(ವಿಶೇಷ ವರದಿ, ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಮಾ.23: ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳದ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಹುಲಿ ಸೆರೆ ಹಿಡಿಯುವ ನೆಪದಲ್ಲಿ ದಿನ ದೂಡುತ್ತಿದ್ದಾರೆ. ಹುಲಿ ಸೆರೆಗೆ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡಲ್ಲಿ ಈ ಭಾಗದಲ್ಲಿ ತೊಂದರೆ ನೀಡುತ್ತಿರುವ ಹುಲಿಯನ್ನು ಸೆರೆ ಹಿಡಿಯುವುದು ಇಲಾಖೆಗೆ ದೊಡ್ಡ ವಿಷಯವಲ್ಲ. ಇಲಾಖಾಧಿಕಾರಿಗಳ ಇಚ್ಚಾ ಶಕ್ತಿ ಕೊರತೆಯಿಂದಾಗಿ ಹುಲಿಯನ್ನು ಸೆರೆ ಹಿಡಿಯದೆ ಸಮಯ ಕಳೆಯುತ್ತಿ ದ್ದಾರೆ. ದ.ಕೊಡಗಿನಲ್ಲಿ ನಿರಂತರವಾಗಿ ರೈತರ ಜಾನುವಾರುಗಳ ಮೇಲೆ ಹುಲಿಯ ಆಕ್ರಮಣ ನಡೆಯುತ್ತಿದ್ದರೂ ಇಂತಹ ಹುಲಿಯನ್ನು ಹಿಡಿಯುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸ ಬೇಕಾದ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ..! ಒಂದು ವೇಳೆ ಹುಲಿಯನ್ನು ಸೆರೆ ಹಿಡಿದರೆ ನೂರಾರು ನಿಯಮಗಳನ್ನು ಪಾಲಿಸಬೇಕೆಂಬ ಕಾರಣದಿಂದ ಹುಲಿ ಸೆರೆಗೆ ಇಲಾಖಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸದೆ ಕೇವಲ ಜನರನ್ನು ಮೆಚ್ಚಿಸಲಷ್ಟೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಾಳೆಲೆ ದ.ಕೊಡಗಿನ ಹೋಬಳಿಯ ಕೊಟ್ಟಗೇರಿ ಹಾಗೂ ದೇವನೂರು ಗ್ರಾಮಗಳಲ್ಲಿ ಕಳೆದ ಒಂದು ವಾರದ ಹಿಂದೆ ಹುಲಿ ದಾಳಿ ನಡೆಸಿ ರೈತರಾದ ಅಳಮೇಂಗಡ ಸುರೇಶ್, ಮಾಣಿಪಂಡ ಪಾರ್ಥ, ಗೋಕುಲ ಹಾಗೂ ಸಜನ್‍ರವರ ಜಾನುವಾರುಗಳನ್ನು ಕೊಂದು ಹಾಕಿತ್ತು. ಕೆಲವು ಕರುಗಳನ್ನು ಗಂಭೀರ ಗಾಯಗೊಳಿಸಿ ಅರ್ಧದಲ್ಲೇ ಬಿಟ್ಟು ಹೋಗಿತ್ತು. ಇದರಿಂದ ಈ ಭಾಗದ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅರಮಣಮಾಡ ರಂಜನ್ ಚಂಗಪ್ಪ ಹಾಗೂ ಗ್ರಾಮಸ್ಥರು ಹುಲಿ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.
ನಾಗರಿಕರ ಒತ್ತಾಯದ ಮೇಲೆ ತಿತಿಮತಿ ಮತ್ತಿಗೋಡು ವನ್ಯ ಜೀವಿ ವಿಭಾಗದ ಸಿಬ್ಬಂದಿವರ್ಗದವರು ಜಾನುವಾರು ಅನ್ನು ಬೇಟೆಯಾಡಿದ ಸ್ಥಳದಲ್ಲಿ ಹುಲಿ ಸೆರೆಗೆ ಬೋನನ್ನು ಇಡದೆ ಇದನ್ನು ರಸ್ತೆಯ ಸಮೀಪವಿಟ್ಟು ತೆರಳಿದ್ದಾರೆ. ಇದನ್ನು ಆಕ್ಷೇಪಿಸಿ ಮಾಜಿ ಜಿ.ಪಂ. ಸದಸ್ಯರಾದ ಅರಮಣಮಾಡ ರಂಜನ್ ಚಂಗಪ್ಪ ಹಾಗೂ ಗ್ರಾಮಸ್ಥರು ಕಾರ್ಮಿಕರ ಸಹಾಯದಿಂದ ಹುಲಿ ಬೋನನ್ನು ಜಾನುವಾರು ಬಲಿ ತೆಗೆದುಕೊಂಡ ಸ್ಥಳದಲ್ಲಿಯೇ ಇರಿಸುವ ಮೂಲಕ ಹುಲಿ ಸೆರೆಗೆ ಗ್ರಾಮಸ್ಥರೆ ಪ್ರಯತ್ನ ಮಾಡಿದ್ದಾರೆ. ಆದರೆ ಬೋನಿನ ಬಾಗಿಲು ಸರಿ ಇಲ್ಲದೆ ಹುಲಿಯ ಸೆರೆ ಸಾಧ್ಯವಾಗಿಲ್ಲ.ಮುಂಜಾನೆ ಆಗಮಿಸಿದ್ದ ಅರಣ್ಯ ಸಿಬ್ಬಂದಿಗಳು ಬೋನಿನ ಬಾಗಿಲು ಸರಿಪಡಿಸಿ ತೆರಳಿದ್ದಾರೆ.
ಸಂಜೆ ಆಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ತಿತಿಮತಿ ಮತ್ತಿಗೋಡು ವನ್ಯ ಜೀವಿ ವಿಭಾಗದ ಸಿಬ್ಬಂದಿವರ್ಗದವರು ಹುಲಿ ಸೆರೆಗೆ ಪ್ರಯತ್ನಿಸುವ ಬದಲು ಹುಲಿ ಸಂಚಾರವಿರುವ ಪ್ರದೇಶದಲ್ಲಿ ಬೆದರು ಗುಂಡುಗಳನ್ನು ಸಿಡಿಸಿ ಹುಲಿಯು ಬೋನಿನತ್ತ ಸುಳಿಯದಂತೆ ಮಾಡಿದ್ದಾರೆ.! ರಾತ್ರಿ 12 ಗಂಟೆಗೆ ಗಸ್ತುವಿಗೆ ಆಗಮಿಸಿದ ಇವರು ತಾವರೆಕೆರೆ ಬಳಿಯಲ್ಲಿ ಜೀಪು ನಿಲ್ಲಿಸಿ ಪಟಾಕಿ ಸಿಡಿಸಿ ಹುಲಿಯನ್ನು ಬೆದರಿಸಿದ್ದಾರೆ. ವನ್ಯ ಜೀವಿ ವಿಭಾಗದ ಸಿಬ್ಬಂದಿಗಳು ಯಾವುದೆ ಕಾರಣಕ್ಕೂ ಹುಲಿ ಸೆರೆ ಆಗಬಾರದೆಂಬ ದೃಷ್ಠಿಕೋನದಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆಂಬುದು ಇಲ್ಲಿನ ಗ್ರಾಮಸ್ಥರ ಆರೋಪ.
ಕೊಟ್ಟಗೇರಿ ಗ್ರಾಮದಲ್ಲಿ ಗೋಕುಲ ಎಂಬವರ ಕರುವನ್ನು ಹಿಡಿದ ಜಾಗದಲ್ಲಿ ಬೋನನ್ನು ಇಡದೆ ಇದನ್ನು ಹುಲಿ ಸಂಚಾರವಿಲ್ಲದ 2 ಕಿ.ಮೀ. ದೂರದ ಮಾಪಂಗಡ ಸಜನ್ ಅವರ ಮನೆಯ ಸಮೀಪ ಇಟ್ಟು ಇಲ್ಲಿಯ ರೈತರನ್ನು ಕತ್ತಲೆಯಲ್ಲಿ ಇಡುವ ಪ್ರಯತ್ನ ಮಾಡಿದ್ದಾರೆ. ಪೊನ್ನಂಪೇಟೆ ಅರಣ್ಯ ಸಿಬ್ಬಂದಿಗಳು ಗ್ರಾಮದ ಅಳಮೇಂಗಡ ದಿನು ಮುಂದಾಳತ್ವದಲ್ಲಿ ಕೊಟ್ಟಗೇರಿ ಗ್ರಾಮದ ಸುರೇಶ್ ಎಂಬುವರ ಹೊಳೆ ಕೆರೆ ಕಾಡಿನಲ್ಲಿ ಕೂಂಬಿಂಗ್ ಮಾಡಿದಾಗ ಈ ಭಾಗದಲ್ಲಿ ಯಾವುದೇ ರೀತಿಯ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿಲ್ಲ.
ಕೊಟ್ಟಗೇರಿ ಗ್ರಾಮದ ರಾಜಮಣಿ ಎಂಬವರ ಹೊಳೆ ಕೆರೆಯಲ್ಲಿ ಮೇಯಲು ತೆರಳಿದ್ದ ಗೂಳಿಯ ಮೇಲೆ ಹುಲಿಯು ದಾಳಿ ನಡೆಸಿ ಇವುಗಳ ಮಧ್ಯೆ ಕಾಳಗ ಏರ್ಪಟ್ಟು ಗೂಳಿಯು ಗಂಭೀರ ಗಾಯಗೊಂಡು ಮನೆಯತ್ತ ಆಗಮಿಸಿದೆ. ಮನೆ ಮಾಲೀಕರು ಪಶು ವೈದ್ಯಾಧಿಕಾರಿ ಗಳಿಂದ ಗೂಳಿಗೆ ಚಿಕಿತ್ಸೆ ನೀಡಲಾ ರಂಭಿದ್ದಾರೆ. ಮಾಪಂಗಡ ಸಜನ್‍ರವರ ಹಾಲು ಕರೆಯುವ ಹಸುವನ್ನು ಗಂಭೀರ ಗಾಯ ಗೊಳಿಸಿದ ಹಿನೆÀ್ನಲೆಯಲ್ಲಿ ಹಸು ನಿತ್ರಾಣಗೊಂಡು ಮೂಖರೋಧನೆ ಅನುಭವಿಸುತ್ತಿದೆ. ಗೋಕುಲ ಅವರ ಹಸು ಕೂಡ ನೋವಿನಿಂದ ನರಳುತ್ತಿದ್ದು, ಉಳಿದ ಹಸುಗಳು ಇದರ ಸಂಕಷ್ಟವನ್ನು ನೋಡಿ ಕಣ್ಣೀರಿಡುತ್ತಿವೆ.