ಮಡಿಕೇರಿ, ಮಾ. 27: ಜಿಲ್ಲೆಯಾದ್ಯಂತ ಕರ್ತವ್ಯ ನಿರತರಾಗಿರುವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಮನವಿ ಮಾಡಿದ್ದಾರೆ.ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ‘ಲಾಕ್‍ಡೌನ್’ ಸೆಕ್ಷನ್ ಜಾರಿಯಲ್ಲಿದ್ದು, ಜನರ ಓಡಾಟ ನಿರ್ಬಂಧಿಸಲಾಗಿದೆ. ಮನೆಯಿಂದ ಹೊರಬಂದು ರಸ್ತೆಗಳಲ್ಲಿ ತಿರುಗಾಡುವವರಿಗೆ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ. ನಿನ್ನೆ ಸಂಜೆ ನಾಕೂರು -ಶಿರಂಗಾಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗುಳಪ್ಪ ಎಂಬವರು ಕರ್ತವ್ಯ ಮುಗಿಸಿ ಹಿಂತಿಗುತ್ತಿದ್ದ ಸಂದರ್ಭ ಕಾವೇರಿ ನಿಸರ್ಗಧಾಮ ಬಳಿ ಅಡ್ಡಗಟ್ಟಿದ ಪೊಲೀಸರು ಗುಳಪ್ಪ ಅವರ ಮೇಲೆ ಲಾಠಿ ಬೀಸಿದ್ದರು. ಈ ಸಂಬಂಧ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ರವೀಶ್ ನೀಡಿದ ದೂರಿನ ಆಧಾರದಲ್ಲಿ ಸಿಇಒ ಲಕ್ಷ್ಮಿಪ್ರಿಯ ಅವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧಿಕೃತ ಪತ್ರ ಬರೆದು ತಪಾಸಣೆ ವೇಳೆ ಸರಿಯಾದ ರೀತಿಯಲ್ಲಿ ಪರಿಶೀಲಿಸುವಂತೆ ಸರಕಾರಿ ನೌಕರರಿಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಲಾಗುವುದೆಂದು ವರಿಷ್ಠಾಧಿಕಾರಿಗಳು ಭರವಸೆ ನೀಡಿದ್ದಾರೆಂದು ಸಿಇಒ ತಿಳಿಸಿದ್ದಾರೆ.ಜಿ.ಪಂ. ವ್ಯಾಪ್ತಿಗೆ ಬರುವ ಎಲ್ಲಾ ಸಿಬ್ಬಂದಿಗಳಿಗೆ ಅಧಿಕೃತವಾದ ಗುರುತಿನ ಚೀಟಿ ನೀಡಲಾಗಿದೆ. ಅಲ್ಲದೆ ಅಧಿಕೃತ ಪತ್ರ ಕೂಡ ನೀಡಲಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ಮಾಡಬೇಕೆಂದು ಅವರು ಹೇಳಿದ್ದಾರೆ.
ಅಧಿಕಾರಿಗಳ ಸಭೆ ಘಟನೆ ನಡೆದ ಕೂಡಲೇ ನಿನ್ನೆ ಸಂಜೆಯೇ ತಮ್ಮ ಸೂಚನೆ ಮೇರೆಗೆ ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಡಿವೈಎಸ್ಪಿ ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಇನ್ನು ಮುಂದಕ್ಕೆ ಸಮರ್ಪಕವಾಗಿ ಪರಿಶೀಲಿಸಿ ಕ್ರಮಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ. ಇನ್ನು ಮುಂದಕ್ಕೆ ಯಾವುದೇ ತೊಂದರೆ ಆಗುವುದಿಲ್ಲವೆಂದು ಸಿಇಒ ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.