ಸಿದ್ದಾಪುರ, ಮಾ.27 : ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ವೃದ್ಧೆಯೊಬ್ಬರ ಮೇಲೆ ಕಬ್ಬಿಣ ಸಲಾಕೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.
ನಿವೃತ್ತ ಶಿಕ್ಷಕ ದಿ.ಪುತ್ತೇರಿರ ಸೋಮಣ್ಣ ಅವರ ಪತ್ನಿ ನಿವೃತ್ತ ಶಿಕ್ಷಕಿ ಕಾಮವ್ವ (80) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪದಡಿ ಕಾರ್ಮಿಕ ಮಹಿಳೆ ಪ್ರಿಯಾ(37) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ತಾ. 22 ರಂದು ಕಾಮವ್ವ ಅವರು ಕಾಫಿ ತೋಟದ ನಿರ್ವಹಣೆಯ ಗುತ್ತಿಗೆ ಪಡೆದಿರುವ ಸುರೇಶ ಎಂಬುವವರಿಗೆ ಕರೆ ಮಾಡಿ ಕೆಲವು ವಸ್ತುಗಳು ಬೇಕಾಗಿರುವುದರಿಂದ ಮನೆಗೆ ಬರುವಂತೆ ತಿಳಿಸಿದ್ದಾರೆ. ಆದರೆ ಅಂದು ಬಂದ್ ಇದ್ದ ಕಾರಣ ಸುರೇಶ ಅವರು ಮಾರನೇ ದಿನ ಕಾಮವ್ವ ಅವರ ಮನೆಗೆ ತೆರಳಿದ್ದಾರೆ. ಕಾಮವ್ವ ಅವರನ್ನು ಕರೆದಾಗ ಮನೆಯೊಳಗಿನಿಂದ ಯಾವುದೇ ಉತ್ತರ ಬರಲಿಲ್ಲ. ಹಿಂಬಾಗಿಲನ್ನು ಗಮನಿಸಿ(ಮೊದಲ ಪುಟದಿಂದ) ಮನೆಯೊಳಗೆ ಪ್ರವೇಶಿಸಿದ ಸುರೇಶ ಅವರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಾಮವ್ವ ಅವರ ಮೃತದೇಹ ಕಂಡು ಬಂದಿದೆ. ತಕ್ಷಣ ಸುರೇಶ ಅವರು ಮೈಸೂರನಲ್ಲಿರುವ ಕಾಮವ್ವ ಅವರ ಪುತ್ರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಮನೆಗೆ ಧಾವಿಸಿದ ಕುಟುಂಬ ವರ್ಗ ಒಂಟಿಯಾಗಿದ್ದ ಕಾಮವ್ವ ಅವರು ಟೈಲ್ಸ್‍ನಲ್ಲಿ ಕಾಲು ಜಾರಿ ಬಿದ್ದು ತಲೆಗೆ ಗಾಯವಾಗಿ ಮೃತ ಪಟ್ಟಿರಬಹುದೆಂದು ಭಾವಿಸಿ ಅಂತ್ಯ ಸಂಸ್ಕಾರವನ್ನು ಕೂಡ ಮಾಡಿದ್ದರು. ಆದರೆ ಇತ್ತೀಚೆಗೆ ಕಾಮವ್ವ ಅವರ ಸಾವಿನ ಬಗ್ಗೆ ಸಂಶಯ ಉಂಟಾಗಿ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಚೆಟ್ಟಳ್ಳಿ ಠಾಣೆಯ ಹೆಡ್ ಕಾನ್ಸ್‍ಟೇಬಲ್ ಶಶಿಕುಮಾರ್ ಅವರುಗಳು ರಾಮು ಎಂಬುವವರ ಪತ್ನಿ ಕಾರ್ಮಿಕ ಮಹಿಳೆ ಪ್ರಿಯಾ ಎಂಬಾಕೆಯನ್ನು ವಶಕ್ಕೆ ಪಡೆದರು.
ಈ ಮಹಿಳೆ ಕೆಲವು ತಿಂಗಳುಗಳ ಹಿಂದೆ ಕಾಮವ್ವ ಅವರ ಮನೆಯಾವರಣದಲ್ಲಿ ಬಾಡಿಗೆಗೆಂದು ಇದ್ದ ಮನೆಯಲ್ಲಿ ವಾಸವಿದ್ದಳು. ಅಲ್ಲದೆ ಕಾಮವ್ವ ಅವರ ಮನೆ ಕೆಲಸಗಳನ್ನು ಮಾಡುತ್ತಿದ್ದಳು. ಆದರೆ ಆಕೆ ಇತ್ತೀಚೆಗೆ ಬೇರೆ ತೋಟದಲ್ಲಿ ಕೆಲಸಕ್ಕೆಂದು ಸೇರಿಕೊಂಡಿದ್ದಳು.
ಕಾಮವ್ವ ಅವರು ಒಂಟಿಯಾಗಿ ಮನೆಯಲ್ಲಿ ವಾಸವಿದ್ದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದ ಪ್ರಿಯಾ ಸಂಚು ರೂಪಿಸಿ ಹತ್ಯೆಗೈದಿದ್ದಾಳೆ. ನಂತರ ಕಾಮವ್ವ ಅವರ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾಳೆ. ಪೊಲೀಸ್ ವಿಚಾರಣೆ ವೇಳೆ ಈ ಅಂಶ ಬೆಳಕಿಗೆ ಬಂದಿದ್ದು, ಮಡಿಕೇರಿ ಮತ್ತು ಚೆಟ್ಟಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - ಅಂಚೆಮನೆ ಸುಧಿ