ಮಡಿಕೇರಿ, ಮಾ.23: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಟ್ಟಮುಡಿಯಲ್ಲಿ ತಾ. 19 ರಂದು ಸುಮಾರು 50 ಕಾಗೆಗಳು ಅಸಹಜವಾಗಿ ಮರಣ ಹೊಂದಿರುವ ಬಗ್ಗೆ ವರದಿಯಾಗಿದ್ದು, ಅದೇ ರೀತಿ ತಾ. 21 ರಂದು ಚೆರಿಯ ಪರಂಬುವಿನಲ್ಲಿ 4 ಕೊಕ್ಕರೆಗಳು ಮರಣಿಸಿದ ವರದಿಯಾಗಿರುತ್ತದೆ.

ಈಗಾಗಲೇ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಶುವೈದ್ಯರುಗಳು ಈ ಸ್ಥಳಕ್ಕೆ ಭೇಟಿ ನೀಡಿದ್ದು ಮರಣಿಸಿದ ಕಾಗೆಗಳು ಹಾಗೂ ಕೊಕ್ಕರೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿರುತ್ತದೆ. ಹಾಗೂ ಸತ್ತ ಪಕ್ಷಿಗಳ ಮಾದರಿಗಳನ್ನು ಸಹ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿರುತ್ತದೆ. ಪ್ರಯೋಗಾಲಯದಿಂದ ವರದಿಯ ನಿರೀಕ್ಷೆಯಲ್ಲಿದ್ದು ವರದಿ ಬಂದ ನಂತರವಷ್ಟೆ ಮುಂದಿನ ಕ್ರಮ ವಹಿಸಲಾಗುವುದು, ಸದ್ಯದ ಪರಿಸ್ಥಿತಿಯಲ್ಲಿ ಜನತೆಯು ಹಕ್ಕಿಜ್ವರದ ಬಗ್ಗೆ ಆತಂಕ ಪಡುವ /ಭಯಭೀತರಾಗುವ ಅವಶ್ಯಕತೆ ಇರುವುದಿಲ್ಲ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.