನ ನಡೆಸೋಣ. ಈ ಸಂಕಲ್ಪದೊಂದಿಗೆ ಭಗವಂತನನ್ನು ಪ್ರಾರ್ಥಿಸುವುದು ಹಾಗೆ ರಾಜಾಜ್ಞೆಯನ್ನು ಅನುಸರಿಸಿ; ನಿತ್ಯ ಜೀವನಕ್ಕೆ ಅಣಿಯಾಗೋಣ. ಶ್ರೀ ವಿಜಯ ವಿನಾಯಕ ಸರ್ವರಿಗೂ ಸನ್ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸುವೆ. ಶುಭಮಸ್ತು.

-ವೇದಬ್ರಹ್ಮ ಶ್ರೀಕೃಷ್ಣ ಉಪಾಧ್ಯಯ, ಮಡಿಕೇರಿ.