ಮಡಿಕೇರಿ, ಮಾ. 22: ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಕೊರೊನಾ ಎಂಬ ಮಹಾಮಾರಿ ಭಾರತ ದೇಶವನ್ನೂ ತಲ್ಲಣಗೊಳಿಸಿದ್ದು, ಪ್ರಸ್ತುತದ ವಯೋಮಾನದ ಜನತೆ ಕಂಡು-ಕೇಳರಿಯದ ರೀತಿಯ ಸನ್ನಿವೇಶವನ್ನು ನಿರ್ಮಾಣ ಮಾಡಿರುವುದನ್ನು ಮೆಟ್ಟಿನಿಲ್ಲುವ ಪ್ರಯತ್ನ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಾ. 22ರ ಭಾನುವಾರದಂದು ದೇಶವ್ಯಾಪಿಯಾಗಿ ಕರೆ ನೀಡಿದ್ದ ‘ಜನತಾ ಕಫ್ರ್ಯೂ’ಗೆ ಕೊಡಗು ಜಿಲ್ಲೆಯೂ ತಲೆಬಾಗಿದೆ.
‘ಜನತಾ ಕಫ್ರ್ಯೂ’ಗೆ ನಿರೀಕ್ಷೆಗೂ ಮೀರಿದ ಜನಸ್ಪಂದನೆಯೊಂದಿಗೆ ಇಡೀ ಕೊಡಗು ಜಿಲ್ಲೆ ದಿನವಿಡೀ ಯಾವುದೇ ಚಟುವಟಿಕೆಗಳಿಲ್ಲದೆ ನೀರವ ಮೌನದೊಂದಿಗೆ ಸ್ತಬ್ಧಗೊಂಡಿತ್ತು.
ಎಲ್ಲೆಲ್ಲೂ... ಎಲ್ಲವೂ ಖಾಲಿ... ಖಾಲಿಯಾಗಿದ್ದವು. ಬಹುತೇಕ ಪ್ರಾಣಿ-ಪಕ್ಷಿಗಳ ಕಲರವ ಹೊರತುಪಡಿಸಿದರೆ ಜನತೆ ತಮ್ಮ ತಮ್ಮ ಮನೆಗಳಿಂದ ಹೊರಗೆ ತಲೆ ಹಾಕಿದಂತಿರಲಿಲ್ಲ. ಎಲ್ಲೊ... ಒಂದೆರಡು ವಾಹನಗಳ ಓಡಾಟ... ಕರ್ತವ್ಯದ ಜವಾಬ್ದಾರಿ ಹೊಂದಿದ್ದ ಬೆರಳೆಣಿಕೆಯ ಮಂದಿಯ ವೃತ್ತಿಪರತೆ ಹೊರತುಪಡಿಸಿದರೆ ಇಡೀ ಜಿಲ್ಲೆಯಾದ್ಯಂತ ಬಿಕೋ ಎಂಬ ಪರಿಸ್ಥಿತಿ ಭಾನುವಾರದಂದು ಕಂಡುಬಂದಿತು.
ಈ ಜನತಾ ಕಫ್ರ್ಯೂ ಒಂದು ರೀತಿಯಲ್ಲಿ ಜನತೆಗೆ ಹೊಸದೊಂದು ಅನುಭವ. ಇತರ ರೀತಿಯ.. ವೈಮನಸ್ಸುಗಳ... ಪರ-ವಿರೋಧಗಳ ಕರೆಯ ಬಂದ್-ಗಲಾಟೆಗಳು... ಕೋಮುದಳ್ಳುರಿಯನ್ನು ಎದುರಿಸುವಂತಹ ‘ಕಫ್ರ್ಯೂ’ ಇದಾಗಿರಲಿಲ್ಲ. ಪ್ರತಿಯೊಬ್ಬರಲ್ಲೂ ಯಾವುದೋ ಬಗೆಯ ಆತಂಕಭರಿತವಾದ ಒದ್ದಾಟ ಚಡಪಡಿಕೆ ಸಹಜವಾಗಿತ್ತು... ಭಯಮಿಶ್ರಿತ ಸನ್ನಿವೇಶದಿಂದಾಗಿ ಅಂಗಡಿ-ಮುಂಗಟ್ಟುಗಳಿರಲಿ... ಮನೆಗಳ ಬಾಗಿಲುಗಳು ಸಹ ತೆರೆಯಲ್ಪಟ್ಟಿರಲಿಲ್ಲ. ಮನೆಯೊಳಗೆ ಆಹಾರ ಮತ್ತಿತರ ಅಗತ್ಯ ವಸ್ತುಗಳನ್ನು ಶೇಖರಿಸಿಟ್ಟುಕೊಂಡಿದ್ದ ಜನತೆ... ದೇಶದಲ್ಲೇನು ನಡೆಯುತ್ತಿದೆ ಎಂಬ ಆತಂಕದ ವದನದೊಂದಿಗೆ ಟಿವಿ ಎದುರು ಕುಳಿತು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರು.
ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಇಡೀ ಕೊಡಗು ಜಿಲ್ಲೆ ನೀರವ ಮೌನಕ್ಕೆ ಜಾರಿತ್ತು. ಸಂಜೆ 5 ಗಂಟೆಗೆ ಪ್ರಧಾನಿಯವರ ಸಲಹೆಯಂತೆ ಕೊರೊನಾ ವಿರುದ್ಧ ಶ್ರಮಿಸುತ್ತಿರುವ ಮಂದಿಗೆ ಚಪ್ಪಾಳೆ, ಗಂಟೆ ಬಾರಿಸಿ, ಶಂಖ ಊದಿ, ತಮಟೆ ಬಾರಿಸುವ ಮೂಲಕ ಜನತೆ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೆಳಿಗ್ಗೆ ಕೆಲಹೊತ್ತು ಮಾತ್ರ ಹಾಲಿನ ಅಂಗಡಿ ಕಾರ್ಯನಿರ್ವಹಿಸಿದ್ದು, ಇವೂ ಕೂಡ ತ್ವರಿತಗತಿಯಲ್ಲೇ ಮುಚ್ಚಲ್ಪಟ್ಟಿತ್ತು. ಜಿಲ್ಲೆಯ ಇತರೆಡೆಗಳಲ್ಲಿಯೂ ಇದೇ ರೀತಿಯ ಚಿತ್ರಣ ಎದುರಾಗಿತ್ತು. ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳಿಗೂ ಸ್ವಯಂ ನಿರ್ಬಂಧವುಂಟಾಗಿತ್ತು.
ಮಡಿಕೇರಿ ಸ್ತಬ್ಧ
ಮಡಿಕೇರಿ ನಗರ ಇಂದು ಸಂಪೂರ್ಣ ಸ್ತಬ್ಧಗೊಂಡಿತ್ತು. ವಾಹನ-ಜನ ಸಂಚಾರವಿಲ್ಲದೆ ಬಿಕೋ ಎನ್ನುತಿತ್ತು. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸರಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಂಡು ಬರಲಿಲ್ಲ. ಸುಮಾರು 342 ಸರಕಾರಿ ಬಸ್ಗಳು ಸರಕಾರಿ ಬಸ್ ನಿಲ್ದಾಣ ಹಾಗೂ ಡಿಪೋವಿನಲ್ಲಿ ಸಂಚಾರ ಸ್ಥಗಿತಗೊಳಿಸಿನಿಂತಿದ್ದವು. ಒಂದು ಏರ್ಪೋರ್ಟ್ ಬಸ್ ಮಾತ್ರ 15 ಪ್ರಯಾಣಿಕರೊಂದಿಗೆ ಬೆಳಿಗ್ಗೆ 8.30 ಸುಮಾರಿಗೆ ತೆರಳಿದ್ದು ಬಿಟ್ಟರೆ ಉಳಿದ ಬಸ್ಗಳು ನಿಲ್ದಾಣಗಳನ್ನು ಬಿಟ್ಟು ಕದಲಲಿಲ್ಲ.
ಬಸ್ ಸಂಚಾರ ಇಲ್ಲವಾದರೂ ಸರಕಾರಿ ಬಸ್ ನಿಲ್ದಾಣವನ್ನು ಶುಚಿಗೊಳಿಸುವ ಕಾರ್ಯ ನಡೆಯುತಿತ್ತು. ಸಂಚಾರಿ ನಿಯಂತ್ರಕರಾದ ಎಸ್.ಎನ್. ಬೋರಯ್ಯ ‘ಶಕ್ತಿ’ಯೊಂದಿಗೆ ಮಾತನಾಡಿ, ದೇಶ ಹಾಗೂ ಜನರ ಹಿತದೃಷ್ಟಿಯಿಂದ ಕರೆ ನೀಡಲಾಗಿರುವ ಜನತಾ ಕಫ್ರ್ಯೂ ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಿಸಿದರು. ಖಾಸಗಿ ಬಸ್ಗಳು ಕೂಡ ಸಂಚಾರ ಸ್ಥಗಿತಗೊಳಿಸಿದ್ದವು. ಮಡಿಕೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ 25 ಮಂದಿ ಸಿಬ್ಬಂದಿ, ಎಎಸ್ಐಗಳಾದ ರಾಧ ಹಾಗೂ ವಾಣಿಶ್ರೀ ಇವರುಗಳ ನೇತೃತ್ವದಲ್ಲಿ ಕರ್ತವ್ಯ ನಿರ್ವಹಿಸಿದರು. ದೂರು ನೀಡಲು ಬರುವ ದೂರುದಾರರನ್ನು ಡೆಟಾಲ್ ನೀಡಿ ಕೈ ಶುಚಿಗೊಳಿಸಿಕೊಂಡ ಬಳಿಕ ಠಾಣೆಗೆ ಪ್ರವೇಶಿಸುವಂತೆ ಸೂಚಿಸಲಾಗುತಿತ್ತು. ಮಡಿಕೇರಿ ನಗರ ಠಾಣೆಯಲ್ಲಿ ಸಿಬ್ಬಂದಿ ವಿಲೇವಾರಿಯಾಗದ ಕಡತಗಳ ವಿಲೇವಾರಿಗೆ ಒತ್ತು ನೀಡಿದ್ದರು.
ಪೆಟ್ರೋಲ್ ಬಂಕ್ಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಪೆಟ್ರೋಲ್ ಬಂಕ್ ಮಾಲೀಕರ ಸಂಘ ಪ್ರಕಟಣೆ ನೀಡಿತ್ತಾದರೂ ಜಿಲ್ಲಾಸ್ಪತ್ರೆ ಬಳಿಯ ಪೆಟ್ರೋಲ್ ಬಂಕ್ವೊಂದು ಕಾರ್ಯನಿರ್ವಹಿಸುತ್ತಿದ್ದುದು ಗೋಚರಿಸಿತು. ಮೂರ್ನಾಲ್ಕು ಮೆಡಿಕಲ್ ಶಾಪ್ಗಳು ತೆರೆದಿದ್ದವು. ಅಗತ್ಯ ಔಷಧಗಳನ್ನು ಗ್ರಾಹಕರು ಖರೀದಿಸುತ್ತಿದ್ದುದು ಕಂಡುಬಂತು.
ಕರಿಕೆ: ಜನತಾ ಕಫ್ರ್ಯೂಗೆ ಕರ್ನಾಟಕ-ಕೇರಳ ಗಡಿ ಕರಿಕೆ ಗ್ರಾಮದಲ್ಲಿ ಜನತೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.
ಬೆಳಿಗ್ಗೆಯಿಂದ ಅಂಗಡಿ ಮುಂಗಟ್ಟು, ಹೊಟೇಲ್ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ಪ್ರತಿ ಭಾನುವಾರ ಜನರಿಂದ ಗಿಜಿಗುಡುತ್ತಿದ್ದ ನ್ಯಾಯ ಬೆಲೆ ಅಂಗಡಿ ಕೂಡ ಮುಚ್ಚಲ್ಪಟ್ಟಿತ್ತು. ಚೆಂಬೇರಿ ಗಡಿಯಲ್ಲಿರುವ ಚೆಕ್ ಪೋಸ್ಟ್ ಬೆಳಿಗ್ಗೆಯಿಂದ ಸಂಪೂರ್ಣ ಮುಚ್ಚಿದ್ದು ಕರಿಕೆ ಉಪ ಠಾಣಾಧಿಕಾರಿ ಮೋಹನ, ಉಪವಲಯ ಅರಣ್ಯಾಧಿಕಾರಿ ಸಚಿನ್ ಬಿರಾದಾರ್ ಹಾಗೂ ಪೊಲೀಸ್, ಅರಣ್ಯ ಸಿಬ್ಬಂದಿ ಗಡಿಯಲ್ಲಿ ಕರ್ತವ್ಯನಿರತರಾಗಿದ್ದರು. ಕೇರಳದಿಂದ ನೂರಾರು ಸಂಖ್ಯೆಯಲ್ಲಿ ಮದ್ಯ ಕೊಂಡುಕೊಳ್ಳಲು ಚೆಂಬೇರಿಗೆ ಆಗಮಿಸುತ್ತಿದ್ದ ಮದ್ಯಪಾನಿಗಳು ಕೂಡ ಇಂದು ಮನೆಯಿಂದ ಹೊರಬಂದಂತೆ ಕಾಣಲಿಲ್ಲ.
ನಾಪೆÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯ ನಾಪೆÇೀಕ್ಲು ಪಟ್ಟಣ, ಹಳೇತಾಲೂಕು, ಕೊಳಕೇರಿ, ಕುಂಜಿಲ, ಕಕ್ಕಬ್ಬೆ ಪಟ್ಟಣಗಳಲ್ಲಿ ಜನರ ಓಡಾಟ, ವಾಹನ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಈ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ನಾಪೆÇೀಕ್ಲು ಪಟ್ಟಣದಲ್ಲಿ ಸರಕಾರಿ ಆಸ್ಪತ್ರೆ ಹೊರತುಪಡಿಸಿ, ಮೆಡಿಕಲ್ ಸ್ಟೋರ್ಗಳು ಕೂಡ ಮುಚ್ಚಲ್ಪಟ್ಟಿದ್ದವು. ಸರಕಾರಿ, ಖಾಸಗಿ ಬಸ್ಗಳ ಓಡಾಟವಿರಲಿಲ್ಲ. ಆಟೋ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಕೆಲವು ಅಂಗಡಿಗಳ ಬಾಗಿಲುಗಳಿಗೆ ಸಿಕ್ಕಿಸಿದ ದಿನಪತ್ರಿಕೆಗಳನ್ನು ಕೂಡ ಅಂಗಡಿ ಮಾಲೀಕರು ತೆಗೆದುಕೊಳ್ಳದಿರುವದು ಕಂಡು ಬಂತು.
ಸಂತೆ ರದ್ದು: ಮುಂಜಾಗ್ರತಾ ಕ್ರಮವಾಗಿ ಸೋಮವಾರ ನಡೆಯಬೇಕಿದ್ದ ವಾರದ ಸಂತೆಯನ್ನು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ನಾಪೆÇೀಕ್ಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ತಿಳಿಸಿದ್ದಾರೆ. ಪಟ್ಟಣದಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಗ್ರಾಹಕರು ಸಂಪೂರ್ಣವಾಗಿ ಮುಚ್ಚಿ ಜನತೆ ಸಹಕಾರ ನೀಡಿದ್ದಾರೆ. ಅದರಂತೆ ಜನಸಾಮಾನ್ಯರು ಕೂಡ ಮನೆಯಿಂದ ಹೊರಬಾರದೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ತಿಳಿಸಿದರು.
ಇಂದಿರಾನಗರದ ನನ್ನ ಮನೆ ವ್ಯಾಪ್ತಿಯಲ್ಲಿ ಸುಮಾರು 300 ಮನೆಗಳಿವೆ. ಜನತಾ ಕಫ್ರ್ಯೂನ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಬಾರದೆ ಕಫ್ರ್ಯೂಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವ್ಯಾಪ್ತಿಗೆ ಬರುವ ಹೊರರಾಷ್ಟ್ರದ ಜನರ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಗಮನಹರಿಸಬೇಕು ಎಂದು ತಾ.ಪಂ. ಸದಸ್ಯೆ ನೆರೆಯಂಡಮ್ಮಂಡ ಉಮಾ ಪ್ರಭು ಒತ್ತಾಯಿಸಿದ್ದಾರೆ.
ಪೆರಾಜೆ: ಗಡಿಭಾಗದ ಪೆರಾಜೆಯ ಗ್ರಾಮ ಪಂಚಯಿತಿ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪೆರಾಜೆಯಲ್ಲಿ ಅಕ್ಷರಶಃ ಜನಜೀವನ ಸ್ತಬ್ಧಗೊಂಡಿತ್ತು. ಮುಖ್ಯರಸ್ತೆಯಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಮಾಧ್ಯಮದವರ ಹೊರತಾಗಿ ಕೇವಲ ತುರ್ತು ಅಗತ್ಯದ ವಾಹನಗಳು ಮಾತ್ರ ರಸ್ತೆಯಲ್ಲಿ ಓಡಾಡುತ್ತಿದ್ದವು. ಉಳಿದಂತೆ ಕಾರ್ಮಿಕರು, ಆಟೋ ರಿಕ್ಷಾಗಳು, ಖಾಸಗಿ ವಾಹನಗಳು ವರ್ತಕರು ಹೊಟೇಲ್, ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆಯಿಂದಲೇ ಮುಚ್ಚಿ ಪೂರ್ಣ ಸಹಕಾರ ನೀಡಿದರು.