ವೀರಾಜಪೇಟೆ, ಮಾ. 24: ಏಪ್ರಿಲ್ 19 ರಿಂದ ವೀರಾಜಪೇಟೆಯ ಬಾಳುಗೋಡು ಕ್ರೀಡಾ ಸಮುಚ್ಚಯದಲ್ಲಿ ನಡೆಯಬೇಕಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವ ಮುಕ್ಕಾಟಿರ ಹಾಕಿ ಕಪ್ ನಮ್ಮೆಯನ್ನು ಕೊರೊನಾ ಹಿನ್ನೆಲೆ ರದ್ದುಗೊಳಿಸಿ ಮುಂದಿನ 2021ಕ್ಕೆ ಮುಂದೂಡಲಾಗಿದೆ ಎಂದು ಮುಕ್ಕಾಟಿರ ಹಾಕಿ ನಮ್ಮೆ ಅಧ್ಯಕ್ಷ ಚೋಟು ಉತ್ತಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಹಾಕಿ ಅಕಾಡೆಮಿಗೆ 2013ರಲ್ಲಿ ಹಾಕಿ ನಮ್ಮೆ ನಡೆಸಲು ಅರ್ಜಿ ನೀಡಲಾಗಿತ್ತು. 2019ರಲ್ಲಿ ನಡೆಸಲು ಅನುಮತಿ ನೀಡಿದ್ದರು. 2019ರಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆ ಮುಂದೂಡಲಾಯಿತು. ಈ ಬಾರಿಯು ಕೊರೊನಾದಿಂದಾಗಿ ಅನಿವಾರ್ಯವಾಗಿ ಮೂಂದೂಡಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿ ಮುಂದಿನ ವರ್ಷ ನಡೆಸುವಂತೆ ಆದೇಶ ನೀಡಿದೆ. ಮುಂದಿನ ಬಾರಿ ಎಲ್ಲಿ ನಡೆಸಲಾಗುವುದು ಎಂದು ಕುಟುಂಬದ ತೀರ್ಮಾನದಂತೆ ಪ್ರಕಟಿಸಲಾಗುವುದು ಎಂದರು.
ಕೊಡವ ಹಾಕಿ ಅಕಾಡೆಮಿಯ ಕಾರ್ಯದರ್ಶಿ ಅಮ್ಮಣಿಚಂಡ ರವಿ ಉತ್ತಪ್ಪ ಮಾತನಾಡಿ, ಮುಕ್ಕಾಟ್ಟಿರ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ನಿಗದಿತ ಸ್ಥಳಗಳಲ್ಲಿ ಹಲವಾರು ಕುಟುಂಬಗಳು ನೋಂದಣಿ ಮಾಡಿಕೊಂಡಿವೆ. ಪಂದ್ಯಾವಳಿ ರದ್ದಾದ ಕಾರಣ ನೋಂದಣಿ ಮಾಡಿದ ಸ್ಥಳದಿಂದಲೇ ಹಣ ಹಿಂಪಡೆದುಕೊಳ್ಳಬಹುದು ಎಂದು ಹೇಳಿದರು. ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, 2021ರಲ್ಲಿ ನಮ್ಮ ಕುಟುಂಬದಿಂದ ನಾಪೋಕ್ಲುವಿನಲ್ಲಿ ಈ ಪಂದ್ಯಾಟ ನಡೆಸಲು ತೀರ್ಮಾನಿಸಲಾಗಿತ್ತು. ಕೊರೊನಾ ಕಾರಣದಿಂದ ಮುಕ್ಕಾಟಿರ ಕುಟುಂಬ 2021ರಲ್ಲಿ ಪಂದ್ಯಾಟ ನಡೆಸುವುದರಿಂದ ನಾವು 2022 ರಲ್ಲಿ ನಾಪೋಕ್ಲುವಿನಲ್ಲಿ ನಡೆಸುತ್ತೇವೆ ಎಂದು ಹೇಳಿದರು. ಕೊಡವ ಹಾಕಿ ಅಕಾಡೆಮಿ ಹಾಕಿ ತೀರ್ಪುಗಾರರ ಸಂಘದ ಸಂಚಾಲಕ ಅಚ್ಚಕಾಳೆರ ಪಳಂಗಪ್ಪ ಮಾತನಾಡಿ, ಇನ್ನು ಮುಂದೆ ಕೌಟುಂಬಿಕ ಹಾಕಿ ಪಂದ್ಯಾವಳಿಯ ತೀರ್ಪುಗಾರಿಕೆಯನ್ನು ಅಕಾಡೆಮಿಯೆ ನಡೆಸುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕೊಡವ ಹಾಕಿ ಅಕಾಡೆಮಿ ಗೌರವ ಅಧ್ಯಕ್ಷ ಕಾಳೇಂಗಡ ರಮೇಶ್, ಉಪಾಧ್ಯಕ್ಷ ಕ್ಯಾಟಿ, ಅಕಾಡೆಮಿಯ ಜಂಟಿ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಉಪಸ್ಥಿತರಿದ್ದರು.