ಸಿದ್ದಾಪುರ, ಮಾ. 24: ಮಕ್ಕಳು ಜಗತ್ತೆಂಬ ಅದ್ಭುತ ಲೋಕದ ಸುಂದರ ಕನಸುಗಾರರು. ಅವರ ಕನಸುಗಳಿಗೆ ಸುಂದರವಾದ, ಸದೃಢವಾದ ರೆಕ್ಕೆ ಕಟ್ಟಿ ಹಾರುವಂತೆ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವ ತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ವೀರಾಜಪೇಟೆ ತಾಲೂಕಿನ ಅಮ್ಮತ್ತಿ-ಒಂಟಿಯಂಗಡಿ ಕ್ಲಸ್ಟರ್.

ಅಮ್ಮತ್ತಿ-ಒಂಟಿಯಂಗಡಿ ಕ್ಲಸ್ಟರ್ ಹತ್ತು ಸರ್ಕಾರಿ ಶಾಲೆ, ಒಂದು ಅನುದಾನಿತ ಹಾಗೂ 5 ಅನುದಾನ ರಹಿತ ಶಾಲೆಗಳನ್ನೊಳಗೊಂಡಿದ್ದು, ಈ ಶಾಲೆಗಳು ಕಣ್ಣಂಗಾಲ, ಹಾಲುಗುಂದ ಹಾಗೂ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡುಬರುತ್ತದೆ. ಈ ಕ್ಲಸ್ಟರ್‍ನಲ್ಲಿ ಮುಖ್ಯ ಶಿಕ್ಷಕರೂ ಸೇರಿದಂತೆ 50 ಮಂದಿ ಶಿಕ್ಷಕರು ಹಾಗೂ 1356 ರಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಕ್ಲಸ್ಟರ್‍ನ ವ್ಯಾಪ್ತಿಗೆ ಬರುವ ಪ್ರತೀ ಶಾಲೆಯ ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ಭಾವಚಿತ್ರ ಸಹಿತ ಮಾಹಿತಿಗಳು, ಶಾಲಾ ದಾಖಲಾತಿ ಮತ್ತು ಹಾಜರಾತಿ, ಅಕ್ಷರ ದಾಸೋಹ ಸಿಬ್ಬಂದಿಗಳ ಮಾಹಿತಿ, ಗ್ರಾಮ ಪಂಚಾಯಿತಿಗಳ ಮಾಹಿತಿ, ಇಲಾಖಾಧಿಕಾರಿಗಳ ಮಾಹಿತಿ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ವಿಶೇಷಚೇತನ ವಿದ್ಯಾರ್ಥಿಗಳ ಮಾಹಿತಿ ಕ್ಲಸ್ಟರ್‍ನ ಶಿಕ್ಷಕರು ಪಡೆದಂತಹ ತರಬೇತಿಗಳ ಮಾಹಿತಿ, ವಾರ್ಷಿಕ ಯೋಜನೆಗಳ ಮಾಹಿತಿ ಹೀಗೆ ಕ್ಲಸ್ಟರ್‍ಗೆ ಸಂಬಂಧಿಸಿದಂತಹ ಎಲ್ಲಾ ಮಾಹಿತಿಗಳೂ ಇಲ್ಲಿ ಸಿಗುತ್ತದೆ.

ಮಾತ್ರವಲ್ಲದೆ ನಲಿ-ಕಲಿ ಕಿಟ್, ವಿಜ್ಞಾನ ಮಾದರಿಗಳು, ಪಪೆಟ್ಸ್, ವಿವಿಧ ಕಲಿಕೋಪಕರಣಗಳು, ಪುಸ್ತಕ ಭಂಡಾರವನ್ನು ಒಳಗೊಂಡಿದ್ದು ಅವಶ್ಯಕತೆಯಿರುವ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗಾಗಿ ಅದನ್ನು ಸದ್ಭಳಕೆ ಮಾಡುವ ಸದವಕಾಶವನ್ನು ಇಲ್ಲಿನ ಕ್ರಿಯಾಶೀಲ ಸಿ.ಆರ್.ಪಿ. ಸುಷಾ ಕೆ.ಕೆ. ನೀಡಿರುತ್ತಾರೆ. ಇವರ ಸೇವೆ ಹಾಗೂ ಉತ್ಸಾಹವನ್ನು ಗಮನಿಸಿದ ರೀಬಿಲ್ಡ್ ಸಂಸ್ಥೆ ಕೊಡಗು ಇವರು ಕೇಂದ್ರಕ್ಕೆ ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದ್ದು ಕ್ಲಸ್ಟರ್‍ನ ಎಲ್ಲಾ ಶಾಲೆಗಳಿಗೂ ಉಪಯೋಗ ವಾಗುವಂತೆ ಮಾಡಿದೆ. ಇಷ್ಟಕ್ಕೂ ನಿಲ್ಲದು, ಶಿಕ್ಷಕರ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಸೃಜನಶೀಲತೆ ಯನ್ನು ಹೆಚ್ಚಿಸುವ ಸಲುವಾಗಿ ಕ್ರಾಫ್ಟ್‍ಗಳನ್ನು ಮಾಡಿಸಲಾಗಿದೆ.

ವಿಶೇಷವೆಂದರೆ ಇಲ್ಲಿನ ಶಾಲೆಗಳ ಶಿಕ್ಷಕರು ವಿಭಿನ್ನ ರೀತಿಯಲ್ಲಿ ನಾವೀನ್ಯ ಚಟುವಟಿಕೆಗಳನ್ನು ತಮ್ಮ ಪಾಠ ಬೋಧನೆಯಲ್ಲಿ ಅಳವಡಿಸಿ ರುವುದರಿಂದ ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳು ಇರುವುದಿಲ್ಲ.

ಅದ್ಭುತ ಲೋಕದಂತೆ ಅನಿಸುವ ಈ ಕ್ಲಸ್ಟರ್‍ನಲ್ಲಿ ಪ್ರತೀ ವರ್ಷ ಯಾವುದಾದರೊಂದು ವಿನೂತನ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಕ್ಲಸ್ಟರ್‍ನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಒಂದೆಡೆ ಸೇರಿಸಿ ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆಯನ್ನು ಅನಾವರಣ ಗೊಳಿಸಿ ಸಮುದಾಯದ ಗಮನ ಸೆಳೆಯುತ್ತಾ ಬಂದಿದೆ. ಇಂತಹ ಕಾರ್ಯಕ್ರಮದಲ್ಲಿ ಸಿ.ಆರ್.ಪಿ. ಅವರು ಪ್ರತೀ ಶಾಲೆಯಲ್ಲಿ ತಾವು ಗಮನಿಸಿದಾಗ ಕಂಡು ಬಂದಂತಹ ಉತ್ತಮ ಅಂಶಗಳನ್ನಾಧರಿಸಿ ಬಹುಮಾನವನ್ನು ನೀಡುವ ಮೂಲಕ ಒಂದು ಶಾಲೆಯ ಉತ್ತಮ ಅಂಶವು ಮತ್ತೊಂದು ಶಾಲೆಗೆ ಪ್ರೇರಣೆ ಯಾಗುವಂತೆ ಮಾಡುವುದರೊಂದಿಗೆ ಶಿಕ್ಷಕರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. 2018-19ನೇ ಸಾಲಿನಲ್ಲಿ ನಲಿ-ಕಲಿ ಮೇಳವನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದರೆ, 2019-20ನೆಯ ಸಾಲಿನಲ್ಲಿ 3ನೇ ತರಗತಿಯ ನಲಿ-ಕಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅವರ ಕಲಿಕಾ ಸಾಧನೆಗೆ ಅಂಗೀಕಾರ ನೀಡಿ ರಾಜ್ಯಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ.

ನಲಿ-ಕಲಿ ಪದ್ಧತಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಸಿ.ಆರ್.ಪಿ. ಸುಷಾ ಕೆ.ಕೆ. ಅವರ ನೇತೃತ್ವದಲ್ಲಿ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಕೆಯ ಭದ್ರಬುನಾದಿಯನ್ನು ಹಾಕಿ ಕೊಡುತ್ತಾ ಬಂದಿದ್ದಾರೆ. ಈ ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿಗಳು ಇದೇ ಕ್ಲಸ್ಟರ್‍ನ ಪ್ರೌಢಶಾಲೆಗಳಿಗೆ ದಾಖಲಾಗುವುದರಿಂದ ಪ್ರತೀ ವರ್ಷವೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ವನ್ನು ನೀಡುತ್ತಲೇ ಬಂದಿದ್ದಾರೆ. ಅದರಲ್ಲೂ 2018-19ನೆಯ ವರ್ಷ ಸಾಧನೆಯ ವರ್ಷ. ಏಕೆಂದರೆ ಕ್ಲಸ್ಟರ್‍ನ ವ್ಯಾಪ್ತಿಯ ನಾಲ್ಕು ಪ್ರೌಢ ಶಾಲೆಗಳೂ ಶೇ. 100 ರಷ್ಟು ಫಲಿತಾಂಶವನ್ನು ಪಡೆದಿದೆ. ಈ ಸಾಧನೆಗೆ ಪ್ರೌಢಶಾಲಾ ಶಿಕ್ಷಕರ ಸತತ ಪ್ರಯತ್ನದೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರು ನೀಡಿದ ಭದ್ರಬುನಾದಿಯೂ ಕಾರಣ ಎಂಬುದು ಹೆಮ್ಮೆಯ ವಿಷಯ.

ಒಟ್ಟಿನಲ್ಲಿ ಹೇಳುವುದಾದರೆ ಸಾಧಿಸುವ ಛಲವಿರುವವನಿಗೆ ಯಾವ ಸಾಧನೆಯೂ ಕಷ್ಟವಲ್ಲ ಎಂಬುದನ್ನು ಸಮಾನ ಮನಸ್ಕರ ತಂಡವನ್ನು ಒಳಗೊಂಡ ಈ ಕ್ಲಸ್ಟರ್ ಸಾಧಿಸಿ ತೋರಿಸಿದೆ.

ಎಳೆಯ ಬೆಳೆಯುವ ಮೊಳಕೆಗಳಿಗೆ ನಿರಂತರ ಪ್ರೋತ್ಸಾಹ ಪ್ರೇರಣೆಯ ಜೊತೆಗೆ ಅಂಗೀಕಾರ ವನ್ನು ನೀಡುವ ಮೂಲಕ ಮಾದರಿ ಯಾದ ಈ ಅಮ್ಮತ್ತಿ-ಒಂಟಿಯಂಗಡಿ ಕ್ಲಸ್ಟರ್ ಮತ್ತೊಂದು ವರುಷದ ಸಾಧನೆಯ ಹಾದಿಗೆ ದಿಟ್ಟ ಹೆಜ್ಜೆಯನ್ನಿ ಡುತ್ತಿದೆ.

ಇಲಾಖೆಯಿಂದ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿರುವುದು ಮತ್ತು ಇಲಾಖಾಧಿಕಾರಿಗಳು ನೀಡಿರುವ ಪ್ರೋತ್ಸಾಹ ಸಲಹೆ ಸೂಚನೆ ಮಾರ್ಗದರ್ಶನವೇ ಇಷ್ಟೊಂದು ಮುಂದುವರೆಯಲು ಸಹಾಯವಾಯಿತು.

- ಎ.ಎನ್. ವಾಸು, ಸಿದ್ದಾಪುರ