ಗೋಣಿಕೊಪ್ಪಲು,ಮಾ.23: ದೇಶದಾದ್ಯಂತ ಕೊರೊನಾ ವೈರಸ್ ಮಹಾಮಾರಿ ಹರಡುತ್ತಿದ್ದಂತೆಯೇ ಸರ್ಕಾರಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಸರ್ಕಾರದ ಆದೇಶಕ್ಕೆ ತಲೆಬಾಗಿ ಬಹುತೇಕ ನಾಗರಿಕರು ತಮ್ಮ ಮನೆಗಳಿಂದ ಹೊರ ಬರುತ್ತಿಲ್ಲ. ಗೋಣಿಕೊಪ್ಪ ನಗರದಲ್ಲಿಯೂ ಮುಂಜಾನೆ ಜನಸಂಚಾರ ಎಂದಿನಂತೆ ಆರಂಭವಾಗಿತ್ತು. ದಿನಸಿ, ತರಕಾರಿ, ಹಾಲು, ಮೆಡಿಕಲ್ ಅಂಗಡಿಗಳು ತೆರೆದು ವಹಿವಾಟು ಆರಂಭಿಸಿದ್ದವು. ನಾಗರಿಕರು ಅಗತ್ಯ ವಸ್ತುಗಳನ್ನು ಪಡೆಯಲು ಮುಗಿ ಬಿದ್ದಿದ್ದರು. ಸರ್ಕಾರಿ ಕಚೇರಿಗಳಿಗೆ ತೆರಳುವ ಸಿಬ್ಬಂದಿಗಳು ವಾಹನಕ್ಕಾಗಿ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದರು.

ಸರ್ಕಾರಿ ಹಾಗೂ ಖಾಸಗಿ ಬಸ್ಸ್ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ದ್ವಿಚಕ್ರ, ಆಟೋರಿಕ್ಷಾ ಹಾಗೂ ಕಾರು, ಜೀಪುಗಳು ಸಂಚಾರ ಮಾಮೂಲಿ ಯಾಗಿತ್ತು. ಇದರಿಂದ 11 ಗಂಟೆ ಸುಮಾರಿಗೆ ನಗರದತ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವು ದನ್ನು ಗಮನಿಸಿದ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಸುರೇಶ್ ಬೋಪಣ್ಣ ನಗರದಲ್ಲಿ ತೆರೆದಿದ್ದ ಅಂಗಡಿ ಮುಂಗ ಟ್ಟುಗಳನ್ನು ಮುಚ್ಚಿಸಿ ಮುಂಜಾಗೃತ ಕ್ರಮವಾಗಿ ಜನಸಂದಣಿಯನ್ನು ತಪ್ಪಿಸಲು ಕ್ರಮ ಕೈಗೊಂಡರು.ತಮ್ಮ ಪೊಲೀಸ್ ವಾಹನದಲ್ಲಿದ್ದ ಧ್ವನಿವರ್ಧಕದ ಮೂಲಕ ನಾಗರಿಕರಿಗೆ ಅನಾವಶ್ಯಕವಾಗಿ ನಗರದಲ್ಲಿ ಸುತ್ತಾಟ ನಡೆಸದಂತೆಯೂ ಅಗತ್ಯ ಸಾಮಾಗ್ರಿ ಪಡೆಯಲು ಅಂಗಡಿ ಮುಂಗಟ್ಟುಗಳು ಸಂಜೆ 4ರಿಂದ 7ರವರೆಗೆ ತೆರೆಯುವಂತೆಯೂ ,ತೆರೆದಿರುವ ಅಂಗಡಿಯನ್ನು ಕೂಡಲೇ ಬಂದ್ ಮಾಡುವಂತೆ ಸೂಚನೆ ನೀಡಿದರು. ನಗರದಲ್ಲಿ ಓಡಾಡುತ್ತಿದ್ದ ಆಟೋ ರಿಕ್ಷಾಗಳನ್ನು ಓಡಾಟ ನಡೆಸದಂತೆ ಎಚ್ಚರಿಕೆ ನೀಡಿದರು. ಇದರಿಂದ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಟೋಗಳು ಸಂಚಾರ ಸ್ಥಗಿತಗೊಳಿಸಿದವು.

ಅಧಿಕಾರಿಗಳು ಧ್ವನಿವರ್ಧಕದ ಮೂಲಕ ಸೂಚನೆ ನೀಡುತ್ತಿದ್ದಂತೆಯೇ ಮಾರುಕಟ್ಟೆ ಆವರಣ ಮುಖ್ಯ ರಸ್ತೆಯಲ್ಲಿ ತೆರೆಯಲಾಗಿದ್ದ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸಂಪೂರ್ಣ ಬಂದ್ ಮಾಡಿದರು. ನಗರದಲ್ಲಿ ನಾಲ್ಕೈದು ಬಾರಿ ಪ್ರಚಾರ ನಡೆಸಿ ಆಯಾಕಟ್ಟಿನಲ್ಲಿ ಸೇರಿದ್ದ ಜನಸಂದಣಿಯನ್ನು ದೂರ ಸರಿಸಿದರು. ನಗರದಲ್ಲಿ ಸುತ್ತಾಟ ನಡೆಸದೆ ತಮ್ಮ ಮನೆಗಳಿಗೆ ತೆರಳುವಂತೆ ಸೂಚನೆ ನೀಡಿದರು. ನಗರದಲ್ಲಿ ಬ್ಯಾಂಕ್,ಅಂಚೆ ಕಚೇರಿ, ಚೆಸ್ಕಾಂ,ಆಸ್ಪತ್ರೆ, ಪಂಚಾಯ್ತಿ ಕೆಲಸ ನಿರ್ವಹಿಸಿದವು. ಬೆರಳೆಣಿಕೆಯ ಗ್ರಾಹಕರಷ್ಟೇ ಕಚೇರಿಯ ವ್ಯವಹಾರದಲ್ಲಿ ಪಾಲ್ಗೊಂಡಿದ್ದರು.ಮಧ್ಯಾಹ್ನದ ವೇಳೆ ವಾಹನ ಸಂಚಾರ ವಿರಳವಾಗಿತ್ತು. - ವರದಿ : ಹೆಚ್.ಕೆ. ಜಗದೀಶ್