*ಗೋಣಿಕೊಪ್ಪ, ಮಾ. 23: ರಾಜ್ಯ ಸರ್ಕಾರ ನಿರ್ಧಾರದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗರೂಕತೆಯ ಕ್ರಮವಾಗಿ ಸೋಮವಾರದಿಂದ ಲಾಕ್‍ಡೌನ್ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರೂ ಸಹ ಸಾರ್ವಜನಿಕರು ಆದೇಶವನ್ನು ಪಾಲಿಸಲು ವಿಫಲತೆಯನ್ನು ಹೊಂದಿದ್ದರು.

ದಕ್ಷಿಣ ಕೊಡಗಿನ ಪೆÇನ್ನಂಪೇಟೆ ತಾಲ್ಲೂಕು ಮತ್ತು ವೀರಾಜಪೇಟೆ ತಾಲೂಕಿನ ಬಹುತೇಕ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರ ಓಡಾಟ ಎಂದಿನಂತೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಖಾಸಗಿ ಬಸ್ಸುಗಳು ಮತ್ತು ಸರ್ಕಾರಿ ಬಸ್ಸುಗಳ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದ್ದು, ಬಿಟ್ಟರೆ ಉಳಿದಂತೆ ಕಾರು, ಜೀಪು, ಬೈಕುಗಳ ಓಡಾಟ ಯಥೇಚ್ಛವಾಗಿ ಕಂಡುಬಂದಿತ್ತು.

ಜಿಲ್ಲಾಡಳಿತ ಆದೇಶವನ್ನು ಪರಿಗಣಿಸದ ವಾತಾವರಣ ಮೇಲ್ನೋಟಕ್ಕೆ ಗೋಚರಿಸುತ್ತಿತ್ತು. ಬಹುತೇಕ ಅಂಗಡಿಗಳು ಬೆಳಗಿನಿಂದಲೇ ತೆರೆದು ವ್ಯಾಪಾರ ವಹಿವಾಟಿಗೆ ಮುಂದಾಗಿದ್ದವು. ನಂತರ ಪೆÇನ್ನಂಪೇಟೆ ಮತ್ತು ಗೋಣಿಕೊಪ್ಪ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು ವ್ಯಾಪಾರ ನಡೆಸುತ್ತಿರುವ ಮಳಿಗೆಗಳಿಗೆ ತೆರಳಿ ಅಂಗಡಿಗಳು ಮುಚ್ಚುವಂತೆ ಮನವಿ ಮಾಡಿಕೊಂಡರು. ಹಾಲು, ಔಷಧ ಮಳಿಗೆ, ಪತ್ರಿಕೆಗಳ ಮಾರಾಟ ಅಂಗಡಿ, ಹಣ್ಣು ತರಕಾರಿ ಅಂಗಡಿಗಳು ವ್ಯಾಪಾರ ನಡೆಸಲು ಅನುವು ಮಾಡಿಕೊಡಲಾಯಿತು. ಉಳಿದಂತೆ ಇತರ ವ್ಯಾಪಾರ ಮಳಿಗೆಗಳನ್ನು ನಿರ್ಧಾಕ್ಷಿಣ್ಯವಾಗಿ ಮುಚ್ಚುವಂತೆ ಕ್ರಮ ಕೈಗೊಂಡರು.

ಪೆÇಲೀಸರು ಆದೇಶವನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವರಿಕೆ ಮಾಡಿದರು. ವಿನಾಕಾರಣ ಪಟ್ಟಣದಲ್ಲಿ ಓಡಾಡುವುದನ್ನು ಕಂಡುಬಂದ ತಕ್ಷಣ ಕ್ರಮ ಕೈಗೊಳ್ಳಲು ಮುಂದಾದರು. ಪಟ್ಟಣದಲ್ಲಿ ಅನವಶ್ಯಕ ವಾಗಿ ತೆರೆದಿದ್ದ ಬೀಡ ಅಂಗಡಿ, ಬೀಡಿ, ಸಿಗರೇಟ್, ಗುಟ್ಕಾ ಮಾರಾಟದ ಅಂಗಡಿಗಳನ್ನು ಮುಚ್ಚಿಸಿದರು.

ಗೋಣಿಕೊಪ್ಪ ಮೈಸೂರು ರಾಜ್ಯ ಹೆದ್ದಾರಿಯ ತಿತಿಮತಿ ಆನೆಚೌಕೂರು ಗೇಟಿನಲ್ಲಿ ಜಿಲ್ಲೆಗೆ ಆಗಮಿಸುವ ವಾಹನಗಳನ್ನು ತಪಾಸಣೆ ಮಾಡಲಾಯಿತು ಬೆಳಗಿನಿಂದ ಮಧ್ಯಾಹ್ನದ ತನಕ ಭದ್ರತಾ ಗೇಟನ್ನು ಮುಚ್ಚಲಾಗಿತ್ತು. ಯಾವುದೇ ವಾಹನಗಳು ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಯಿತು. ನಂತರ ಸಾರ್ವಜನಿಕರ ಒತ್ತಾಯದ ಮೇರೆಗೆ ಗಂಭೀರ ತಪಾಸಣೆಯ ನಂತರ ವಾಹನಗಳನ್ನು ಪ್ರವೇಶಿಸುವ ವ್ಯವಸ್ಥೆಗೆ ಪೆÇಲೀಸರು ಅನುಕೂಲ ಕಲ್ಪಿಸಿದರು.

ಕೊರೊನಾದ ಗಂಭೀರ ಸ್ಥಿತಿಯನ್ನು ಅರಿತಿದ್ದರೂ, ಪಾಲಿಬೆಟ್ಟ ಟಾಟಾ ಸಂಸ್ಥೆಯ ಸಿಬ್ಬಂದಿಗಳಿಗೆ ರಜೆ ನೀಡಿಲ್ಲ ಎಂದು ಸಂಸ್ಥೆಯ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಪೆÇಲೀಸ್ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಗಳ ಶಿಸ್ತು ಕ್ರಮದಿಂದ ಮಧ್ಯಾಹ್ನದ ನಂತರ ವಾಹನಗಳ ಓಡಾಟ ಒಂದಷ್ಟು ನಿಯಂತ್ರಣಕ್ಕೆ ಬಂದಿತ್ತಾದರೂ, ಬ್ಯಾಂಕ್ ಮತ್ತು ಅಂಚೆ ಕಚೇರಿ ಸೇವೆ ಇದ್ದರಿಂದ ಸಾರ್ವಜನಿಕರು ಪಟ್ಟಣಕ್ಕೆ ಬರುವುದನ್ನು ಪರಿಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ.