ಮಡಿಕೇರಿ, ಮಾ. 22: ಮಡಿಕೇರಿ ತಾಲೂಕಿನಲ್ಲಿರುವ ಬಿಪಿಎಲ್ (ಆದ್ಯತಾ ಪಡಿತರ ಚೀಟಿ) ಪಡಿತರ ಚೀಟಿಗಳ ಶೇಕಡವಾರು ಪ್ರಮಾಣವನ್ನು ಗಮನಿಸಲಾಗಿದ್ದು, ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹರಾಗಿರುವಂತಹ ಅಧಿಕ ಸಂಖ್ಯೆಯ ಕುಟುಂಬಗಳು ಪಡಿತರ ಚೀಟಿ ಪಡೆದುಕೊಳ್ಳುವ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ ಇಲಾಖಾ ಮಾನದಂಡಗಳನ್ನು ಮರೆಮಾಚಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವುದು ಕಂಡುಬಂದಿದೆ.
ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಕಾನೂನು ಪ್ರಕಾರ ದಂಡ ಹಾಗೂ ಕಾರಗೃಹ ವಾಸ ಈ ಎರಡರಿಂದಲೂ ದಂಡನೆಗೆ ಗುರಿ ಪಡಿಸಬಹುದಾಗಿದೆ. ಗಂಭೀರ ಅಪರಾಧವಾಗಿದೆ. ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವ ಫಲಾನುಭವಿಗಳ ಮಾಹಿತಿಯನ್ನು ಸೂಕ್ತ ದಾಖಲೆ ಸಹಿತ ಆಹಾರ ಶಾಖೆಗೆ ನೀಡಬಹುದಾಗಿದ್ದು, ಇಂತಹ ದೂರುದಾರರ ವಿವರವನ್ನು ಗೌಪ್ಯವಾಗಿಡಲಾಗುವುದು.
ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕುರಿತು ಇಲಾಖಾಧಿಕಾರಿಗಳ ಮೂಲಕ ವಿವಿಧ ಹಂತಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅನರ್ಹ ಬಿಪಿಎಲ್ ಪಡಿತರ ಚೀಟಿದಾರರು ತಾವು ಹೊಂದಿರುವ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಗಳನ್ನು ಸ್ವಯಂ ಪ್ರೇರಿತರಾಗಿ ತಾಲೂಕು ಕಚೇರಿಯ ಆಹಾರ ಶಾಖೆಗೆ ಹಿಂದಿರುಗಿಸಿ ಎಪಿಎಲ್ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ತಪ್ಪಿದಲ್ಲಿ ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಇಲಾಖಾ ವತಿಯಿಂದ ನಡೆಸಲಾಗುವ ಕಾರ್ಯಾಚರಣೆ ಸಂದರ್ಭ ಪತ್ತೆಯಾಗುವ ಅನರ್ಹ ಬಿಪಿಎಲ್ ಕಾರ್ಡುದಾರರ ವಿರುದ್ಧ ಸರ್ಕಾರದ ಅದೇಶದಂತೆ ಅನಧಿಕೃತವಾಗಿ ವಶಪಡಿಸಿಕೊಳ್ಳುವುದು ಸೆಪ್ಟಂಬರ್ 23, 1977 ರಡಿ ಹಾಗೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಹಾಗೂ ಇಲ್ಲಿಯವರೆಗೆ ಪಡೆದಿರುವ ಆಹಾರ ಧಾನ್ಯಗಳ ಮೊಬಲಗನ್ನು ಪ್ರತಿ ಕೆ.ಜಿ. ಅಕ್ಕಿಗೆ ರೂ. 35 ರಂತೆ ಲೆಕ್ಕ ಹಾಕಿ ದಂಡ ವಸೂಲು ಮಾಡಲಾಗುವುದು ಎಂಬುದಾಗಿ ಅನರ್ಹ ಬಿಪಿಎಲ್ ಕಾರ್ಡುದಾರರಿಗೆ ಈ ಮೂಲಕ ಅಂತಿಮ ಎಚ್ಚರಿಕೆ ನೀಡಲಾಗಿದೆ.
ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿರುವ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ಬಿಳಿ ಬೋರ್ಡ್ ವಾಹನವನ್ನು ಹೊಂದಿರುವವರು, ಕುಟುಂಬದ ಸದಸ್ಯರಲ್ಲಿ ಕೇಂದ್ರ/ರಾಜ್ಯ ಸರ್ಕಾರಿ/ಅರೆ ಸರ್ಕಾರಿ ಅಂದರೆ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸರ್ಕಾರಿ ಸ್ವಾಮ್ಯದ ನಿಯಮಗಳು/ ಮಂಡಳಿಗಳು ಸಂಸ್ಥೆಗಳು/ಸ್ವಾಯತ್ತ ಸಂಸ್ಥೆಗಳು/ ಪ್ರಾಧಿಕಾರಗಳು ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ಸಿಬ್ಬಂದಿ/ನೌಕರರು ಇರುವಂತಹ ಕುಟುಂಬಗಳು, ಕುಟುಂಬದ ಸದಸ್ಯರಲ್ಲಿ ಮಾಸಿಕ ರೂ. 10,000 ಕ್ಕಿಂತಲೂ ಹೆಚ್ಚಿನ ನಿವೃತ್ತಿ ವೇತನ-ಕುಟುಂಬ ಪಿಂಚಣಿ ಪಡೆಯುವವರು ಇರುವಂತಹ ಕುಟುಂಬಗಳು, ಆದಾಯ ತೆರಿಗೆ/ ಸೇವಾ ತೆರಿಗೆ /ವೃತ್ತಿ ತೆರಿಗೆ/ ವ್ಯಾಟ್ ಅಥವಾ ಜಿ.ಎಸ್.ಟಿ ತೆರಿಗೆಯನ್ನು ಪಾವತಿಸುವ ಎಲ್ಲಾ ಕುಟುಂಬಗಳು, ಕುಟುಂಬವು ಸದರಿ ವಿಳಾಸದಲ್ಲಿ ವಾಸವಿಲ್ಲದಿರುವುದು, ಒಂದೇ ಮನೆಯಲ್ಲಿ ವಾಸವಿದ್ದು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವುದು.
ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್(7.5 ಏಕರೆ)ಗಿಂತ ಹೆಚ್ಚಿನ ಒಣಭೂಮಿ (ಡಿ ವರ್ಗದ ಅಥವಾ) ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ವಾರ್ಷಿಕ 1.20 ಲಕ್ಷ ಕ್ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು, ನಗರ ಪ್ರದೇಶಗಳಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಹಾಗೂ ಮಾಸಿಕ ರೂ 10 ಸಾವಿರಕ್ಕಿಂತ ಹೆಚ್ಚು ಮನೆ ಬಾಡಿಗೆ ಪಡೆಯುತ್ತಿರುವಂತಹ ಕುಟುಂಬಗಳು, ಕುಟುಂಬದ ಸದಸ್ಯರಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ-ಉದ್ಯೋಗಿಗಳನ್ನು ಹೊಂದಿರುವ ಕುಟುಂಬಗಳು, ಮರಣ ಹೊಂದಿರುವ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೇ ಇರುವುದು ಈ ಕುಟುಂಬಗಳು ಸರ್ಕಾರದ ಮಾನದಂಡಗಳ ಅನ್ವಯ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಲು ಅರ್ಹರಾಗಿರುವುದಿಲ್ಲ.
ಈ ಮಾನದಂಡಗಳ ಪೈಕಿ ಯಾವುದೇ ಒಂದು ಅಂಶ ಕಂಡು ಬಂದರೂ ಸಾರ್ವಜನಿಕರು ತಾಲೂಕು ಕಚೇರಿಯ ಆಹಾರ ಶಾಖೆಗೆ ಮಾಹಿತಿಯನ್ನು ನೀಡತಕ್ಕದ್ದು. ಈ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಮಡಿಕೇರಿ ತಹಶೀಲ್ದಾರರು ತಿಳಿಸಿದ್ದಾರೆ.