ಮಡಿಕೇರಿ, ಮಾ. 22: ರಾಜ್ಯದ 9 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೊಡಗು ಸೇರಿದಂತೆ ಈ 9 ಜಿಲ್ಲೆಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಲಾಕ್‍ಡೌನ್ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಈ ಕುರಿತಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇಂದು ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಜಿಲ್ಲೆಯಲ್ಲಿ ಲಾಕ್‍ಡೌನ್ ಸಂದರ್ಭ ಸೆಕ್ಷನ್ 144(3) ನಿರ್ಬಂಧ ಜಾರಿಯಲ್ಲಿರುತ್ತವೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಾದ ದಿನಸಿ ಸಾಮಗ್ರಿಗಳು ಹಾಲು, ಪಡಿತರ ವಸ್ತುಗಳ ಮಾರಾಟ ಕೇಂದ್ರಗಳು ಹೊರತುಪಡಿಸಿ ಇತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕಾಗುತ್ತದೆ. ಸೂಪರ್ ಮಾರ್ಕೆಟ್ ಅಥವಾ ದಿನಸಿ ಸಾಮಗ್ರಿಗಳೊಂದಿಗೆ ಇತರ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯುವಂತಿಲ್ಲ. ಕೊಡಗಿನ ಎಲ್ಲಾ ಗಡಿ ಪ್ರದೇಶಗಳನ್ನು ಕಾಸರಗೋಡು, ಕುಟ್ಟ, ಮಾಕುಟ್ಟ, ಕರಿಕೆ ಸೇರಿದಂತೆ ಬಂದ್ ಮಾಡಲಾಗುತ್ತದೆ. ಈ ಹಿಂದೆ ಅಂತರರಾಜ್ಯ ಗಡಿಗಳಲ್ಲಿ ಮಾತ್ರ ವಸ್ತುಗಳ ಸಾಗಾಟಕ್ಕೆ ನಿರ್ಬಂಧವಿದ್ದರೂ, ಇನ್ನು ಮುಂದೆ ಮಂಗಳೂರು, ಹಾಸನ ಮತ್ತು ಮೈಸೂರು ಸೇರಿದಂತೆ ಕೇಂದ್ರಗಳು ಹೊರತುಪಡಿಸಿ ಇತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕಾಗುತ್ತದೆ. ಸೂಪರ್ ಮಾರ್ಕೆಟ್ ಅಥವಾ ದಿನಸಿ ಸಾಮಗ್ರಿಗಳೊಂದಿಗೆ ಇತರ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯುವಂತಿಲ್ಲ. ಕೊಡಗಿನ ಎಲ್ಲಾ ಗಡಿ ಪ್ರದೇಶಗಳನ್ನು ಕಾಸರಗೋಡು, ಕುಟ್ಟ, ಮಾಕುಟ್ಟ, ಕರಿಕೆ ಸೇರಿದಂತೆ ಬಂದ್ ಮಾಡಲಾಗುತ್ತದೆ. ಈ ಹಿಂದೆ ಅಂತರರಾಜ್ಯ ಗಡಿಗಳಲ್ಲಿ ಮಾತ್ರ ವಸ್ತುಗಳ ಸಾಗಾಟಕ್ಕೆ ನಿರ್ಬಂಧವಿದ್ದರೂ, ಇನ್ನು ಮುಂದೆ ಮಂಗಳೂರು, ಹಾಸನ ಮತ್ತು ಮೈಸೂರು ಸೇರಿದಂತೆ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಮುಖ್ಯವಾಗಿ ದಿನಸಿ ಪದಾರ್ಥ, ಪಡಿತರ ಪದಾರ್ಥ ಹಾಲು, ತರಕಾರಿ, ಮೀನು ಹಾಗೂ ಹಣ್ಣುಗಳು ಹಾಪ್‍ಕಾಮ್ಸ್‍ನ ಮಾರಾಟ ವಸ್ತುಗಳು. ಕೃಷಿ ಹಾಗೂ ತೋಟಗಾರಿಕಾ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶವಿದೆ. ಮಾಂಸವೂ ಸೇರಿದಂತೆ ಇತರ ಯಾವುದೇ ಪದಾರ್ಥಗಳ ಮಾರಾಟಕ್ಕೆ ಅವಕಾಶವಿಲ್ಲ.

ನಗರಸಭಾ ಸೇವೆಗಳು, ವಿದ್ಯುತ್ ಸರಬರಾಜು, ನೀರು ಸರಬರಾಜು, ಬ್ಯಾಂಕ್‍ಗಳು, ಎಟಿಎಂಗಳು, ಆಂಬ್ಯುಲೆನ್ಸ್ ಟೆಲಿಕಾಂ, ಅಂಚೆ, ಪೊಲೀಸ್ , ಮಾಧ್ಯಮ ಹಾಗೂ ಎಲ್ಲಾ ಗೂಡ್ಸ್ ವಾಹನಗಳಿಗೆ ಅನುಮತಿ ಇದೆ. ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಹೊಟೇಲ್‍ಗಳಲ್ಲಿ ಕೇವಲ ಅಡುಗೆ ಕೋಣೆಗಳು ಮಾತ್ರ ತೆರೆಯಲ್ಪಟ್ಟು; ಗ್ರಾಹಕರಿಗೆ ಪಾರ್ಸಲ್ ರೂಪದಲ್ಲಿ ಆಹಾರಗಳನ್ನು ನೀಡುಬಹುದೇ ಹೊರತು ಕುಳಿತುಕೊಂಡು ಅಲ್ಲಿಯೇ ತಿನ್ನುವಂತಹ ಸೌಲಭ್ಯಕ್ಕೆ ಅವಕಾಶವಿಲ್ಲ. ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ; ತೀವ್ರ ಅನಾರೋಗ್ಯ ಸಂದರ್ಭ ಹೊರ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದರೆ; ಸಂಬಂಧಿತ ಪೊಲೀಸರಿಗೆ ಮಾಹಿತಿ ನೀಡಿ ತೆರಳಲು ಅವಕಾಶವಿದೆ. ಅಂಗಡಿಗಳಲ್ಲಿ ಪದಾರ್ಥಗಳನ್ನು ಕೊಳ್ಳುವಾಗ ಇಡೀ ಕುಟುಂಬದ ಸದಸ್ಯರು ತೆರಳಬಾರದು; 60 ವಯಸ್ಸಿಗಿಂತ ಮೇಲ್ಪಟ್ಟ ವ್ಯಕ್ತಿಗಳು, ಚಿಕ್ಕ ಮಕ್ಕಳು ತೆರಳಬಾರದು, ಕುಟುಂಬದ ಏಕ ವ್ಯಕ್ತಿ ತೆರಳಿ ಪದಾರ್ಥ ಖರೀದಿಸುವುದರಿಂದ; ಜನನಿಬಿಡತೆಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಕ್ವಾರಂಟೈನ್‍ಗೆ ಕಡ್ಡಾಯ ಕ್ರಮ

ಜಿಲ್ಲಾಧಿಕಾರಿ ಅವರು ಮಾತು ಮುಂದುವರೆಸಿ ಜಿಲ್ಲೆಯಲ್ಲಿ ಗೃಹಬಂಧನದಲ್ಲಿ ಕ್ವಾರಂಟೈನ್ ನಡೆಸುತ್ತಿರುವ ಸಂದರ್ಭ ಕೆಲವು ವ್ಯಕ್ತಿಗಳು ಮನೆಯಿಂದ ಹೊರಗೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಡಳಿತದಿಂದ ಕಡ್ಡಾಯ ಕ್ರಮ ಕೈಗೊಳ್ಳಲಾಗುತ್ತದೆ; ಈಗಾಗಲೇ ಜಿಲ್ಲೆಯಲ್ಲಿ 247 ಮಂದಿ ಗೃಹಗಳಲ್ಲಿ ಇದ್ದು; ಅವರಲ್ಲಿ ಅನೇಕ ಮಂದಿ ಗುರುತಿಗಾಗಿ ಕೈಗೆ ಸ್ಟಾಂಪ್ ಹಾಕಿಸಿಕೊಂಡಿಲ್ಲ. ಕೆಲವರಿಗೆ ಮಾತ್ರ ಸ್ಟಾಂಪ್ ಗುರುತ್ತಿದೆ. ಗುರುತಿಲ್ಲದೆ ವ್ಯಕ್ತಿಗಳ ಮನೆಗಳಿಗೆ ತೆರಳಿ ಸ್ಟಾಂಪ್ ಹಾಕಲಾಗುವುದು. ಅಲ್ಲದೇ ಅವರು ಮನೆಯಿಂದ ಹೊರ ಹೋಗುವ ಪ್ರಕರಣಗಳು ಕಂಡು ಬಂದಲ್ಲಿ; ಅಂತಹವರನ್ನು

(ಮೊದಲ ಪುಟದಿಂದ) ಮಡಿಕೇರಿಗೆ ಕರೆ ತಂದು ಇಲ್ಲಿಯೇ ಪ್ರತ್ಯೇಕ ವ್ಯವಸ್ಥೆಯಲ್ಲಿ ಇರಿಸಿ ಅವರ ಊಟೋಪಾಚಾರವನ್ನು ಆಡಳಿತದಿಂದ ನಡೆಸಲಾಗುತ್ತದೆ. ಇಂದು ಕೂಡ ಗಾಳಿಬೀಡಿನ ವ್ಯಕ್ತಿಯೊಬ್ಬರು ಇದೇ ರೀತಿ ಹೊರಗೆ ಓಡಾಡುತ್ತಿದ್ದವರನ್ನು ಕರೆ ತಂದು ಮಡಿಕೇರಿಯಲ್ಲಿ ಇರಿಸಲಾಗಿದೆ. ಜಿಲ್ಲೆಯಲ್ಲಿ ಈ ರೀತಿ ಗೃಹಬಂಧನದಲ್ಲಿ ಇರಿಸಿರುವ ವ್ಯಕ್ತಿಗಳ ಸಂಖ್ಯೆ 247ಕ್ಕೆ ತಲುಪಿದೆ.

ನಾಲ್ಕು ಮಂದಿಗೆ ನೆಗೇಟಿವ್

ಅದೇ ರೀತಿ ಪ್ರತ್ಯೇಕ ವಾರ್ಡ್‍ಗಳಲ್ಲಿ ಸುಮಾರು 9 ಮಂದಿ ಇದ್ದು; ಆ ಪೈಕಿ ಇಂದು ಜಿಲ್ಲಾಡಳಿತಕ್ಕೆ ಇಂದು ಲ್ಯಾಬ್‍ನಿಂದ ದೊರೆತ ಮಾಹಿತಿಯನ್ವಯ ನಾಲ್ಕು ಮಂದಿ ಶಂಕಿತ ಕೊರೊನಾ ವೈರಸ್ ವ್ಯಕ್ತಿಗಳ ವರದಿ ಫಲಿತಾಂಶ ನೆಗೆಟಿವ್ ಎಂದು ಬಂದಿದ್ದು; ಸಮಾಧಾನ ಉಂಟು ಮಾಡಿದೆ. ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗಳಲ್ಲಿ ಮುಂದಿನ 14 ದಿನಗಳವರೆಗೆ ಕ್ವಾರಂಟೈನ್ ನಡೆಸಲಾಗುತ್ತದೆ. ಇದೀಗ ಪ್ರತ್ಯೇಕ ವಾರ್ಡ್‍ಗಳಲ್ಲಿ ಓರ್ವ ಪಾಸಿಟಿವ್ ವ್ಯಕ್ತಿಯೂ ಸೇರಿದಂತೆ 5 ಮಂದಿ ಇದ್ದಾರೆ. ಈ ಪೈಕಿ ಇನ್ನೂ ನಾಲ್ವರ ವರದಿಯನ್ನು ನಿರೀಕ್ಷಿಸಲಾಗಿದೆ. ಆದರೆ ಈ ಸಂಖ್ಯೆ ಬದಲಾಗುತ್ತಿರುತ್ತವೆ. ಏಕೆಂದರೆ ಅನೇಕ ಮಂದಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸುತ್ತಾ; ಪಾಸಿಟಿವ್ ವ್ಯಕ್ತಿಯ ಸಂಪರ್ಕ ಹೊಂದಿದ್ದ ಬಗ್ಗೆ ತಿಳಿಸುವಾಗ ಅಂತಹವರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿ ಈ ಸಂಖ್ಯೆ ಏರುತ್ತಿರುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿಯಿತ್ತರು.

ಇದೀಗ ಸರಕಾರದ ಸೂಚನೆ ಮೇರೆಗೆ ಪಾಸಿಟಿವ್ ಹೊಂದಿದ್ದ ವ್ಯಕ್ತಿಯ ಕೊಂಡಂಗೇರಿ ಕೇತುಮೊಟ್ಟೆ ಗ್ರಾಮದಲ್ಲಿರುವ ಅವರ ಕುಟುಂಬಸ್ಥರನ್ನು ಇಲ್ಲಿಂದಲ್ಲೇ ಎಲ್ಲಾ ಪರೀಕ್ಷ್ಷಾ ಸಾಮಗ್ರಿಗಳನ್ನು ಹೊತ್ತು ಸೋಂಕು ಕುರಿತಾಗಿ ಪರೀಕ್ಷೆ ನಡೆಸಿ ಲ್ಯಾಬ್‍ಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಆ ಗ್ರಾಮದ 70 ಮಂದಿಗೆ ಕ್ವಾರಂಟೈನ್ ಮನೆಯಲ್ಲಿಯೇ ನಡೆಸಲಾಗುತ್ತಿದೆ ಎಂದರು.

2 ತಿಂಗಳ ಪಡಿತರ

ಜಿಲ್ಲೆಯಲ್ಲಿ ಕಳೆದ ಪ್ರಾಕೃತಿಕ ದುರಂತಗಳಿಗಿಂತ ಇದೀಗ ಪ್ರಸಕ್ತ ಅತೀವ ಸಂಕಷ್ಟದ ಪರಿಸ್ಥಿತಿ ಒದಗಿ ಬಂದಿದೆ. ಇದನ್ನು ಎಲ್ಲರೂ ಸೇರಿ ಎದುರಿಸುವ ಅನಿವಾರ್ಯ ಸ್ಥಿತಿ ಇದೆ. ಸರಕಾರದ ಸೂಚನೆ ಮೇರೆಗೆ ಸಾಮಾನ್ಯ ಜನರಿಗೆ ನೀಡುವ ಪದಾರ್ಥಗಳನ್ನು ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳ ಸಾಮಗ್ರಿಗಳನ್ನು ಮುಂಚಿತವಾಗಿಯೇ ನೀಡಲಾಗುತ್ತದೆ ಎಂದು ಮಾಹಿತಿಯಿತ್ತರು.

ಪಾಸಿಟಿವ್ ವ್ಯಕ್ತಿಯ ಸಂಪರ್ಕ ತಪಾಸಣೆ

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ವ್ಯಕ್ತಿಯೂ ಕೊಡಗಿನಲ್ಲಿ ಪ್ರಯಾಣಿಸಿದ ಬಸ್ ಸಂಪರ್ಕಿಸಿದ ಪ್ರದೇಶಗಳ ವ್ಯಕ್ತಿಗಳ ಬಗ್ಗೆ ಜಿಲ್ಲಾಡಳಿತದಿಂದ ತಪಾಸಣೆ ನಡೆಸಲಾಗುತ್ತಿದ್ದು; ಅನೇಕ ಮಾಹಿತಿಗಳು ಲಭ್ಯವಾಗಿದ್ದು ಅವರೆಲ್ಲರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲು ಕ್ರಮಕೈಗೊಳ್ಳಲಾಗುತ್ತದೆ. ಉಳಿದಂತೆ ವಿಮಾನದಲ್ಲಿ ಪ್ರಯಾಣ ಮತ್ತು ಬೆಂಗಳೂರಿನಲ್ಲಿ ಬಸ್‍ನಲ್ಲಿ ಆತ ಪ್ರಯಾಣಿಸಿದ ಸಂಪರ್ಕಿತ ವ್ಯಕ್ತಿಗಳ ಬಗ್ಗೆ ರಾಜ್ಯಮಟ್ಟದಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಎಸ್‍ಪಿ ಸುಮನ್ ಡಿ. ಪಣ್ಣೇಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್, ಮೆಡಿಕಲ್ ಕಾಲೇಜಿನ ಡೀನ್ ಕಾರ್ಯಪ್ಪ ಹಾಜರಿದ್ದರು.