ಮಡಿಕೇರಿ, ಮಾ. 22: ಇಂದು ಸಂಜೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಉಪಸ್ಥಿತಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಇಂದಿನ ತೀರ್ಮಾನಗಳ ಬಗ್ಗೆ ವಿವರಿಸಿದರು. ಜನರ ಓಡಾಟಕ್ಕೆ ನಿರ್ಬಂಧವಿಲ್ಲ ಕೊಡಗು ಜಿಲ್ಲೆಯಲ್ಲಿ ತಾ. 31ರವರೆಗೆ ಲಾಕ್‍ಡೌನ್ ಘೋಷಣೆಯಾಗಿದ್ದರೂ ಜನರು ಜಿಲ್ಲೆಯೊಳಗೆ ಓಡಾಡಲು ನಿರ್ಬಂಧವಿಲ್ಲ. ಆದರೂ ಸೆಕ್ಷನ್ 144 (3) ಅನ್ವಯ ಹೆಚ್ಚಿನ ಜನ ಒಂದೆಡೆ ಸೇರಬಾರದು ಹಾಗೂ ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರ ಬರಬೇಕು. ಬಸ್ ಸಂಚಾರಗಳಿಲ್ಲ ಖಾಸಗಿ ಹಾಗೂ ಸರಕಾರಿ ಬಸ್‍ಗಳು ತಾ. 31ರವರೆಗೆ ಓಡಾಡುವಂತಿಲ್ಲ; ಆದರೆ ಅಗತ್ಯ ಸಾಮಗ್ರಿಗಳ ಸಾಗಾಟ ವಾಹನಗಳಿಗೆ ನಿರ್ಬಂಧವಿಲ್ಲ.ತೋಟಗಳಲ್ಲಿ ಕೆಲಸ ಲಾಕ್‍ಡೌನ್ ಆದೇಶದಲ್ಲಿ ಕೃಷಿ ಕ್ಷೇತ್ರವನ್ನು ಹೊರತುಪಡಿಸಲಾಗಿದೆಯಾದರೂ; ತೋಟಗಳಲ್ಲಿ ಒಂದೆಡೆ ಕಾರ್ಮಿಕರು ಹೆಚ್ಚಾಗಿ ಸೇರುವ ಸಾಧ್ಯತೆ ಇರುವದರಿಂದ ಈ ಬಗ್ಗೆ ತಾ. 23 ರಂದು (ಇಂದು) ನಿರ್ಧಾರ ಕೈಗೊಳ್ಳಲಾಗುವುದು.

ಮಕ್ಕಳನ್ನು ಕರೆತರಲು ವ್ಯವಸ್ಥೆ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾದರೂ; ಹೊರ ಜಿಲ್ಲೆಗಳಲ್ಲಿರುವ ವಿದ್ಯಾರ್ಥಿಗಳನ್ನು ಕರೆತರಲು ಅವಕಾಶ ಕಲ್ಪಿಸಲಾಗಿದೆ. ಪೋಷಕರು ಜಿಲ್ಲೆಯ ಗಡಿಯಲ್ಲಿರುವ ಚೆಕ್‍ಪೋಸ್ಟ್‍ಗಳಲ್ಲಿ ಪಾಸ್‍ಗಳನ್ನು ಪಡೆದು ಪ್ರಯಾಣಿಸಬಹುದು. ವಾಪಾಸು ಬಂದಾದ ಮಕ್ಕಳ ಹಾಜರಾತಿಯಲ್ಲಿ ಪಾಸ್ ಹಿಂತಿರುಗಿಸಬೇಕು. ಮಕ್ಕಳೇ ಬರುವದಾದರೆ ಅವರ ಶಾಲೆಯ ಗುರುತಿನ ಚೀಟಿ ತೋರಿಸಿದರೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಹೊಟೇಲ್‍ಗಳಿಗೆ ಅವಕಾಶ

ಕೇವಲ ಹೊಟೇಲ್‍ಗಳನ್ನು ನಡೆಸುತ್ತಿದ್ದರೆ ಅಲ್ಲಿ ಗ್ರಾಹಕರಿಗೆ ಕೂರಲು ಅವಕಾಶ ನೀಡದೆ ಆಹಾರ ಪ್ಯಾಕೆಟ್ ನೀಡಲು ಅವಕಾಶವಿದೆ.

ಕೈಗಾರಿಕೆಗಳ ಕೆಲಸ

ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೆ ನಡೆಸುತ್ತಿರುವವರು ಒಟ್ಟು ನೌಕರರ ಶೇ. 50 ರಷ್ಟು ಪ್ರಮಾಣದಲ್ಲಿ ಪ್ರತಿದಿನ ಬದಲಿ ವ್ಯವಸ್ಥೆಯಲ್ಲಿ ಕೆಲಸ ಮಾಡಬೇಕು. ನೌಕರರ ಸಂಬಳ ಕಡಿತಗೊಳಿಸುವಂತಿಲ್ಲ, ನೌಕರರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಿಕೊಂಡಿದ್ದರೆ; ಪೊಲೀಸ್ ಇಲಾಖೆಯಿಂದ ಪರವಾನಗಿ ಪಡೆಯಬೇಕು.

ನಿವೃತ್ತ ವೈದ್ಯರಲ್ಲಿ ಮನವಿ

ಕೊರೊನಾ ಸ್ಥಿತಿ ಗಂಭೀರವಾದರೆ ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಗತ್ಯ ವ್ಯಕ್ತಿಗಳ ಅವಶ್ಯವಿರುತ್ತದೆ. ಹಾಗಾಗಿ ನಿವೃತ್ತ ವೈದ್ಯರು, ನರ್ಸ್‍ಗಳು ಹಾಗೂ ಕ್ಷೇತ್ರದ ಪರಿಣಿತರು ಸ್ವಯಂ ಆಗಿ ಸೇವೆ ಸಲ್ಲಿಸಲು ಅರ್ಜಿ ಸಲ್ಲಿಸಬಹುದು.

ಶಿಕ್ಷಕರು ಜಿಲ್ಲೆಯಲ್ಲಿರಬೇಕು

ಶಿಕ್ಷಕರಿಗೆ ರಜೆ ಘೋಷಿಸಿದ್ದರೂ ಅಗತ್ಯ ಸಂದರ್ಭಗಳಲ್ಲಿ ಅವರುಗಳ ಸೇವೆಯನ್ನು ಪಡೆಯಬೇಕಾಗಿರುವುದರಿಂದ ಜಿಲ್ಲೆ ಬಿಟ್ಟು ತೆರಳಬಾರದು.

ಖಾಸಗಿ ಆಸ್ಪತ್ರೆಗಳು ತೆರೆದಿರಬೇಕು

ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‍ಗಳು ತೆರೆದಿರಬೇಕು. ಅಗತ್ಯ ಸಂದರ್ಭದಲ್ಲಿ ಅವರ ಸೇವೆಯನ್ನು ಪಡೆಯಲಾಗುವುದು.

2 ತಿಂಗಳ ರೇಷನ್

ಜನರಿಗೆ 2 ತಿಂಗಳುಗಳ ರೇಷನ್ ಅನ್ನು ಒಂದೇ ಬಾರಿ ನೀಡಲು ಕ್ರಮಕೈಗೊಳ್ಳಲಾಗಿದೆ. ಆದರೆ ರೇಷನ್ ಪಡೆಯಲು ಮನೆಯ ಹೆಚ್ಚಿನ ಮಂದಿಗೆ ಅಂಗಡಿಗೆ ಬರಬಾರದು. ಹಿರಿಯ ನಾಗರಿಕರನ್ನು ಕಳುಹಿಸದಂತೆ ಎಚ್ಚರ ವಹಿಸಬೇಕು.

ಗ್ರಾ.ಪಂ. ವ್ಯವಸ್ಥೆ

ಕೊರೊನಾ ಸೋಂಕು ಸಂಬಂಧ ಹೆಚ್ಚಿನ ಕಾಳಜಿ ವಹಿಸಲು ಪಂಚಾಯಿತಿ ವ್ಯಾಪ್ತಿಯಲ್ಲೇ ಕ್ವಾರಂಟೈನ್ ವ್ಯವಸ್ಥೆ. ಇದರಿಂದ ಪತ್ತೆ ಕಾರ್ಯ ಸುಲಭ.

ಯಾವೆಲ್ಲ ಅಂಗಡಿಗಳಿರುತ್ತವೆ?

ಹಾಲು, ದಿನಸಿ, ವೈದ್ಯಕೀಯ, ಪತ್ರಿಕೆ, ತರಕಾರಿ, ಮೀನು, ಹಣ್ಣು, ಕೃಷಿ ಅಂಗಡಿ, ಹಾಪ್‍ಕಾಮ್ಸ್ ಅಂಗಡಿಗಳಿರುತ್ತವೆ. ಮಾಂಸದಂಗಡಿಗಳು ಬಂದ್. ಸರಕಾರಿ ಕಚೇರಿ, ಅಂಚೆಕಚೇರಿ, ವಿದ್ಯುತ್, ನೀರು, ಬ್ಯಾಂಕ್, ಎಟಿಎಂ ಇತ್ಯಾದಿಗಳು ಕಾರ್ಯನಿರ್ವಹಿಸುತ್ತವೆ. ಇಂದಿರಾ ಕ್ಯಾಂಟೀನ್ ತೆರೆದಿರುತ್ತದೆ.