ಮಡಿಕೇರಿ, ಮಾ. 29: ಕರುನಾಡಿನ ಮುಕುಟಮಣಿ, ಮಂಜಿನ ನಗರಿ, ಮಡಿವಂತರಕೇರಿ ಎಂಬಿತ್ಯಾದಿ ಉಪಮೇಯಗಳೊಂದಿಗೆ ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಸರ್ವಾಂಗ ಸುಂದರ ಮಡಿಕೇರಿ ಇಂದು ಕೊರೊನಾ ಭೀತಿಯಿಂದ ಬಿಸಿಲಿಗೆ ಮೈಯೊಡ್ಡಿ ಅನಾಥ ವೆಂಬಂತೆ ಮಲಗಿರುವ ಮೌನ ಆವರಿಸಿಕೊಂಡಂತಿದೆ. ಸ್ಥಳೀಯ ಮಂದಿಯ ಅವಶ್ಯಕತೆ ಪೂರೈಸಿ ಕೊಳ್ಳಲಷ್ಟೇ ಸೀಮಿತಗೊಂಡಿರುವ ಈ ಇತಿಹಾಸ ನಗರಿ ನಿರ್ಜನ ಪ್ರದೇಶ ವೆಂಬಂತೆ ಭಾಸವಾಗತೊಡಗಿದೆ.ಮಡಿಕೇರಿಯ ಯಾವದೇ ರಾಜಬೀದಿಗಳಲ್ಲಿ ನಡೆದಾಡಿದರೂ; ನಮ್ಮ ಹೆಜ್ಜೆಯ ಸಪ್ಪಳವಷ್ಟೇ ಕಿವಿಗೆ ಅಪ್ಪಳಿಸುತ್ತಾ; ಕಣ್ಣು ಹಾಯಿಸಿದಷ್ಟು ದೂರವೂ ನೀರವ ಮೌನವಷ್ಟೇ ಅರಿವಾಗಲಿದೆ. ಈ ನಾಡಿನ ಬಿಸಿಲು, ಮಳೆ, ಗಾಳಿ, ಚಳಿಯೊಂದಿಗೆ ಪ್ರಕೃತಿ ಸಿರಿಯನ್ನು ಕಣ್ಮನ ತುಂಬಿಕೊಳ್ಳಲು ಬರುತ್ತಿದ್ದ ಮಂದಿಯನ್ನು ಕೈಬೀಸಿ ಕರೆಯುತ್ತಿದ್ದ ಮಂದಿ ತಮ್ಮದಲ್ಲದ ತಪ್ಪಿಗಾಗಿ ಎಲ್ಲಾ ಮನೆ, ಮಳಿಗೆಗಳ ಬಾಗಿಲು ಮುಚ್ಚಿಕೊಂಡಿದ್ದಾರೆ. ದೈನಂದಿನ ವ್ಯವಹಾರಗಳಿಂದ ವಿಮುಖರಾಗಿ ದಿಕ್ಕು ತೋಚದಂತೆ ನಾಲ್ಕು ಗೋಡೆ ನಡುವೆ ಕನವರಿಸತೊಡಗಿದ್ದಾರೆ.ಒಂದೊಮ್ಮೆ ದೂರದ ದೇಶದಲ್ಲೇಲ್ಲೊ ಹಬ್ಬಿರುವ ಸಾಂಕ್ರಮಿಕ ರೋಗ ಕುರಿತು; ದೃಶ್ಯ ಮಾಧ್ಯಮ, ಪತ್ರಿಕೆಗಳಿಂದ ಓದಿ ತಿಳಿಯುತ್ತಿದ್ದವರು; ಇಂದು ನಮ್ಮ ಭಾರತಕ್ಕೆ ಇಂತಹ ದೊಂದು ಸಂದಿಗ್ಧ ಸ್ಥಿತಿ ಬರುವದೆಂದು ಊಹಿಸದಿದ್ದರೂ; ಇಂದು

(ಮೊದಲ ಪುಟದಿಂದ) ಅನ್ಯಮಾರ್ಗವಿಲ್ಲದೆ ಜಗತ್ತಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಈ ನಗರಿಗೆ ಹೊಂದಿಕೊಂಡಿರುವ ಇಂದಿನ ಸಮಾಜಕ್ಕೆ ಹರ್ಷೋನ್ಮಾದ ಗೊಳಿಸುತ್ತಿದ್ದ ಎಲ್ಲಾ ಪ್ರವಾಸಿ ತಾಣಗಳು ಪ್ರವೇಶದ್ವಾರಗಳಲ್ಲೇ ಬೀಗ ಹಾಕಲ್ಪಟ್ಟಿವೆ. ಪ್ರತಿಷ್ಠಿತ ವಿದ್ಯಾಲಯಗಳು ಬಾಗಿಲು ಮುಚ್ಚಿಕೊಂಡು; ಈ ದೇಶದ ನಾಳಿನ ಪ್ರಜೆಗಳೆಂಬ ಹೆಗ್ಗಳಿಕೆಯ ಚಿಣ್ಣರಲ್ಲಿಯೂ ಆತಂಕ ತಂದೊಡ್ಡಿವೆ.

ಏನೂ, ಏಕೆ, ಹೇಗೆಂದು ವಿಚಾರಿಸುವವರಿಗೆ ‘ಕೊರೊನಾ’ ಎಂಬ ಮೂರಕ್ಷರದ ಉತ್ತರ ಲಭಿಸಿದರೂ; ಅದಕ್ಕೆ ಕಾರಣ ಲಭಿಸದಾಗಿದೆ. ಹೀಗಾಗಿ ಜೀವ ಸಂಕುಲದೊಂದಿಗೆ ಮಡಿಕೇರಿಗೆ ಮಡಿಕೇರಿಯೇ ಪ್ರಕೃತಿಯೊಡಲಿನ ನಡುವೆ ಮೈಯೊಡ್ಡಿ ಮಲಗಿರುವ ಅನುಭವ ದಿನೇ ದಿನೇ ಮಡುಗಟ್ಟತೊಡಗಿದೆ.

60 ವರ್ಷಗಳ ಹಿಂದೆ ಇಂತಹ ಕಷ್ಟಕಾಲವೊಂದು ಎದುರಾಗುವ ಭೀತಿಯಿಂದ; ದೇವಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗೆ ಮೊರೆಹೋಗಿರುವ ಅಂಶವೊಂದು ತಿಳಿದು ಬಂದಿದೆ. ಅದು ದೇಶವನ್ನು ಗಂಡಾಂತರಗಳಿಂದ ಪಾರುಗೊಳಿಸು ವಂತೆ ಭಗವಂತನಲ್ಲಿ ಮೊರೆಯಿ ಡಲಾದ ಸಂಗತಿ. ಅದು ಕೊಡಗು ಮುಜರಾಯಿ ಇಲಾಖೆಯಿಂದ; ದೇಶಕ್ಕೆ ಎದುರಾಗಲಿದ್ದ ಕಷ್ಟದಿಂದ ಜನತೆಯನ್ನು ರಕ್ಷಿಸಲು ತೆಗೆದುಕೊಂಡಿದ್ದ ನಿರ್ಧಾರವಾಗಿದೆ. ಅದರ ಪ್ರತಿಯೊಂದರಲ್ಲಿ ಈ ಸಂದೇಶವಿದೆ. ಒಟ್ಟಿನಲ್ಲಿ ಕಾಲ ಕಾಲಕ್ಕೆ ಎದುರಾಗಲಿರುವ ಮನುಷ್ಯನ ಕೈ ಮೀರಿದ ಕಷ್ಟಗಳಿಗೆ ಆ ಭಗವಂತನೇ ದಿಕ್ಕು ತೋರಿಸಬೇಕಷ್ಟೇ. ಅದು ವೈದ್ಯ, ಔಷಧಿ, ಏಕಾಂತ, ಕಾನೂನು ಇನ್ನಾವದೇ ರೂಪದಿಂದ ಇರಬಹುದು.! -ಶ್ರೀಸುತ