ಮಡಿಕೇರಿ, ಮಾ. 29: ತಿಂಗಳ ಅಂತ್ಯ ಸಮೀಪಿಸುತ್ತಿದ್ದು; ನೌಕರರಿಗೆ ವೇತನ ವಿತರಣೆ ಹಾಗೂ ಇತರ ಬ್ಯಾಂಕ್ ವ್ಯವಹಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ; ತಾ.30, ಏಪ್ರಿಲ್ 1 ಹಾಗೂ 3 ರಂದು ನಿಷೇಧಾಜ್ಞೆಯಲ್ಲಿ ಸಡಿಲಿಕೆ ಮಾಡಿದ್ದು; ಅಗತ್ಯ ವಸ್ತುಗಳನ್ನು ಖರೀದಿಸಲು ಜನತೆಗೆ ಬೆ. 6 ರಿಂದ ಮಧ್ಯಾಹ್ನ 12ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಹಾಲು, ಪತ್ರಿಕೆ ಹಾಗೂ ಅಗತ್ಯ ವಸ್ತುಗಳ ಅಂಗಡಿಗಳು, ಚಿಕಿತ್ಸಾಲಯಗಳು, ಬ್ಯಾಂಕ್‍ಗಳು ಮಾತ್ರ ಕಾರ್ಯನಿರ್ವಹಿಸಲಿದ್ದು; ಹಿಂದಿನ ಆದೇಶದಂತೆ ಇತರ ಎಲ್ಲಾ ವಹಿವಾಟುಗಳು ಸ್ಥಗಿತಗೊಂಡಿರುತ್ತವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಂಜೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಬೇಕರಿಗಳನ್ನು ತೆರೆಯಲು ಅವಕಾಶ ನೀಡಲು ನಿರ್ಧರಿಸಿತ್ತಾ ದರೂ; ಜನರ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಅದಕ್ಕೆ ಅವಕಾಶ ಕಲ್ಪಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು. ಮೀನು, ಮಾಂಸ ಮಾರಾಟ ಹಾಗೂ ಸೇವನೆಯಿಂದ ವೈರಸ್ ಹಬ್ಬದಿದ್ದರೂ; ಅವುಗಳನ್ನು ಮಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಸಂಗ್ರಹಿಸಬೇಕಾದ ಸಂದರ್ಭ ತೊಂದರೆಯಾಗಬಹುದು ಎಂದು ಜನಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದ ರಿಂದ ಅವುಗಳ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಅಗತ್ಯವಸ್ತುಗಳ ಬೆಲೆಯಲ್ಲಿ ಸಣ್ಣಪುಟ್ಟ ಏರಿಕೆಯಾಗುವದು ಸಹಜವಾಗಿದ್ದು; ಕಾಳಸಂತೆ ವ್ಯವಹಾರ ನಡೆಸದಂತೆ ಚೇಂಬರ್ ಆಫ್ ಕಾಮರ್ಸ್ ಗಮನವಹಿಸಬೇಕಿದ್ದು; ದೂರುಗಳು ಬಂದಲ್ಲಿ ಕ್ರಮ ಜರುಗಿಸುವದಾಗಿ ತಿಳಿಸಿದರು.ರೇಷನ್ ವ್ಯವಸ್ಥೆ: ಏಪ್ರಿಲ್ ಮೊದಲ ವಾರದಿಂದ ಜಿಲ್ಲೆಯಲ್ಲಿ ಪಡಿತರ ವಿತರಣೆ ವ್ಯವಸ್ಥೆ ಕೈಗೊಳ್ಳಲಿದ್ದು; ಜನಜಂಗುಳಿ ತಪ್ಪಿಸಲು ಆಹಾರ ಇಲಾಖೆ, ಗ್ರಾಹಕರಿಗೆ ಖರೀದಿಯ ದಿನಾಂಕ ನಿಗದಿಪಡಿಸಿ; ದೂರವಾಣಿ ಸಂದೇಶದ ಮೂಲಕ ಮಾಹಿತಿ ನೀಡಲು ತೀರ್ಮಾನಿಸಲಾ ಗಿದೆ. ತೋಟ ಹಾಗೂ ಇತರ ಕಾರ್ಮಿಕರಾಗಿ ಬೇರೆಡೆಯಿಂದ ಬಂದಿರುವ ರೇಷನ್‍ಕಾರ್ಡ್ ಇಲ್ಲದ ಸುಮಾರು 2500 ಮಂದಿಯನ್ನು ಗುರುತಿಸಲಾಗಿದೆ; ಅವರುಗಳಿಗೂ ಜಿಲ್ಲಾಡಳಿತ ಹಾಗೂ ಎನ್‍ಜಿಓಗಳ ಸಹಕಾರ ಪಡೆದು ಪ್ರಾಕೃತಿಕ ವಿಕೋಪನಿಧಿ ಬಳಸಿ; ಯಾವದೇ ತೊಂದರೆಯಾಗದಂತೆ ಆಹಾರ ಸರಬರಾಜು ಮಾಡಲಾಗುವದು ಎಂದರು.

ಸ್ವಯಂ ಸೇವಕರ ನೋಂದಣಿ : ಕೊರೊನಾ ಹರಡುವಿಕೆ ನಿಯಂತ್ರಣ ಸಂಬಂಧ ಕರ್ತವ್ಯ ನಿರ್ವಹಿಸಲು ಸ್ವಯಂ ಸೇವಕರ ಅಗತ್ಯವಿದ್ದು; ಇದಕ್ಕಾಗಿ ಹೆಸರು ನೋಂದಾಯಿಸಿ ಕೊಳ್ಳಲು ಕೊಡಗು ಜಿಲ್ಲಾ ವೈಬ್‍ಸೈಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. hಣಣಠಿs://ಞoಜಚಿgu.ಟಿiಛಿ.iಟಿ/eಟಿ/ಛಿoviಜ-19/ ಕ್ಕೆ ಭೇಟಿ ನೀಡಿ ನೋಂದಾಯಿಸಿ ಕೊಳ್ಳಬಹುದಾಗಿದೆ.

ರೋಗಿಗಳ ವಿವರ: ಇದುವರೆಗೆ ಗೃಹಸಂಪರ್ಕ ತಡೆಯಲ್ಲಿ 356 ಮಂದಿ ಇದ್ದು; ಒಬ್ಬರಿಗೆ ಸೋಂಕು ದೃಢಪಟ್ಟಿದ್ದು; ಗುಣಮುಖರಾಗುತ್ತಿ ದ್ದಾರೆ. 46 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 45 ಮಂದಿಯದ್ದು ‘ನೆಗೆಟಿವ್’ ಎಂದಾಗಿದೆ. ಇಂದು ಮೂವರು ಮತ್ತೆ ದಾಖಲಾಗಿದ್ದು; ಒಟ್ಟು ನಾಲ್ಕು ಮಂದಿಯನ್ನು ಪ್ರತ್ಯೇಕ ವಾರ್ಡ್‍ಗಳಲ್ಲಿ ಉಪಚರಿಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್, ವೈದ್ಯಕೀಯ ಕಾಲೇಜಿನ ಡೀನ್ ಡಾ. ಕೆ.ಎ. ಕಾರ್ಯಪ್ಪ ಉಪಸ್ಥಿತರಿದ್ದರು.