ಬೆಂಗಳೂರು, ಮಾ. 27: ರೈತರ ಬೆಳೆ ಸಾಲ, ಟ್ರ್ಯಾಕ್ಟರ್ ಸಾಲ, ಟಿಲ್ಲರ್ ಸಾಲ ಹೀಗೆ ಪ್ರಸಕ್ತ ಸಾಲಿನ ಮಾರ್ಚ್ 31ರವರೆಗಿನ ಸುಸ್ತಿ ಬಡ್ಡಿಯ ಮನ್ನಾ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಈ ಬಗ್ಗೆ ರಾಜ್ಯದ ಹಲವು ಡಿಸಿಸಿ ಬ್ಯಾಂಕ್ ಸೇರಿದಂತೆ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಪಿ. ಗಣಪತಿ ಅವರು ಮನವಿ ಸಲ್ಲಿಸಿದ್ದರು. ಉಚಿತ ಆಹಾರ ವಿತರಣೆ ಲಾಕ್ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಯಾರೂ ಅನ್ನವಿಲ್ಲದೆ ನರಳಾಡಬಾರದು ಎಂಬದು ಸರ್ಕಾರದ ಸದಾಶಯ. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ಗಳಲ್ಲಿ ಬಡವರಿಗೆ ಪೊಟ್ಟಣಗಳ ಮೂಲಕ ಆಹಾರವನ್ನು ವಿತರಿಸಲು ಕ್ರಮವಹಿಸಲಾಗಿದೆ. ಅಲ್ಲದೆ; ಅಗತ್ಯ ವಸ್ತುಗಳ ಸಾಗಣೆಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ರೈತರ ಉತ್ಪನ್ನಗಳು ಗೋದಾಮಿಗೆ, ಗೋದಾಮಿನಿಂದ ಮಾರುಕಟ್ಟೆಗೆ, ಮಾರುಕಟ್ಟೆಯಿಂದ ಚಿಲ್ಲರೆ ಅಂಗಡಿಗಳಿಗೆ ಸುಗಮ ಸಾಗಣೆಗೆ ಯಾವುದೇ ಅಡ್ಡಿ ಇಲ್ಲ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ಸುಲಿಗೆಕೋರರಿಗೆ ಎಚ್ಚರಿಕೆ
ಆಹಾರ ಧಾನ್ಯಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ದುಬಾರಿ ವೆಚ್ಚದಲ್ಲಿ ಮಾರಾಟ ಮಾಡಿದ ಸಂದರ್ಭದಲ್ಲಿ ದುರ್ಬಳಕೆ ಮಾಡಿಕೊಳ್ಳುವ ಸುಲಿಗೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.