ನವದೆಹಲಿ, ಮಾ. 27: ಕೊರೊನಾ ವೈರಸ್ ದುಷ್ಪರಿಣಾಮ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್ಡೌನ್ ಇದೆ. ಇದರಿಂದ ಉದ್ಭವಿಸುವ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೋ, ರಿವರ್ಸ್ ರೆಪೋ ದರಗಳನ್ನು ಭಾರೀ ಕಡಿತ ಗೊಳಿಸಿದೆ. ಸಾಲಮರುಪಾವತಿ ಇಎಂಐ ಮೊದಲಾದ ಕುರಿತು ಹಲವು ವಿನಾಯಿತಿ ಕುರಿತು ಪ್ರಕಟಿಸಿದೆ. ತಿಂಗಳ ಕಂತುಗಳಿಗೆ 3 ತಿಂಗಳ ವಿನಾಯಿತಿ ಘೋಷಿಸಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಪತ್ರಿಕಾಗೋಷ್ಠಿಯಲ್ಲಿ ಇದನ್ನು ತಿಳಿಸಿದರು. ಮೋದಿ ಸರಕಾರ ರೂ. 1.7 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ ಆರ್ಬಿಐ ಸಹ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರಲು ಈ ಮಹತ್ವದ ಹೆಜ್ಜೆ ಇಟ್ಟಿದೆ.3 ತಿಂಗಳು ಇಎಂಐಗೆ ವಿನಾಯಿತಿ ಆರ್ಬಿಐ ತನ್ನ ಮಹತ್ವದ ಪ್ರಕಟಣೆಯಲ್ಲಿ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗೆ ಸಾಲಗಳ ಕಂತುಗಳನ್ನ ಕಟ್ಟಲು ಗ್ರಾಹಕರಿಗೆ 3 ತಿಂಗಳ ವಿನಾಯಿತಿ ನೀಡುವಂತೆ ಸೂಚಿಸಿದೆ. ಅಂದರೆ ಸಾಲ ಪಡೆದವರು ಮೂರು ತಿಂಗಳ ಕಾಲ ಇಎಂಐ ಕಟ್ಟುವ ಅನಿವಾ ರ್ಯತೆ ಇಲ್ಲ. ಬೇಕಾದರೆ ಕಟ್ಟ ಬಹುದು, ಬೇಡದಿದ್ದರೆ ಇಲ್ಲ. ಆದರೆ, ಮೂರು ತಿಂಗಳ ನಂತರ ಇಎಂಐ ಮಾಮೂಲಿ ಯಾಗೇ ಮುಂದುವರಿಯುತ್ತದೆ. ಗಮನಿಸಬೇಕಾದ ವಿಚಾರವೆಂದರೆ ಇದು ಇಎಂಐ ಕಟ್ಟಲು ಅವಧಿ ಮುಂದೂಡಲಾಗಿದೆಯೇ ಹೊರತು ಹಣದ ಮನ್ನಾ ಆಗಿಲ್ಲ. ಜನರು ಈ ವಿಚಾರದಲ್ಲಿ ಗೊಂದಲ ಕ್ಕೊಳಗಾಗುವುದು ಬೇಡ.ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಸೇರಿದಂತೆ ಎಲ್ಲಾ ಸಾಲಗಳ ಇಎಂಐ ಜೂನ್ವರೆಗೆ ಮುಂದೂಡಿಕೆ ಮಾಡಲಾಗಿದೆ. ರಾಷ್ಟ್ರೀಕೃತ, ವಾಣಿಜ್ಯ, ಸಹಕಾರಿ, ಗ್ರಾಮೀಣ ಸೇರಿ ಎಲ್ಲಾ ಬ್ಯಾಂಕ್ಗಳು ಹಾಗೂ ಚಿನ್ನಾಭರಣ ಸಾಲ, ಹಣಕಾಸು ಸಂಸ್ಥೆಗಳು ಸೇರಿ ಎಲ್ಲದಕ್ಕೂ ಇದು ಅನ್ವಯವಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.
ರೆಪೋ, ರಿವರ್ಸ್ ರೆಪೊ ಇಳಿಕೆ
ಆರ್ಬಿಐ ಪ್ರಕಟಿಸಿರುವಂತೆ ರೆಪೋ ದರ 75 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ. ಇದು ಶೇ. 4.4ಕ್ಕೆ ಇಳಿದಿದೆ. ರಿವರ್ಸ್ ರೆಪೋ ದರವನ್ನು 90 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೆ. 5.5 ರಷ್ಟಿದ್ದ ರಿವರ್ಸ್ ರೆಪೋ ಈಗ ಶೇ. 4.20ಕ್ಕೆ ಇಳಿದಿದೆ.
ಸಿಆರ್ಆರ್ ಅಥವಾ ಕ್ಯಾಷ್ ರಿಸರ್ವ್ ರೇಷಿಯೋ ದರದಲ್ಲೂ ಭಾರೀ ವ್ಯತ್ಯಯವಾಗಿದೆ. 100 ಮೂಲಾಂಕಗಳಷ್ಟು ಇಳಿಕೆಗೊಂಡಿರುವ ಸಿಆರ್ಆರ್ ದರ ಈಗ ಶೇ. 3ಕ್ಕೆ ನಿಗದಿಯಾಗಿದೆ. ಅಂದರೆ, ಒಂದು ವರ್ಷದ ಮಟ್ಟಿಗೆ ಸಿಆರ್ಆರ್ ಶೇಕಡ 3 ಕಡಿತಗೊಳಿಸಲಾಗಿದೆ. ಮಾರ್ಚ್ 28 ರಿಂದ ಒಂದು ವರ್ಷದ ಅವಧಿಯವರೆಗೆ ಈ ದರ ಅನ್ವಯವಾಗಲಿದೆ ಎಂದು ಆರ್ಬಿಐ ಗವರ್ನರ್ ತಿಳಿಸಿದ್ದಾರೆ.
ಆರ್ಬಿಐನ ಈ ಕ್ರಮದಿಂದ ದೇಶದ ಆರ್ಥಿಕತೆಗೆ ರೂ. 3.75 ಲಕ್ಷ ಕೋಟಿಯಷ್ಟು ಹಣದ ಹರಿವು ಆಗಲಿದೆ. ಇದರಿಂದ ಒಂದು ವರ್ಷದಲ್ಲಿ ಒಂದಷ್ಟು ಚೇತರಿಕೆಗೆ ದಾರಿ ಆಗುವ ನಿರೀಕ್ಷೆ ಇದೆ.
ಏನಿದು ರೆಪೋ ದರ?
ರೆಪೋ ದರ ಎಂಬುದು ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಆರ್ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ಅಂದರೆ ವಾಣಿಜ್ಯ ಬ್ಯಾಂಕುಗಳು ಹಣದ ಕೊರತೆ ಎದುರಿಸಿದರೆ ಆರ್ಬಿಐನಿಂದ ಸಾಲ ಪಡೆದುಕೊಳ್ಳುತ್ತವೆ. ಆ ಹಣಕ್ಕೆ ನಿಗದಿಯಾಗಿರುವ ಬಡ್ಡಿ ದರವೇ ರೆಪೋ ದರ. ಈಗ ಅದು ಶೇ. 4.4 ಕ್ಕೆ ಇಳಿದಿದೆ.
ರಿವರ್ಸ್ ರೆಪೋ ದರ
ಇದು ವಾಣಿಜ್ಯ ಬ್ಯಾಂಕುಗಳು ಆರ್ಬಿಐನಲ್ಲಿ ಇಡುವ ಠೇವಣಿ ಹಣದ ಮೇಲೆ ನೀಡಲಾಗುವ ಬಡ್ಡಿ ದರವಾಗಿದೆ. ಅಂದರೆ ಆರ್ಬಿಐ ಈ ಠೇವಣಿ ಮೇಲೆ ಇಂತಿಷ್ಟು ಬಡ್ಡಿ ನೀಡುತ್ತದೆ. ಅದೇ ರಿವರ್ಸ್ ರೆಪೋ ದರ.
ಆರ್ಥಿಕ ಸ್ಥಿರತೆಯನ್ನು ಬೆಂಬಲಿಸಲು ಮತ್ತು ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ಸಾಂಪ್ರದಾಯಿಕ ಮತ್ತು ಅಸಾಂಪ್ರ ದಾಯಿಕವಾದ ಎಲ್ಲಾ ಚಿಂತನೆ ನಡೆಸಲಾಗುತ್ತಿದೆ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ. ಷೇರುಗಳ ಬೆಲೆಯನ್ನು ಠೇವಣಿಗಳ ಸುರಕ್ಷತೆಗೆ ಹೋಲಿಕೆ ಮಾಡುವುದು ತಪ್ಪು. ಖಾಸಗಿ ವಲಯದ ಬ್ಯಾಂಕುಗಳು ಸೇರಿದಂತೆ ವಾಣಿಜ್ಯ ಬ್ಯಾಂಕುಗಳ ಠೇವಣಿದಾರರು ತಮ್ಮ ನಿಧಿಯ ಸುರಕ್ಷತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಸಾರ್ವಜನಿಕರು ಆತಂಕ ಪಟ್ಟುಕೊಂಡು
(ಮೊದಲ ಪುಟದಿಂದ) ಹಣ ಹಿಂತೆಗೆದುಕೊಳ್ಳುವಿಕೆ ಮಾಡಬಾರದು ಎಂದು ಅವರು ಸಲಹೆಯಿತ್ತರು. ರಿವರ್ಸ್ ರೆಪೋ ದರವನ್ನು ಹೆಚ್ಚು ಕಡಿತಗೊಳಿಸುವುದರಿಂದ ಬ್ಯಾಂಕುಗಳು ಸಾಲ ನೀಡಲು ಪ್ರೋತ್ಸಾಹಿಸಲಾಗುತ್ತದೆ.
ಹಣಕಾಸು ಆರ್ಥಿಕತೆಯ ಜೀವಸೆಲೆ, ಅದನ್ನು ಅನುಸರಿಸುವುದು ಈ ಸಮಯದಲ್ಲಿ ಭಾರತದ ರಿಸರ್ವ್ ಬ್ಯಾಂಕ್ನ ಪ್ರಮುಖ ಉದ್ದೇಶವಾಗಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.
ಕಚ್ಚಾ ತೈಲ ಬೆಲೆ ಇಳಿಕೆ ಭಾರತಕ್ಕೆ ವರದಾನವಾಗಲಿದೆ, ಆಹಾರ ಧಾನ್ಯದ ಬೆಲೆಗಳು ದಾಖಲೆಯ ಉತ್ಪಾದನೆಯ ಹಿನ್ನೆಲೆಯಲ್ಲಿ ಇವುಗಳ ಮಾರಾಟ ದರದಲ್ಲಿ ಮತ್ತಷ್ಟು ಇಳಿಕೆಯಾಗಬಹುದು ಎಂದು ಅವರು ಆಶಾ ಭಾವನೆ ವ್ಯಕ್ತಪಡಿಸಿದರು.