ಕೂಡಿಗೆ, ಮಾ. 22: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಭತ್ತದ ಬೆಳೆಗೆ ಅನುಕೂಲವಾಗುವಂತೆ ಮುಖ್ಯ ನಾಲೆಗಳ ಮೂಲಕ ನೀರನ್ನು ಹರಿಸಲಾಗುತ್ತಿದೆ.

ಜಿಲ್ಲೆಯ ರೈತರು ವಾಣಿಜ್ಯ ಬೆಳೆಗಳತ್ತ ಹೆಚ್ಚು ಒಲವು ತೋರುತ್ತಿರುವುದರಿಂದ ಈ ವ್ಯಾಪ್ತಿಯ ನೂರಾರು ರೈತರು ಶುಂಠಿ ಬೆಳೆ ಬೆಳೆಯುವ ಕಾರ್ಯದಲ್ಲಿ ತೊಡಗಿದ್ದಾರೆ.

ಹಾರಂಗಿ ಜಲಾನಯನ ಅಚ್ಚುಕಟ್ಟು ಪ್ರದೇಶಗಳಾದ ಹುದುಗೂರು, ಮದಲಾಪುರ, ಕೂಡಿಗೆ, ಹೆಬ್ಬಾಲೆ, ತೂರೆನೂರು, ಶಿರಂಗಾಲ ಸೇರಿದಂತೆ ಪಕ್ಕದ ಜಿಲ್ಲೆಯಾದ ಹಾಸನ ಮತ್ತು ಮೈಸೂರು ಜಿಲ್ಲೆಯ ಪ್ರದೇಶಗಳಲ್ಲೂ ಶುಂಠಿ ಬೆಳೆ ಬೆಳೆಯಲು ತಮ್ಮ ತಮ್ಮ ಭೂಮಿಯನ್ನು ಸಿದ್ಧತೆ ಮಾಡಿ ಬಿತ್ತನೆ ಕಾರ್ಯದಲ್ಲಿ ಈ ವ್ಯಾಪ್ತಿಯ ರೈತರು ತೊಡಗಿರುವುದು ಕಂಡುಬರುತ್ತಿದೆ. ನೀರಿನ ಸಮಸ್ಯೆ ನಡುವೆ ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿಯನ್ನು ಕೊರೆಸಿ ನೀರಿನ ವ್ಯವಸ್ಥೆ ಮಾಡಿಕೊಂಡಿರುವ ದೃಶ್ಯ ಕಂಡುಬರುತ್ತಿದೆ. ಕಳೆದ ಸಾಲಿನಲ್ಲಿ ಶುಂಠಿ ಬೆಳೆಗೆ ಉತ್ತಮವಾದ ಬೆಲೆ ಬಂದುದರಿಂದ ಈ ಬಾರಿಯೂ ಉತ್ತಮ ಬೆಲೆ ಸಿಗಬಹುದು ಎಂಬ ಆಸೆಯಲ್ಲಿ ಈಗಾಗಲೇ ಈ ಪ್ರದೇಶಗಳ ನೂರಾರು ರೈತರು ಶುಂಠಿ ಬಿತ್ತನೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.