ಮಡಿಕೇರಿ, ಮಾ. 27: ನಗರದ ಮಹದೇವಪೇಟೆ ಕನಕದಾಸ ರಸ್ತೆಗೆ ಹೊಂದಿಕೊಂಡಿರುವ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರವೊಂದರಿಂದ ಇಲ್ಲಿನ ಪೊಲೀಸರು ಇಂದು ಅಪರಾಹ್ನ ಒಂಭತ್ತು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಡಗಿನಲ್ಲಿ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹೊರಡಿಸಿರುವ ಆದೇಶದ ಉಲ್ಲಂಘನೆ ಮೇರೆಗೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.ಸಂಬಂಧಿಸಿದ ಒಂಭತ್ತು ಮಂದಿ ಸೆ. 144 ಉಲ್ಲಂಫಿಸಿ ಪ್ರಾರ್ಥನಾ ಮಂದಿರದಲ್ಲಿ ಸೇರಿಕೊಂಡಿದಲ್ಲದೆ; ಪೊಲೀಸರು ಧ್ವನಿವರ್ಧಕ ಮೂಲಕ ಮುನ್ನೆಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯ ತಳೆದಿದ್ದರಿಂದ ಸಂಬಂಧಪಟ್ಟವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೊತ್ತಾಗಿದೆ. ಅಲ್ಲದೆ ಈ ವ್ಯಕ್ತಿಗಳ ವಿರುದ್ಧ ಸಾರ್ವಜನಿಕವಾಗಿ ಸಾಂಕ್ರಾಮಿಕ ರೋಗ ಹರಡುವಂತೆ;

(ಮೊದಲ ಪುಟದಿಂದ) ಉದ್ದೇಶಪೂರ್ವಕ ಯತ್ನಿಸಿರುವ ದೋಷಾರೋಪಣೆ ಮೇರೆಗೆ ಭಾರತೀಯ ಪೊಲೀಸ್ ಕಾಯ್ದೆ 188 ಹಾಗೂ 270ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಈ ಮಂದಿಯನ್ನು ಕಾನೂನಿನ ಮೇರೆಗೆ ಮುಂದಿನ ಕ್ರಮಕ್ಕಾಗಿ ಜಿಲ್ಲಾಡಳಿತ ಕಾಯ್ದಿರಿಸಿರುವ ಪ್ರತ್ಯೇಕ ವಸತಿಯಲ್ಲಿ ಕೂಡಿ ಹಾಕಿದ್ದು; ಜಿಲ್ಲಾಡಳಿತದ ಮುಂದಿನ ಆದೇಶದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ದಿನೇಶ್‍ಕುಮಾರ್, ಇನ್ಸ್‍ಪೆಕ್ಟರ್‍ಗಳಾದ ಅನೂಪ್‍ಮಾದಪ್ಪ, ಐ.ಪಿ. ಮೇದಪ್ಪ, ಠಾಣಾಧಿಕಾರಿ ಸದಾಶಿವಯ್ಯ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.